
ಗಂಗಾವತಿ: ಕರ್ನಾಟಕ ಪ್ರಗತಿಪರ ಕಟ್ಟಡ ಕಾರ್ಮಿಕರ ಸಂಘಟನೆಯು ಕಾರ್ಮಿಕ ಮಂಡಳಿಯಲ್ಲಿ ನಡೆಯುತ್ತಿರುವ ಅವ್ಯವಹಾರದ ಕುರಿತು ಜೂನ್-೨೮ ರಿಂದ ಜುಲೈ-೦೩ ರವರೆಗೆ ರಾಜ್ಯಾಧ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಅದರ ಭಾಗವಾಗಿ ಗಂಗಾವತಿಯಲ್ಲಿ ಇಂದು ಜುಲೈ-೦೨ ರಂದು ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆ ಹಾಗೂ ಸಮಸ್ಯೆಗಳ ಇತ್ಯರ್ಥಕ್ಕಾಗಿ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಪ್ರತಿಭಟನೆ ಮೂಲಕ ಒತ್ತಾಯಿಸಲಾಯಿತು ಎಂದು ಕರ್ನಾಟಕ ಪ್ರಗತಿಪರ ಕಟ್ಟಡ ಕಾರ್ಮಿಕರ ಸಂಘಟನೆಯ ಗಂಗಾವತಿ ತಾಲೂಕ ಅಧ್ಯಕ್ಷರಾದ ಚಾಂದ್‌ಪಾಷಾ ಪ್ರಕಟಣೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಹೋರಾಟಗಾರ ಭಾರಧ್ವಾಜ್ ಮಾತನಾಡಿ, ಕಟ್ಟಡ ಕಾರ್ಮಿಕರ ಮಂಡಳಿಯಲ್ಲಿ ಕಾರ್ಮಿಕರಿಗಾಗಿ ಸೆಸ್ ಸಂಗ್ರಹದ ಹಣವನ್ನು ಸರ್ಕಾರಗಳು ಬೇರೆ ಬೇರೆ ಇಲಾಖೆಗಳಿಗೆ ಬಳಸಿಕೊಳ್ಳುತ್ತಿರುವುದು ತೀವ್ರ ಖಂಡನೀಯ. ಕಟ್ಟಡ ಕಾರ್ಮಿಕರಿಗಾಗಿ ಮೀಸಲಿಟ್ಟ ಸೆಸ್ ಮೊತ್ತವನ್ನು ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗಾಗಿಯೇ ಬಳಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಹಾಗೆಯೇ ಸಿ.ಪಿ.ಐ.ಎಂ.ಎಲ್ ಜಿಲ್ಲಾ ಕಾರ್ಯದರ್ಶಿಯಾದ ವಿಜಯ ದೊರೆರಾಜು ಮಾತನಾಡಿ, ಕಟ್ಟಡ ಕಾರ್ಮಿಕರ ಮಂಡಳಿಯಲ್ಲಿ ಬೋಗಸ್ ಕಾರ್ಡ್ಗಳು ಅಧಿಕವಾಗಿದ್ದು, ಸರ್ಕಾರಿ ನೌಕರರು, ಖಾಸಗಿ ನೌಕರರು, ವಿದ್ಯಾರ್ಥಿಗಳು, ಗೃಹಿಣಿಯರ ಹೆಸರಿನಲ್ಲಿ ಕಟ್ಟಡ ಕಾರ್ಮಿಕರ ಕಾರ್ಡ್ಗಳು ನೋಂದಣಿಯಾಗಿದ್ದು, ಸರ್ಕಾರ ಕೂಡಲೇ ತನಿಖೆ ನಡೆಸಿ, ಬೋಗಸ್ ಕಾರ್ಡ್ಗಳನ್ನು ರದ್ದುಪಡಿಸಿ, ಅರ್ಹ ಕಟ್ಟಡ ಕಾರ್ಮಿಕರಿಗೆ ನ್ಯಾಯದೊರಕಿಸಿಕೊಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎ.ಐ.ಸಿ.ಸಿ.ಟಿ.ಯು ಜಿಲ್ಲಾಧ್ಯಕ್ಷ ಸಣ್ಣ ಹನುಮಂತಪ್ಪ ಹುಲಿಹೈದರ್, ಸಂಘಟನೆಯ ಪದಾಧಿಕಾರಿಗಳಾದ ಮಹೆಬೂಬಸಾಬ ಲಾಟಿ, ಹನುಮಂತ ಚೌಡಪ್ಪ, ವಿರೇಶ ಮಂಡಿ, ಶಶಿಕಲಾ ಮಂಡಿ, ಈರಮ್ಮ ಮಂಡಿ, ನೀಲಮ್ಮ ಪೂಜಾರ, ರಸೂಲ್ ಟೈಲ್ಸ್, ಅನ್ವರಪಾಷಾ, ರಾಜಾವಲಿ, ರಸೂಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Kalyanasiri Kannada News Live 24×7 | News Karnataka
