Breaking News

ಪಾಮನಕಲ್ಲೂರು: ಗಬ್ಬೆದ್ದು ನಾರುತ್ತಿರುವ ಚರಂಡಿಗಳು; ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

Pamanakallur: Stinking drains; Officers sitting with eyes closed

ಜಾಹೀರಾತು
IMG 20240810 WA0204 169x300

ರಾಯಚೂರು (ಆ.09): ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ವಾರ್ಡ್ ನಂಬರ್ ಒಂದು ಮತ್ತು ಎರಡರಲ್ಲಿನ ಅನೇಕ ಕಡೆಗಳಲ್ಲಿ ಚರಂಡಿಗಳು ಕೊಳಚೆ ನೀರಿನಿಂದ, ಕಸದಿಂದ ತುಂಬಿ ಗಬ್ಬೆದ್ದು ನಾರುತ್ತಿದ್ದು, ಅಧಿಕಾರಿಗಳು ಮಾತ್ರ ಸರಿಪಡಿಸುವ ಕೆಲಸ ಮಾಡುತ್ತಿಲ್ಲ ಎಂಬ ಆರೋಪವನ್ನು ಗ್ರಾಮಸ್ಥರು ಮಾಡಿದ್ದಾರೆ.
ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿರುವ ಚರಂಡಿ ಪತ್ತಾರ್ ಮಾನಯ್ಯರವರ (ಕುರುಡಿಯವರ ಜಿನ್ನ) ಮನೆಯ ಹತ್ತಿರ ಕೊಳಚೆ ನೀರು ಮತ್ತು ಕಸದಿಂದ ತುಂಬಿ ಗಬ್ಬೆದ್ದು ನಾರುತ್ತಿದೆ. ಇನ್ನೂ ಗ್ರಾಮದ ಎರಡನೇ ವಾರ್ಡನ್ ನಲ್ಲಿ ಬರುವ ಅರಕೇರಿ ಮಲ್ಲಪ್ಪರವರ ಮನೆಯ ಹತ್ತಿರದ (ನೀರಿನ ಟ್ಯಾಂಕ್ ಹತ್ತಿರ) ಚರಂಡಿ, ಕಟ್ಟಿ ದುರುಗಮ್ಮ ಮಂದಿರದ ಹತ್ತಿರದ ಚರಂಡಿ ಸೇರಿದಂತೆ ಅನೇಕ ಕಡೆಗಳಲ್ಲಿ ಚರಂಡಿಗಳು ಕೊಳಚೆ ನೀರು ಹಾಗೂ ಕಸದಿಂದ ತುಂಬಿವೆ.
ಇದರಿಂದ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುವ ಜನರು ನೆಮ್ಮದಿಯಿಂದ ಇರಲು ಆಗುತ್ತಿಲ್ಲ. ಒಂದು ಕಡೆ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಮತ್ತೊಂದು ಕಡೆ ಚರಂಡಿಯ ಗಬ್ಬು ನಾತ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೇ ಸಾಂಕ್ರಾಮಿಕ ರೋಗಗಳಿಗೆ ಬಲಿಯಾಗುವ ಆತಂಕ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ನಾವು ಕಳೆದ ಕೆಲ ದಿನಗಳ ಹಿಂದೆ ಪಾಮನಕಲ್ಲೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿರುವ ಕೃಷ್ಣ ಹುನಗುಂದರವರಿಗೆ ಪತ್ತಾರ್ ಮಾನಯ್ಯರವರ ಮನೆಯ ಹತ್ತಿರದ ಚರಂಡಿ ಸ್ವಚ್ಛಗೊಳಿಸುವಂತೆ ಮನವಿ ಮಾಡಿದ್ದೇವು.
ಆದರೇ ಇಲ್ಲಿಯವರೆಗೂ ಪಿಡಿಒರವರು ಚರಂಡಿ ಸ್ವಚ್ಛಗೊಳಿಸುವ ಕೆಲಸ ಮಾಡಿಲ್ಲ. ನಮ್ಮಲ್ಲಿನ ಸಮಸ್ಯೆಯ ಬಗ್ಗೆ ಸಂಬಂಧಿಸಿದ ಗ್ರಾಮ ಪಂಚಾಯತಿ ಸದಸ್ಯರಿಗೆ ತಿಳಿಸಿದ್ದೇವೆ. ಅವರು ಮೂಗು ಮುಚ್ಚಿಕೊಂಡು ಓಡಾಟ ಮಾಡುತ್ತಿದ್ದಾರೆ. ಆದರೆ ಚರಂಡಿ ಸ್ವಚ್ಛಗೊಳಿಸುತ್ತಿಲ್ಲ ಎಂದು ಗ್ರಾಮದ ನಾಗು ಪತ್ತಾರ್ ಎಂಬ ಯುವಕ ಬೇಸರ ವ್ಯಕ್ತಪಡಿಸಿದ್ದಾರೆ.
ಗ್ರಾಮದ ವಾಟ್ಸಾಪ್ ಗ್ರುಪ್ ಗಳಲ್ಲಿ ಕೂಡ ಗ್ರಾಮ ಪಂಚಾಯತಿ ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ಗ್ರುಪ್ ನಲ್ಲಿರುವ ಗ್ರಾಮ ಪಂಚಾಯತಿ ಸದಸ್ಯರಾಗಲಿ, ಸಂಬಂಧಿಸಿದವರಾಗಲಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಇದರಿಂದ ನಮಗೆ ಬೇಸರವಾಗುತ್ತಿದೆ. ನಾವು ಪ್ರತಿನಿತ್ಯ ಸೊಳ್ಳೆ ಕಚ್ಚಿಸಿಕೊಂಡು, ಚರಂಡಿಯ ಗಬ್ಬು ನಾತ ಕುಡಿದುಕೊಂಡು ಜೀವನ ಮಾಡುವಂತಾಗಿದೆ ಎಂದು ಗ್ರಾಮ ಪಂಚಾಯತಿ ಆಡಳಿತ ವ್ಯವಸ್ಥೆಯ ವಿರುದ್ಧ ನಾಗು ಪತ್ತಾರ್, ಭಾಗಿರಥಿ ಪತ್ತಾರ್, ಅಂಬಮ್ಮ ಹೊನ್ನಳ್ಳಿ, ಪಾರ್ವತೆಮ್ಮ ಹೊನ್ನಳ್ಳಿ, ರತ್ನಮ್ಮ ಜಿನ್ನದ್, ರೂಪಮ್ಮ ಸಾನಬಾಳ್, ಮಲಕ್ಕಮ್ಮ ಅಂಗಡಿ, ನಾಗೇಶ್ ಅಂಗಡಿ, ಶರಣಪ್ಪ ದಿದ್ದಗಿ, ಗೂಳಪ್ಪ ಕುರುಡಿ ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮೂರಿನಲ್ಲೇ ಗ್ರಾಮ ಪಂಚಾಯತಿ ಇದೆ. ಪಂಚಾಯತಿ ವ್ಯಾಪ್ತಿಯಲ್ಲಿ ಬೆಟ್ಟದಷ್ಟು ಸಮಸ್ಯೆಗಳಿವೆ. ಸಮಸ್ಯೆಗಳನ್ನು ಪರಿಹರಿಸುವಂತೆ ನಾವು ಅನೇಕ ಬಾರಿ ಪಿಡಿಒ, ಇಒ, ಸಿಇಒಗಳಿಗೆ ಮನವಿ ಸಲ್ಲಿಸಿದ್ದೇವೆ. ಸಂಬಂಧಿಸಿದವರು ಯಾವ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ನೀಡಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ್ ಶೆಟ್ಟಿ ಬಣ) ಪಾಮನಕಲ್ಲೂರು ಹೋಬಳಿ ಘಟಕದ ಅಧ್ಯಕ್ಷ ರಮೇಶ್ ಗಂಟ್ಲಿ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಚೌಡ್ಲಿ ಸೇರಿದಂತೆ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ.
ಸದಾಕಾಲವೂ ಒಂದಲ್ಲಾ ಒಂದು ರೀತಿಯ ಸಮಸ್ಯೆಗಳಿಂದ ಸುದ್ದಿಯಲ್ಲಿರುವ ಪಾಮನಕಲ್ಲೂರು ಗ್ರಾಮ ಪಂಚಾಯತಿಗೆ ಅನೇಕ ಜನ ಪಿಡಿಒಗಳು ಬಂದು ಹೋಗಿದ್ದಾರೆ. ಆದರೆ ಯಾರೊಬ್ಬರೂ ಕೂಡ ಗ್ರಾಮಸ್ಥರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಿಲ್ಲವೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿದೆ.
ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ಗ್ರಾಮಸ್ಥರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಲಿ. ಜನರು ನೆಮ್ಮದಿಯಿಂದ ಜೀವನ ನಡೆಸುವಂತೆ ಮಾಡಲಿ. ಪದೇಪದೇ ಗ್ರಾಮ ಪಂಚಾಯತಿ ಕಛೇರಿಗೆ ಅಲೆದಾಡುವುದನ್ನು ತಪ್ಪಿಸಲಿ ಎಂಬುದು ಈ ವರದಿಯ ಆಶಯವಾಗಿದೆ.

About Mallikarjun

Check Also

vakratunda cinema teaser bidugade (2)

“ವಕ್ರತುಂಡ” ಚಲನಚಿತ್ರದಟೀಸರ್ ಬಿಡುಗಡೆ

Teaser of the movie “Vakratunda” released “ವಕ್ರತುಂಡ” ಚಲನಚಿತ್ರದಟೀಸರ್ ಬಿಡುಗಡೆ ಬೆಂಗಳೂರು: ಲೋಚನ ಕ್ರಿಯೇಶನ್ಸ್ಅವರ “ವಕ್ರತುಂಡ” ಗ್ಯಾಂಗ್ಸ್ಆಫ್ ಸುಲ್ತಾನ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.