Hostel students protest against Syntex, toilets, cleanliness of premises, and poor food from hostel children

ಕಾರಟಗಿ : ವಿದ್ಯಾರ್ಥಿಗಳನ್ನು ಶೌಚಾಲಯ, ಆವರಣ, ಸಿಂಟೆಕ್ಸ್ ಸ್ವಚ್ಛತೆ ಮಾಡಲು ಬಳಸಿಕೊಳ್ಳುವುದಲ್ಲದೆ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಪಟ್ಟಣದ ಪೋಲಿಸ್ ಠಾಣೆ ಸಮೀಪದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿರುವ ಘಟನೆ ನಡೆದಿದೆ.
ಇಲ್ಲಿನ ವಾರ್ಡನ್ ಶಾಂತಕುಮಾರಿಯವರು ಮಕ್ಕಳಿಗೆ ದಿನನಿತ್ಯ ಕಿರುಕುಳ ನೀಡುತ್ತಿದ್ದಾರೆ. ಕಳಪೆ ಆಹಾರ ನೀಡುತ್ತಾರೆ ಪ್ರಶ್ನಿಸಿದರೆ, ಅವಾಚ್ಯ ಪದಗಳಿಂದ ನಿಂದನೆ ಮಾಡುವುದು, ಗದರಿಸುವುದು, ಶಾಲಾ ಶಿಕ್ಷಕರಿಗೆ ಇಲ್ಲಸಲ್ಲದ ಚಾಡಿ ಹೇಳಿ ಹೊಡೆಸುವುದು, ಮನೆಗೆ ಕಳಿಸುತ್ತೇನೆಂದು ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಮಕ್ಕಳು ಆರೋಪಿಸಿದರು.
ಸ್ಥಳಕ್ಕೆ ಪೊಲೀಸ್ ಇಲಾಖೆ ಹಾಗೂ ಪಾಲಕರು ಬಂದು ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಿದ್ದು, ತಾಲೂಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದೆವೆ ಎಂದಿದ್ದಾರೆ. ವಿದ್ಯಾರ್ಥಿಗಳಿಗೆ ಸಾಬೂನು ಬ್ರೇಸ್, ಪೇಸ್ಟ್ ಕಿಟ್ ಸರಿಯಾಗಿ ನೀಡುತ್ತಿಲ್ಲ, ಹಾಸ್ಟೆಲಲ್ಲಿದ್ದ ಬೃಹತಾಕಾರದ ಮರಗಳನ್ನು ಕತ್ತರಿಸಿ ಮಾರಾಟ ಮಾಡಿಕೊಂಡಿದ್ದಾರೆ. ಹಾಸ್ಟೆಲ್’ನಿಂದ ಗೋದಿ, ಅಕ್ಕಿ, ಎಣ್ಣೆ, ಬೆಳೆ, ಜೋಳ ಸೇರಿದಂತೆ ಆಹಾರ ಸಾಮಾಗ್ರಿಗಳನ್ನು ಮನೆಗೆ ಕೊಂಡೊಯ್ಯುತ್ತಾರೆ. ಮಕ್ಕಳಿಂದಲೆ ಕೆಲಸಗಳನ್ನು ಮಾಡಿಸುತ್ತಾರೆ ಎನ್ನುವ ಆರೋಪವು ಗಂಭೀರವಾಗಿ ಕೇಳಿ ಬಂದಿದೆ. ಒಂದು ತಿಂಗಳಲ್ಲಿ ಎಂಟು ಬಾರಿ ಅಧಿಕಾರಿಗಳ ಬಳಿ ವಿದ್ಯಾರ್ಥಿಗಳು ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ. ಶೌಚಾಲಯ ಸ್ವಚ್ಛತೆ ಮಾಡುವರಿಲ್ಲ ಶೌಚಾಲಯದ ಬಾಗಿಲುಗಳು ಕಿತ್ತಿಕೊಂಡು ಹೋಗಿವೆ. ಶೌಚಾಲಯ ಮತ್ತು ಸ್ನಾನ ಗೃಹಗಳಿಗೆ ವಿದ್ಯುತ್ ಸಂಪರ್ಕವಿಲ್ಲ, ದಯವಿಟ್ಟು ನಮಗೆ ಉತ್ತಮ ಆರೋಗ್ಯ ಮತ್ತು ವಾತಾವರಣ ಕಲ್ಪಿಸಿ ಇಲ್ಲವೇ ವಾರ್ಡನ್ ಅವರನ್ನು ಇನ್ನೊಂದು ಕಡೆಗೆ ವರ್ಗಾವಣೆ ಮಾಡುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರ ತವರಲ್ಲಿ ಅವರ ಇಲಾಖೆಯ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಅನಾನುಕೂಲವಾಗುತ್ತಿದ್ದು, ವಾರ್ಡನ್ ಮಾಡುವ ದಿವ್ಯ ನಿರ್ಲಕ್ಷಕ್ಕೆ ಸಚಿವರ ಹೆಸರಿಗೂ ಕಳಂಕ ಉಂಟಾಗುವ ಸಾಧ್ಯತೆ ಇದ್ದು ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ವಾರ್ಡನ್ ಅವರ ಮೇಲೆ ಶಿಸ್ತು ಕ್ರಮ ಜರುಗಿಸಿ ಇನ್ನೊಂದು ಸ್ಥಳ ವರ್ಗಾವಣೆ ಮಾಡುವ ಮೂಲಕ ಮಕ್ಕಳಿಗೆ ಭದ್ರತೆ ನೀಡಬೇಕಿದೆ.