Breaking News

ಶರಣಶ್ರೀಅಲ್ಲಮಪ್ರಭುದೇವನವರಸ್ಮರಣೋತ್ಸವ..

Memorial celebration of Sharan Sri Allama Prabhudeva..

ಜಾಹೀರಾತು
IMG 20250330 WA0019

ತಂದೆ : ನಿರಹಂಕಾರ
ತಾಯಿ : ಸುಜ್ಞಾನಿ ದೇವಿ
ಕಾಯಕ : ವಿರಕ್ತರು / ಜಂಗಮರು
ಸ್ಥಳ : ಬಳ್ಳಿಗಾವಿ (ಬಳ್ಳಿಗಾವೆ), ಶಿಕಾರಿಪುರ ತಾ, ಶಿವಮೊಗ್ಗ.
ಜಯಂತಿ : ಯುಗಾದಿ ಪಾಡ್ಯದಂದು
ಲಭ್ಯ ವಚನಗಳ ಸಂಖ್ಯೆ : ೧೬೩೬
ಅಂಕಿತ : ಗುಹೇಶ್ವರ / ಗೊಹೇಶ್ವರ

ಅಲ್ಲಮಪ್ರಭುದೇವರು ೧೨ನೆಯ ಶತಮಾನದ ವಚನಕಾರರಲ್ಲೇ ಪ್ರಸಿದ್ಧರಾದವರು. ಅತ್ಯಂತ ನೇರ ನಿಷ್ಠುರವಾದಿ. ಅನೇಕ ಶಿವಶರಣ, ಶಿವಶರಣೆಯರಿಗೆ ಭಕ್ತಿ-ವೈರಾಗ್ಯವನ್ನು ಬೋಧಿಸಿದರು. ತಮ್ಮ ವಚನಗಳ ಮೂಲಕ ಅಂತರಂಗ, ಬಹಿರಂಗಗಳನ್ನು ಶೋಧಿಸಲೆತ್ನಿಸಿದರು. ಬಳ್ಳಿಗಾವೆಯ ಹತ್ತಿರವಿರುವ ಕೋಡಿಮಠ ಕಾಳಾಮುಖ ಶೈವರ ಪ್ರಮುಖ ಕೇಂದ್ರ. ಬಳ್ಳಿಗಾವೆಯೇ ಅಲ್ಲಮಪ್ರಭುವಿನ ಜನ್ಮಸ್ಥಳ. ಅಲ್ಲಮನ ಬಾಲ್ಯದ ದಿನಗಳ ಬಗ್ಗೆಯಾಗಲೀ ತಂದೆ-ತಾಯಿಗಳ ಬಗ್ಗೆಯಾಗಲೀ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಕೆಲವು ಲಿಂಗಾಯತ ಕಾವ್ಯಗಳಲ್ಲಿ ಅಲ್ಲಮನ ತಂದೆಯ ಹೆಸರು ನಿರಹಂಕಾರನೆಂಬುವವರು. ತಾಯಿ ಸುಜ್ಞಾನದೇವಿ. ನಿರಹಂಕಾರನು ಮೂಲತಃ ಕರುವೂರಿನವರು. ಬಳ್ಳಿಗಾವೆಗೆ ಬಂದು ಅಲ್ಲಿನ ರಾಜನ ಅರಮನೆಯಲ್ಲಿ ಅಂತಃಪುರದ ಅಧಿಕಾರಿಯಾಗಿದ್ದರು. ನಿರಹಂಕಾರ ಮತ್ತು ಸುಜ್ಞಾನದೇವಿಯರಿಬ್ಬರೂ ಶಿವಭಕ್ತರಾಗಿದ್ದರು. ಅಲ್ಲಮಪ್ರಭುವು ದೇವಾಲಯದಲ್ಲಿ ಮದ್ದಳೆ ಬಾರಿಸುವವರಾಗಿದ್ದರು. ಅನಿಮಿಷಯ್ಯ / ಅನಿಮಿಷಯೋಗಿ ಇವನ ಗುರುಗಳು. ಇವರಿಂದ ಅಲ್ಲಮನಿಗೆ ಇಷ್ಟಲಿಂಗ ದೊರೆಯಿತು. ನಂತರ ಬಸವಕಲ್ಯಾಣಕ್ಕೆ ಬಂದು ಆಲ್ಲಿ ಬಸವಣ್ಣನವರ ಒಡನಾಟದಿಂದ ಅವರ ವ್ಯಕ್ತಿತ್ವ ವಿಕಾಸ ಹೊಂದಿತು. ನಂತರದಲ್ಲಿ ಬಸವಣ್ಣನವರಿಂದ ಇಷ್ಟಲಿಂಗ ದೀಕ್ಷೆ ಪಡೆದು, ಆಧ್ಯಾತ್ಮಿಕ ಸಾಧನೆಗೆ ಸಂಚಾರಗೈಯುತ್ತಾರೆ.
ಅಲ್ಲಮರ ಜೀವನ ಚರಿತ್ರೆಯನ್ನು ನಿಖರವಾಗಿ ನಿರೂಪಿಸಲು ಸಾಧ್ಯವಾಗಲಾರದಷ್ಟು ಐತಿಹ್ಯಗಳು ಆ ವ್ಯಕ್ತಿತ್ವವನ್ನು ಸುತ್ತುವರಿದಿವೆ. ಅಲ್ಲಮನ ಬಗ್ಗೆ ಹದಿಮೂರನೇ ಶತಮಾನದ ಹರಿಹರಮಹಾಕವಿಯು, ಪ್ರಭುದೇವರ ರಗಳೆಯಲ್ಲಿ ಸಾಕಷ್ಟು ವಿವರಣೆಗಳನ್ನು ನೀಡಿರುವನಾದರೂ, ಅಲ್ಲಮನ ಪ್ರಭಾವಲಯದಿಂದ ಪೂರ್ಣವಾಗಿ ಹೊರ ಬಂದು , ಒಂದು ಸಹಜ ಚಿತ್ರಣವನ್ನು ಕೊಡುವಲ್ಲಿ ಹರಿಹರನಂತಹ ವಾಸ್ತವವಾದಿ ಕವಿ ಸಹ ಸೋಲುತ್ತಾನೆ. ಇನ್ನು ಚಾಮರಸನು ಅಲ್ಲಮಪ್ರಭುದೇವನನ್ನು ಈ ಲೋಕದ ಮಾನವ ಚೇತನವೆಂದು ಒಪ್ಪಿಕೊಳ್ಳುವುದೇ ಇಲ್ಲ. ಅವನು ಕೈಲಾಸದಿಂದ ಬಂದ ಶಿವನ ಚಿತ್ಕಳೆ, ಎಂದೇ ಚಿತ್ರಿಸುತ್ತಾನೆ. ಇವರಿಬ್ಬರಲ್ಲದೆ ಯಳಂದೂರು ಹರಿಹರೇಶ್ವರನೆಂಬ ಮತ್ತೊಬ್ಬ ಕವಿಯೂ ಅಲ್ಲಮಪ್ರಭುವಿನ ಬಗ್ಗೆ ಕಾವ್ಯ ರಚನೆ ಮಾಡಿದ್ದಾನೆ. ಇನ್ನು ಚಾಮರಸನು ರಚಿಸಿರುವ ಪ್ರಭುಲಿಂಗಲೀಲೆಯು ತಮಿಳು, ಮರಾಠಿ ಮುಂತಾದ ಭಾಷೆಗಳಿಗೆ ಬಲು ಹಿಂದೆಯೇ ಅನುವಾದಗೊಂಡು ಪ್ರಖ್ಯಾತವಾಗಿದ್ದಿತು .ಈ ಮಹಾಕವಿಗಳಲ್ಲದೆ, ಅಲ್ಲಮಪ್ರಭುವಿನ ಬಗ್ಗೆ ಪ್ರಾಸಂಗಿಕವಾಗಿ ಬರೆಯದ ಲಿಂಗಾಯತ ಸಾಹಿತ್ಯವೇ ಇಲ್ಲವೆನ್ನಬಹುದು. ಇದೆಲ್ಲಕ್ಕಿಂತಲೂ ಮುಖ್ಯವಾಗಿ, ಸ್ವತಃ ಅಲ್ಲಮಪ್ರಭುವೇ ಅವರ ಕಾಲದ ಬಲುದೊಡ್ಡ ಸಾಹಿತ್ಯ ಚೇತನವಾಗಿದ್ದರೆನ್ನುವುದು, ಮತ್ತು ಅವರವೇ ಆದ ಅನೇಕ ವಚನಗಳು ಉಪಲಬ್ಧವಿರುವುದು, ಅವರ ವ್ಯಕ್ತಿತ್ವವನ್ನು ಗ್ರಹಿಸಲು ತುಂಬಾ ಉಪಯುಕ್ತ ಮಾರ್ಗವಾಗಿದೆ.
ಬಸವಣ್ಣನವರ ಕಲ್ಯಾಣಕ್ಕೆ ಬಂದ ಅಲ್ಲಮಪ್ರಭು ಅಲ್ಲಿ ಅನುಭವಮಂಟಪದ ಶೂನ್ಯಸಿಂಹಾಸನದ ಅಧ್ಯಕ್ಷರಾಗುತ್ತಾರೆ. ಅಲ್ಲಮರ ವಚನಚಂದ್ರಿಕೆಯಲ್ಲಿ ೧೬೩೬ ವಚನಗಳು ಲಭ್ಯವಾಗಿವೆ. ಅಲ್ಲಮಪ್ರಭು ತಮ್ಮ ಕೊನೆಯ ದಿನಗಳಲ್ಲಿ ಶ್ರೀಶೈಲ‍ಕ್ಕೆ ಹೋಗಿ ಅಲ್ಲಿಯ ವನದಲ್ಲಿ ಲಿಂಗೈಕ್ಯರಾದರೆಂದು ಪ್ರತೀತಿ. ಇವರ ವಚನಗಳಲ್ಲಿ ಗಹನವಾದ ಆಧ್ಯಾತ್ಮ ಹಾಗೂ ತಾತ್ವಿಕ ವಿಚಾರಗಳಿವೆ. ಅಲ್ಲಮರ ಆಧ್ಯಾತ್ಮಿಕ ಅನುಭವಗಳ ಅಸಾಮಾನ್ಯತೆಯಿಂದ ಅವರ ವಚನಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಅವರದು ಬಹುಮಟ್ಟಿಗೆ ರೂಪಕ ಭಾಷೆ. ಈ ಭಾಷೆ ಅವರ ವೈಶಿಷ್ಟ್ಯವೂ ಹೌದು.

ಇವರದೊಂದು ವಚನ:


ಬ’ ಎಂಬಲ್ಲಿ ಎನ್ನ ಭವ ಹರಿಯಿತ್ತು..
‘ಸ’ ಎಂಬಲ್ಲಿ ಸರ್ವಜ್ಞನಾದೆನು..
‘ವ’ ಎಂಬಲ್ಲಿ ವಚಿಸುವಡೆ ಚೈತನ್ಯಾತ್ಮಕನಾದೆನು..
ಇಂತೀ ಬಸವಾಕ್ಷರತ್ರಯವೆನ್ನ ಸರ್ವಾಂಗದಲ್ಲಿ ತೊಳಗಿ ಬೆಳಗುವ ಭೇದವನರಿದು ಆನೂ ನೀನೂ ‘ಬಸವಾ’ ‘ಬಸವಾ’ ‘ಬಸವಾ’ ಎನುತಿರ್ದೆವಯ್ಯಾ ಗುಹೇಶ್ವರಾ
..

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.