Breaking News

ಪುರುಷೋತ್ತಮಾಯಣ’ ಕಾದಂಬರಿ ಬಿಡುಗಡೆ

Purushottamayana' novel released

ಕಾಲ ಕಾಲಕ್ಕೆ ರಾಮಾಯಣ ಮರುಹುಟ್ಟುಪಡೆಯುತ್ತಿರುವುದರಿಂದಲೇ ಮಹಾಕಾವ್ಯ ಸದಾ ಜೀವಂತವಾಗಿದೆ ; ಹಿರಿಯ ಚಿಂತಕ ಡಾ. ಪುರುಷೋತ್ತಮ ಬಿಳಿಮಲೆ

ಬೆಂಗಳೂರು; ರಾಮಾಯಣ ನಿಂತ ನೀರಲ್ಲ. ಸದಾ ಕಾಲ ಹರಿಯುವ ಜೀವನದಿ, ಆಯಾಭಾಷೆ, ಪ್ರದೇಶ, ಸಂಸ್ಕೃತಿಗೆ ಅನುಗುಣವಾಗಿ ನಿರಂತರವಾಗಿ ಹೊರ ರೂಪ, ಮರು ಹುಟ್ಟು ಪಡೆಯುತ್ತಿರುವುದರಿಂದಲೇ ಈ ಮಹಾಕಾವ್ಯ ತನ್ನ ಜೀವಂತಿಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಹಿರಿಯ ಚಿಂತಕ ಡಾ. ಪುರುಷೋತ್ತಮ ಬಿಳಿಮಲೆ ಪ್ರತಿಪಾದಿಸಿದ್ದಾರೆ.

ಜಾಹೀರಾತು

ನಗರದ ಒರಾಯನ್ ಮಾಲ್‍ನ ಎದುರು ಭಾಗದ ಕೆ.ಆರ್.ಡಿ.ಸಿ.ಎಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರುಷೋತ್ತಮ ದಾಸ್ ಹೆಗ್ಗಡೆ ವಿರಚಿತ ರಾಮಾಯಣ ಕಥಾ ಹಂದರದ ಎರಡು ಸಂಪುಟಗಳ ‘ಪುರುಷೋತ್ತಮಾಯಣ’ ಬಿಡುಗಡೆ ಮಾಡಿ ಮಾತನಾಡಿದ ಅವರು, 2011 ರ ಜನಗತಿ ವರದಿಯಲ್ಲಿ ದೇಶದಲ್ಲಿ 19,569 ಭಾಷೆಗಳನ್ನು ಗುರುತಿಸಲಾಗಿದ್ದು, ಬಹುಶಃ ಪ್ರತಿಯೊಂದು ಭಾಷೆಯಲ್ಲೂ ರಾಯಾಯಣ ಕೃತಿ ಹೊರ ಬಂದಿರಬಹುದು. ಕನ್ನಡದಲ್ಲೂ ಹತ್ತಾರು ರಾಮಾಯಣಗಳಿವೆ. ರಾಷ್ಟ್ರಕವಿ ಕುವೆಂಪು ಅವರ ಶ್ರೀರಾಮಯಣ ದರ್ಶನಂಗೆ ಜ್ಞಾನಪೀಠ ಪ್ರಶಸ್ತಿ ದೊರೆಯಿತು. ಮಾಜಿ ಮುಖ್ಯಮಂತ್ರಿ ಡಾ. ವೀರಪ್ಪ ಮೊಯ್ಲಿ ಅವರು “ಶ್ರೀರಾಮಾಯಣಂ ಮಹಾನ್ವೇಷಣಂ” ರಚಿಸಿದ್ದರು. ಇದೀಗ ಪುರುಷೋತ್ತಮಾಯಣ ಹೊರ ಬಂದಿದೆ ಎಂದರು.

ತುಳುಭಾಷೆಯಲ್ಲಿ ತುಳುನಾಡಿನ ರಾಮಾಯಣವಿದ್ದು, ತಮಿಳುನಾಡಿನ ರಾಮಾಯಣದಲ್ಲಿ ದ್ರೌಪದಿಯನ್ನು ವೈಭವೀಕರಿಸಲಾಗಿದೆ. ದಲಿತ ಸಮುದಾಯಕ್ಕೆ ಪ್ರತ್ಯೇಕ ರಾಮಾಯಣವಿದೆ. ಆಯಾ ಕಾಲಘಟ್ಟಕ್ಕೆ, ಸನ್ನಿವೇಶಕ್ಕೆ, ಪ್ರದೇಶಕ್ಕೆ, ಪರಿಸ್ಥಿತಿಗೆ ತಕ್ಕಂತೆ ಎಲ್ಲರನ್ನೊಳಗೊಂಡು ಈ ಮಹಾಕಾವ್ಯ ಹೊಸತನವನ್ನು ಪಡೆದುಕೊಳ್ಳುತ್ತಿದೆ. ಇಂತಹ ಮಹಾಗ್ರಂಥಗಳನ್ನು ರಚಿಸುವ ಹಕ್ಕು ಲೇಖಕರಿಗಿದೆ. ಇಲ್ಲವಾದಲ್ಲಿ ಯಾವುದೇ ಸಾಹಿತ್ಯ ಹೊಸ ಆಶಯವನ್ನು ಪಡೆಯುವುದಿಲ್ಲ. ಇಂತಹ ಸಂದರ್ಭಗಳಲ್ಲಿ ನಾವು ಸದಾ ಕಾಲ ಲೇಖಕರ ಪರ ನಿಲ್ಲಬೇಕು. ಇಲ್ಲವಾದಲ್ಲಿ ಸಾಹಿತ್ಯದಲ್ಲಿ ಕ್ರಿಯಾಶೀಲತೆ ನಶಿಸುತ್ತದೆ ಎಂದರು.

ದೆಹಲಿಯ ಜವಾಹರ್ ಲಾಲ್ ವಿಶ್ವವಿದ್ಯಾಲಯದಲ್ಲಿ ವಿಶ್ವವಿದ್ಯಾಲಯದಲ್ಲಿ ಹಿರಿಯ ಸಾಹಿತಿ ಎ.ಕೆ. ರಾಮಾನುಜಂ ಅವರ ರಾಮಾಯಣವನ್ನು ಪಠ್ಯ ಮಾಡುವುದನ್ನು ಎಬಿವಿಪಿ ಕಾರ್ಯಕರ್ತರು ವಿರೋಧಿಸಿ ಪ್ರತಿಭಟನೆ ಮಾಡಿದರು. ಇದರಿಂದ ರಾಮಾನುಜಂ ಅವರಂತಹ ವಿಶ್ವಮಾನ್ಯ ಕವಿಯ ಚಿಂತನೆಯ ಮೂಸೆಯಲ್ಲಿ ಮೂಡಿ ಬಂದಿದ್ದ ಸಾಹಿತ್ಯವನ್ನು ಅಧ್ಯಯನ ಮಾಡುವ ಅವಕಾಶ ನಮ್ಮ ವಿದ್ಯಾರ್ಥಿಗಳಿಗೆ ಇಲ್ಲವಾಯಿತು. ಹೀಗಾಗಿ ರಾಮಾಯಣದ ಬಗ್ಗೆ ಕೃತಿ ಬರೆಯಲು ನಿಮಗೆ ಯಾರು ಅಧಿಕಾರ ಕೊಟ್ಟರು ಎಂದು ಕೇಳುವವರಿಗೆ, “ನಮ್ಮನ್ನು ಪ್ರಶ್ನಿಸಲು ನಿಮಗೆ ಅಧಿಕಾರ ಕೊಟ್ಟವರು ಯಾರು” ಎಂದು ಮರು ಪ್ರಶ್ನಿಸಬೇಕಾಗುತ್ತದೆ ಎಂದು ಡಾ. ಪುರುಷೋತ್ತಮ್ ಬಿಳಿಮಲೆ ಹೇಳಿದರು.

ಹಿರಿಯ ಚಿಂತಕ ಡಾ.ಜಿ.ರಾಮಕೃಷ್ಣ ಮಾತನಾಡಿ, ವಾಲ್ಮೀಕಿ ರಾಮಾಯಣದಲ್ಲಿ ಸಮುದ್ರರಾಜನನ್ನು ಹೆದರಿಸುವ ರಾಮನ ಚಿತ್ರಣ ಭೀಕರವಾಗಿದೆ. ವಾಲ್ಮೀಕಿಗೆ ಆಶ್ರಮದಲ್ಲಿ ವಶಿಷ್ಟರು ದನದ ಮಾಂಸವನ್ನು ಆಹಾರವಾಗಿ ನೀಡುತ್ತಿದ್ದರು. ಆದರೆ ಆಧುನಿಕ ಯುಗದಲ್ಲಿ ದನದ ಮಾಂಸದ ಬಗ್ಗೆ ಚರ್ಚೆ ನಡೆಯುತ್ತಿದೆ. ವಿಜ್ಞಾನವನ್ನು ಹೇಗೆ ಬಳಸಿಕೊಳ್ಳುತ್ತೆವೋ ಅದೇ ರೀತಿ ಸಾಹಿತ್ಯದಲ್ಲೂ ವೈಜ್ಞಾನಿಕತೆಯನ್ನು ಬಳಸಿಕೊಳ್ಳುವುದು ಅಗತ್ಯ. ಸಾಹಿತ್ಯದ ಸತ್ಯವನ್ನು ವೈಜ್ಞಾನಿಕವಾಗಿ ಹಾಗೂ ಬಿನ್ನವಾಗಿ ನೋಡಬೇಕು ಎಂದರು.

ಲೇಖಕ ಪುರುಷೋತ್ತಮ್ ದಾಸ್ ಹೆಗಡೆ ಮಾತನಾಡಿ, ವಾಲ್ಮೀಕಿ ರಾಮಾಯಣ ಸಹಸ್ರಾರು ಭಿನ್ನ, ವಿಭಿನ್ನ ರಾಮಾಯಣಗಳ ರಚನೆಗೆ ಸ್ಪೂರ್ತಿಯಾಗಿದ್ದಾರೆ. ಇನ್ನೂ ಸಾವಿರಾರು ವರ್ಷಗಳವರೆಗೆ ರಾಮಾಯಣ ಹೊಸ ಆಯಾಮದೊಂದಿಗೆ ಹೊರ ಬರುತ್ತಲೇ ಇರುತ್ತದೆ. ಸಣ್ಣ ವಯಸ್ಸಿನಿಂದಲೂ ರಾಯಾಯಣದ ಬಗ್ಗೆ ಒಲವು ಬೆಳೆಸಿಕೊಂಡು ವ್ಯಾಪಕ ಅಧ್ಯಯನ, ವಿಶ್ಲೇಷಣೆಗಳನ್ನು ನಡೆಸಿದ ಪರಿಣಾಮ ಇಂದು ಕೃತಿಯ ರೂಪದಲ್ಲಿ ತಮ್ಮ ಕನಸು ನನಸಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಕೃಷ್ಣಪ್ಪ, ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ, ಕಾರ್ಯದರ್ಶಿ ಸಿ ಸತ್ಯನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

About Mallikarjun

Check Also

screenshot 2025 07 30 13 52 28 88 6012fa4d4ddec268fc5c7112cbb265e7.jpg

ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ “ಗ್ರೀನ್ ಕ್ಯಾಂಪಸ್ ಕ್ಲೀನ್ ಕ್ಯಾಂಪಸ್” ಉದ್ಘಾಟನಾ ಕಾರ್ಯಕ್ರಮ.

The inauguration program of "Green Campus Clean Campus" was successfully held at Christaraja Educational Institution. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.