ಬೆಂಗಳೂರು; ಸ್ವಾವಲಂಬಿ ಭಾರತದಲ್ಲಿ ಸ್ತ್ರೀಯರು ಆತ್ಮಗೌರವ, ಆತ್ಮಬಲದಿಂದ ಸ್ವತಂತ್ರವಾಗಿ ಆರೋಗ್ಯಕರವಾಗಿ ಬದುಕುವಂತಾಗಬೇಕು. ಮಹಿಳಾಸಶಕ್ತಿಕರಣಕ್ಕೆ ಸಾಧನೆಯೇ ಬುನಾದಿಯಾಗಬೇಕು ಎಂದು ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಹೇಳಿದ್ದಾರೆ.
ನಗರದ ಆಚಾರ್ಯ ಪಾಠಶಾಲಾ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ಆಚಾರ್ಯ ಪಾಠಶಾಲಾ ತಾಂತ್ರಿಕ ವಿದ್ಯಾಲಯದಿಂದ “ಮಹಿಳಾ ಸಬಲೀಕರಣ ದೃಷ್ಟಿಕೋನದಿಂದ ಕಾರ್ಯಪ್ರವೃತ್ತಿ ಕಡೆಗೆ” ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಲಿಂಗ ತಾರತಮ್ಯ ದೂರವಾಗಿ ಸಂವಿಧಾನಾತ್ಮಕವಾಗಿ ಎಲ್ಲ ಮಕ್ಕಳಿಗೆ ಉಚಿತ ಶಿಕ್ಷಣ ಲಭ್ಯವಾಗಬೇಕು. ಸಾಕ್ಷಾರತೆ ಪ್ರಮಾಣ ಹೆಚ್ಚಾಗಿ ಬಾಲ್ಯವಿವಾಹ, ವರದಕ್ಷಣೆ, ಸ್ತ್ರೀಭ್ರೂಣಹತ್ಯೆಯಂತಹ ಬೃಹತ್ ಸಾಮಾಜಿಕ ಸಮಸ್ಯೆಗಳು ನಿವಾರಣೆಯಾಗಬೇಕು. “ಭೇಟಿ ಬಚಾವೋ, ಬೇಟಿ ಫಡಾವೋ” ಎಂಬ ಕೇಂದ್ರಸರ್ಕಾರದ ಧೈಯವಾಕ್ಯ ಅನುಷ್ಠಾನವಾಗಬೇಕು ಎಂದರು.
ಮಹಿಳೆಯರು ಆರೋಗ್ಯವಂತರಾಗಲು ಕ್ಯಾನ್ಸರ್ನಂತಹ ಮಾರಕ ರೋಗಕ್ಕೆ ಬಲಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ರೋಗ ನಿಯಂತ್ರಣಕ್ಕಾಗಿ 14 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಅಭಿಯಾನ ತೀವ್ರಗೊಳಿಸಬೇಕು. ಆರೋಗ್ಯದ ಕಡೆ ಪೂರ್ಣ ಗಮನ ಹರಿಸಿ ಸ್ಥಿರವಾಗಿ ಕುಟುಂಬ, ಸಮಾಜಕ್ಕೆ ಬೆಂಬಲವಾಗಿ ನಿಲ್ಲಬೇಕಿದೆ. ಸ್ತ್ರೀಯರು ಸಾಧನೆ ಮೂಲಕವೇ ಸಮಾಜದ ಎಲ್ಲಾ ರಂಗಗಳಲ್ಲೂ ಶಿಖರಕ್ಕೇರಬೇಕಿದೆ ಎಂದು ಹೇಳಿದರು.
ಮಹಿಳೆಯರು ಜನ್ಮತಹ ಸಬಲೆಯರು. ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊತ್ತ ಮಹಿಳೆ ಯಾವುದೇ ಉದ್ಯಮ, ವ್ಯಾಪಾರ, ವ್ಯವಹಾರ ಮಾತ್ರವಲ್ಲದೆ ದೇಶವನ್ನೇ ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾಳೆ. ಕೌಟಂಬಿಕ ದೌರ್ಜನ್ಯವನ್ನು ಮೀರಿ, ಎಲ್ಲ ಅಡತಡೆಗಳನ್ನು ಬದಿಗೊತ್ತಿ, ಮಕ್ಕಳನ್ನು ಉತ್ತಮ ಸತ್ಪಜೆಗಳಾಗಿ ರೂಪಿಸುವಲ್ಲಿ ತಾಯಿಯು ಪ್ರಧಾನ ಪಾತ್ರವಹಿಸುತ್ತಾಳೆ. ಇಂದು ಕೋಟ್ಯಾಂತರ ಮಹಿಳೆಯರು ಔದ್ಯೋಗಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮೂಡಿರುವುದನ್ನು ನೋಡುತ್ತಿದ್ದೇವೆ ಎಂದರು.
ಸಂಸ್ಥೆಯ ಅಧ್ಯಕ್ಷ ಡಾ|| ವಿಷ್ಣುಭರತ್ ಅಲಂಪಲ್ಲಿ ಮಾತನಾಡಿ, “ಹೆಣ್ನೊಂದು ಕಲಿತರೆ ಶಾಲೆಯೊಂದು ತೆರೆದಂತೆ”, ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮೂಡಿಸಿ, ತನ್ಮೂಲಕ ದೇಶವನ್ನು ಸಮೃದ್ಧಗೊಳಿಸಬೇಕು ಎಂದರು.
ಸಂಸ್ಥೆಯ ಉಪಾಧ್ಯಕ್ಷ ಡಾ. ಎಸ್.ಸಿ ಶರ್ಮ, ಪ್ರಧಾನ ಕಾರ್ಯದರ್ಶಿ ಪ್ರೊ.ಎ.ಪ್ರಕಾಶ್, ಸಂಸ್ಥೆಯ ಟ್ರಸ್ಟಿಗಳಾದ ಎ.ಪಿ.ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಮಹಿಳಾಸಶಕ್ತಿಕರಣಕ್ಕೆ ಸಾಧನೆಯಬುನಾದಿಯಾಗಬೇಕು : ಉತ್ತರ ಪ್ರದೇಶರಾಜ್ಯಪಾಲರಾದ ಆನಂದಿ ಬೆನ್ ಪಟೇಲ್
ಜಾಹೀರಾತು