The Primary School Teachers Association is a model for the state by working in a unique way through free training, Minister Shivraj Thangadagi
ಕನಕಗಿರಿ: ‘ಸಂಘದ ನಡೆ, ಶಾಲೆಯ ಕಡೆಗೆ’, ಸರ್ಕಾರಿ ಶಾಲೆಗಳಿಗೆ ಸ್ಪರ್ಧಾತ್ಮಕ ಡೈಜಿಸ್ಟ್ ವಿತರಣೆ ಹಾಗೂ ಪ್ರವೇಶ ಪರೀಕ್ಷೆಗೆ
ಉಚಿತ ತರಬೇತಿ ನೀಡುವ ಮೂಲಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವಿಶಿಷ್ಟ ರೀತಿಯಲ್ಲಿ ಕೆಲಸ ಮಾಡುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ಜಿಲ್ಲಾ ಪಂಚಾಯತಿ, ಶಾಲಾ ಶಿಕ್ಷಣ ಇಲಾಖೆ ಕೊಪ್ಪಳ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ ಗಂಗಾವತಿ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಸಹಯೋಗದಲ್ಲಿ ಶನಿವಾರ ಇಲ್ಲಿನ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ
ತಾಲ್ಲೂಕು ಮಟ್ಟದ ಶೈಕ್ಷಣಿಕ ಕಾರ್ಯಾಗಾರ, ಎನ್ಎಂಎಂಎಸ್ , ನವೋದಯ, ಮೊರಾರ್ಜಿ ದೇಸಾಯಿ ಇತರೆ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಯ ಉಚಿತ ತರಬೇತಿ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ಜತೆಗೆ ಸಂಘ-ಸಂಸ್ಥೆಗಳು
ಕೈ ಜೋಡಿಸಿದಾಗ ಮಾತ್ರ
ಸರ್ಕಾರಿ ಶಾಲೆಗಳು ಮತ್ತಷ್ಟು ಸಬಲೀಕರಣಗೊಳ್ಳುತ್ತವೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಹತ್ತಾರು ಮೊರಾರ್ಜಿ ದೇಸಾಯಿ ಶಾಲೆ ಹಾಗೂ ವಸತಿ ನಿಲಯ ಸ್ಥಾಪಿಸಲು ಯೋಜಿಸಲಾಗಿದೆ, ಈಗಾಗಲೆ
ಪಟ್ಟಣಕ್ಕೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ,
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಸತಿ ನಿಲಯ ಸ್ಥಾಪಿಸಲಾಗುತ್ತಿದೆ,
ನವಲಿ ಗ್ರಾಮಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಂಜೂರು ಆಗಿದ್ದು ₹.22 ಕೋಟಿ ರೂಪಾಯಿ ಬಿಡುಗಡೆಯಾಗಿದೆ
ಶ್ರೀರಾಮನಗರಕ್ಕೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯ ಮಂಜೂರಿಯಾಗಿದೆ ಎಂದು ತಿಳಿಸಿದರು.
ಕ್ಷೇತ್ರದ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಸೇರಿದಂತೆ ಶೈಕ್ಷಣಿಕ ಹಾಗೂ ಮೂಲ ಸೌಲಭ್ಯ ಕಲ್ಪಿಸಲು ಅಕ್ಷರ ಆವಿಷ್ಕಾರ ಯೋಜನೆಯಲ್ಲಿ ₹. 13.36 ಕೋಟಿ ಮಂಜೂರು ಆಗಿದ್ದು ಕಾಮಗಾರಿಗೆ ಅನುಮೋದನೆ ದೊರೆತ ನಂತರ ಕೆಲಸ ಆರಂಭಿಸಲಾಗುವುದು ಎಂದರು.
ಎಸ್. ಎಸ್. ಎಲ್.ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಕರು ಒತ್ತು ನೀಡಿ ವಿವಿಧ ಯೋಜನೆಗಳನ್ನು ರೂಪಿಸಬೇಕು, 2025ರ ಸಾಲಿನ ಫಲಿತಾಂಶ ರಾಜ್ಯದ ಗಮನ ಸೆಳೆಯಬೇಕೆಂದು ಹೇಳಿದರು.
ಲೇಖಕ ವಿ. ವಿ.ಗೊಂಡಬಾಳ ಮಾತನಾಡಿ ವಿದ್ಯಾರ್ಥಿಗಳು ‘ಡಿ’ ಗ್ರೂಪ್ ಹುದ್ದೆ ಹೊರತು ಪಡಿಸಿ ಎಲ್ಲಾ ನೌಕರಿ ಗಿಟ್ಟಿಸಿಕೊಳ್ಳಬೇಕಾದರೆ ಸಿಇಟಿ ಹಾಗೂ ಟಿಇಟಿ ಗಳಂತ ಸಾಮಾನ್ಯ ಪ್ರವೇಶ ಪರೀಕ್ಷೆ
ಯನ್ನು ಎದುರಿಸುವಂತಾಗಿದೆ ಈ ನಿಟ್ಟಿನಲ್ಲಿ ವಿದ್ಯಾರ್ಥಿ ದೆಸೆಯಿಂದಲೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದು ಅನಿವಾರ್ಯ ಹಾಗೂ ಅವಶ್ಯಕವಾಗಿದೆ, ಈ ಕೆಲಸಕ್ಕೆ
ಶಿಕ್ಷಕರ ಸಂಘ ಬುನಾದಿ ಹಾಕುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ತಿಳಿಸಿದರು.
ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ
ಶಂಶಾದಬೇಗಂ ಮಾತನಾಡಿ ಎಪ್ರಿಲ್ – 2006ರ ನಂತರ ನೇಮಕಗೊಂಡಿರುವ
ಸರ್ಕಾರಿ ನೌಕರರ ಭವಿಷ್ಯಕ್ಕೆ ಕಂಟಕವಾಗಿರುವ ನೂತನ ಪಿಂಚಣಿ ಯೋಜನೆಯನ್ನು ರದ್ದು ಪಡಿಸಿ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕೆಂದು ಒತ್ತಾಯಿಸಿದರು.
2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮುಂಚೆ ನೇಮಕಾತಿಗೊಂಡವರಿಗೆ ಪೂರ್ವಾನ್ವಯಗೊಳಿಸಿದರೆ ಪ್ರಾಥಮಿಕ ಶಾಲಾ ಸೇವಾ ನಿರತ ಶಿಕ್ಷಕರಿಗೆ ಅನ್ಯಾಯವಾಗಲಿದೆ, ಸರ್ಕಾರ ಸರಿಪಡಿಸುವ ಕೆಲಸ ಮಾಡಬೇಕೆಂದು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಶರಣಬಸನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ತಹಶೀಲ್ದಾರ್
ವಿಶ್ವನಾಥ ಮುರುಡಿ,
ಬಿಇಒ ವೆಂಕಟೇಶ,
ತಾಲ್ಲೂಕು ಪಂಚಾಯಿತಿ ಪ್ರಭಾರ ಇಒ ರಾಜಶೇಖರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಉಪ ಪ್ರಾಂಶುಪಾಲ ಜಗದೀಶ ಹಾದಿಮನಿ, ಮುಖ್ಯ ಶಿಕ್ಷಕರಾದ ಎಸ್. ಶಿವಕುಮಾರ, ತುಳಜಾ ನಾಯಕ, ಸಂಘದ ಗೌರವಾಧ್ಯಕ್ಷ ಶೇಖರಯ್ಯ ಕಲ್ಮಠ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಶಿರಿಗೇರಿ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ. ಗಂಗಾಧರಸ್ವಾಮಿ, ಜಿ.ಪಂ ಮಾಜಿ ಸದಸ್ಯ ವೀರೇಶ ಸಮಗಂಡಿ,
ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ರಮೇಶ ನಾಯಕ, ದಲ್ಲಾಳಿ ವರ್ತಕರ ಸಂಘದ ಅಧ್ಯಕ್ಷ ಮಹಾಂತೇಶ ಸಜ್ಜನ್, ಜಿಲ್ಲಾ ಪಂಚಾಯಿತಿ ಕೆಡಿಪಿ ಸದಸ್ಯ ನಾಗಪ್ಪ ಹುಗ್ಗಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಸಂಗಪ್ಪ ಸಜ್ಜನ್, ರಾಜಾಸಾಬ ನಂದಾಪುರ, ಶರಣೆಗೌಡ ಪಾಟೀಲ,
ಪ್ರಮುಖರಾದ
ಸಿದ್ದಪ್ಪ ನೀರ್ಲೂಟಿ, ಬಸಂತಗೌಡ, ವಾಗೀಶ ಹಿರೇಮಠ, ಸಣ್ಣ ಕನಕಪ್ಪ ಇತರರು ಇದ್ದರು.
ಗೀತಾ ಹಂಚಾಟೆ ಪ್ರಾರ್ಥಿಸಿದರು. ಜಗದೀಶ ಟಿ.ಎಸ್. ಸ್ವಾಗತಿಸಿದರು. ಪವಿತ್ರಾ ಹಾಗೂ ವಿನೋದ ನಿರೂಪಿಸಿದರು.
ಇದೇ ಸಮಯದಲ್ಲಿ ಕಳೆದ ಸಾಲಿನ ಎನ್ ಎಂಎಂಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು, ತರಬೇತಿ ನೀಡಿದ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.