Training program for farmers by JSB Foundation, Kollegala.

ವರದಿ : ಬಂಗಾರಪ್ಪ .ಸಿ.
ಚಾಮರಾಜನಗರ ಜಿಲ್ಲೆಯ ಸಂತೆಮರಳ್ಳಿ ಹೋಬಳಿಯ ಹೆಗ್ಗವಾಡಿಪುರ ಗೇಟ್ ಬಳಿಯಿರುವ ಪ್ರಗತಿಪರ ಕೃಷಿಕ ಶಿವಕುಮಾರಸ್ವಾಮಿ ಅವರ ಉಗಮ ಫಾರ್ಮ್ ನಲ್ಲಿ ಆಸಕ್ತ ರೈತರಿಗೆ ‘ತೋಟಗಳ ವಿನ್ಯಾಸ ಮತ್ತು ನಿರ್ವಹಣೆ ತರಬೇತಿ’
ಕಾರ್ಯಕ್ರಮವನ್ನು ಇದೇ ಭಾನುವಾರ, 23/02/25 ರಂದು ಆಯೋಜಿಸಲಾಗಿದೆ.
ಪ್ರಗತಿಪರ ರೈತರು ಹಾಗೂ ಹಲವಾರು ಕೃಷಿ ಪ್ರಶಸ್ತಿಗಳಿಗೆ ಭಾಜನರಾಗಿರುವ ಹೆಗ್ಗವಾಡಿಪುರದ ಪಿ ಶಿವಕುಮಾರಸ್ವಾಮಿಯವರು ಸಂಪನ್ಮೂಲ ವ್ಯಕ್ತಿಗಳಾಗಿರುವರು. ಶ್ರೀಯುತರು ಮೂಲತಃ ಶಿಕ್ಷಕರಾದರೂ, ಕೃಷಿಯತ್ತ ಆಕರ್ಷಿತರಾಗಿ, ಕೃಷಿಯಲ್ಲಿ ಸುದೀರ್ಘವಾದ ಅನುಭವ ಪಡೆದು, ಹಲವಾರು ಪ್ರಯೋಗ – ಪ್ರಯತ್ನಗಳನ್ನು ಮಾಡಿ, ಯಶಸ್ಸು ಕಂಡು, ಕೃಷಿ ವಿಜ್ಞಾನಿಗಳೇ ಇವರ ಬಳಿ ಬಂದು ಕಲಿಯುವಂತೆ ಮಾಡಿದವರು. ಮಳೆಯಾಶ್ರಿತ ತೋಟ, ವಿವಿಧ ಮಾದರಿಯ ತೋಟಗಳ ವಿನ್ಯಾಸವನ್ನು ಮಾಡುತ್ತಾ, ರೈತರಿಗೆ ಮಾರ್ಗದರ್ಶನ ನೀಡುವ ಜೊತೆಗೆ ತಮ್ಮದೇ ತೋಟದಲ್ಲಿ ವೈವಿಧ್ಯಮಯ ಹಣ್ಣಿನ ಗಿಡಗಳ ನರ್ಸರಿ ಮಾಡಿಕೊಂಡು, ಕಸಿ ಮಾಡುವ ಕಲೆಯನ್ನು ಕರಗತ ಮಾಡಿಕೊಂಡು, ನರ್ಸರಿ-ಕಸಿ ಮಾಡುವುದರ ಬಗ್ಗೆ ತುಂಬಾ ಮಾಹಿತಿ ಹೊಂದಿರುವ ಸಹಜ ಕೃಷಿಕ ಶಿವಕುಮಾರಸ್ವಾಮಿಯವರದು ಹೋರಾಟದ ಜೀವನ. ಅವರೊಡನೆ ಮಾತನಾಡುತ್ತಾ, ಅನುಭವವನ್ನು ಹಂಚಿಕೊಳ್ಳುತ್ತಾ, ಇತ್ತೀಚಿನ ಕೃಷಿ ಕ್ಷೇತ್ರದ ವಿವಿಧ ತಂತ್ರಜ್ಞಾನ, ತಾಂತ್ರಿಕತೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳೋಣ..
ಕಾರ್ಯಾಗಾರದಲ್ಲಿ ಮಣ್ಣಿನ ಆರೋಗ್ಯ ನಿರ್ವಹಣೆ, ಮಣ್ಣಿನ ಜೀವಂತಿಕೆ ಉಳಿಸುವುದು, ಬೆಳೆಗಳ ಸಂಯೋಜನೆ, ಮಾದರಿ ತೋಟಗಳ ನಿರ್ಮಾಣ, ಕೃಷಿಯಲ್ಲಿ ಮಳೆ ನೀರಿನ ಸಮರ್ಪಕವಾಗಿ ಉಪಯೋಗಿಸುವ ಮಾದರಿಗಳು, ಇನ್ನಿತರ ಪ್ರಮುಖ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ.
ಪ್ರಾತ್ಯಕ್ಷಿಕೆ :
ವಿವಿಧ ಹಣ್ಣಿನ ಮರಗಳ ತೋಟದ ಸಮಗ್ರ ವೀಕ್ಷಣೆ ಜೊತೆಗೆ ಸಾಕಷ್ಟು ಉಪಯುಕ್ತ ಮಾಹಿತಿಗಳ ವಿನಿಮಯ.
ವೈವಿಧ್ಯಮಯ ಗುಣಮಟ್ಟದ, ಸಂಪೂರ್ಣ ಕಸಿ ಮಾಡಿದ ಹಣ್ಣಿನ ಗಿಡಗಳನ್ನೊಳಗೊಂಡ ಸುಂದರ ನರ್ಸರಿಯ ಅಧ್ಯಯನ.
ವಿವಿಧ ರೀತಿಯ ಕಸಿ ಮಾಡಿದ, ಬೀಜದ ಗಿಡಗಳನ್ನು ಕೊಂಡು, ಒಯ್ಯಲು ಸುವರ್ಣಾವಕಾಶ.
ತರಬೇತಿಯಲ್ಲಿ ಭಾಗವಹಿಸಲು 40 ರೈತರಿಗೆ ಮಾತ್ರ ಅವಕಾಶವಿದೆ. ಆಸಕ್ತ ರೈತ, ರೈತ ಮಹಿಳೆಯರು ಫೆ.22 ರೊಳಗಾಗಿ ಮೊ.ಸಂಖ್ಯೆ: 9880949689 ಗೆ ಸಂಪರ್ಕಿಸಿ, ಕಡ್ಡಾಯವಾಗಿ ನೋಂದಾಯಿಕೊಳ್ಳಬೇಕೆಂದು ಜೆ ಎಸ್ ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ್ ತಿಳಿಸಿದ್ದಾರೆ.