Disciplinary action for non-payment of tax arrears, Village Development Officer Suresh Chalavadi notice
ಗಂಗಾವತಿ : ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಾಕಿ ಉಳಿಸಿಕೊಂಡಿರುವ ಎಲ್ಲಾ ಸಾರ್ವಜನಿಕ ಮಳಿಗೆಗಳು, ರೈಸ್ ಮಿಲ್ ಗಳು, ನಿವೇಶನ, ನೀರಿನ ತೆರಿಗೆ ಪಾವತಿಸುಂತೆ ವಡ್ಡರಹಟ್ಟಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಚಲವಾದಿ ಅವರು ಸೂಚಿಸಿದ್ದಾರೆ.
ನವೆಂಬರ್ 30 ರಿಂದ ಕರ ವಸೂಲಾತಿ ಆಂದೋಲನ ಆರಂಭಿಸಿದ್ದು, ಈಗಾಗಲೇ ಮನೆ – ಮನೆ ಭೇಟಿ ನೀಡಿ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಲಾಗಿದೆ. ಬಾಕಿ ತೆರಿಗೆ ಪಾವತಿ ಮಾಡದವರಿಗೆ ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 200 (4) ರ ಅಡಿಯಲಿ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ.
ಹೀಗಾಗಿ ವಡ್ಡರಹಟ್ಟಿ ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಾರ್ವಜನಿಕ ಮಳಿಗೆಗಳು, ರೈಸ್ ಮಿಲ್ ಗಳು, ಪೆಟ್ರೋಲ್ ಬಂಕ್ ಗಳು, ಖಾಸಗಿ ಶಾಲೆ-ಕಾಲೇಜುಗಳು, ವಾಣಿಜ್ಯ ಆಸ್ತಿಗಳ ತೆರಿಗೆ ಸೇರಿದಂತೆ ಇತರೆ ಎಲ್ಲಾ ಸಣ್ಣ/ದೊಡ್ಡ ವ್ಯಾಪಾರಿಗಳು ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಸಹಕಾರ ನೀಡಿ ಪರವಾನಗಿ ನವೀಕರಿಸಿಕೊಳ್ಳಬೇಕು. ಸತತವಾಗಿ ಮೂರು ವರ್ಷಗಳಿಂದ ತೆರಿಗೆ ಪಾವತಿಸದೇ ಇರುವ ವಾಣಿಜ್ಯ ಮಳಿಗೆಗಳಿಗೆ, ಇನ್ನಿತರ ವಸತಿ-ನಿವೇಶನ ಕಟ್ಟಡಗಳಿಗೆ ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 200 (4) ರ ಅಡಿಯಲಿ ದಂಡ ವಿಧಿಸಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಚಲವಾದಿ ಅವರು ಎಚ್ಚರಿಸಿದ್ದಾರೆ.