
Malnutrition is rampant in villages around factories: Ruksana K.
ಕಾರ್ಖಾನೆಗಳ ಸುತ್ತಲಿನ ಹಳ್ಳಿಗಳಲ್ಲಿ ಅಪೌಷ್ಟಿಕತೆ ಕಾಡುತ್ತಿದೆ: ರುಕ್ಸಾನಾ ಕೆ.

ಕೊಪ್ಪಳ: ಇಲ್ಕಿನ ನಗರಸಭೆ ಮುಂದೆ ನಡೆದಿರುವ ಕಾರ್ಖಾನೆಗಳ ವಿರೋಧಿ 53ನೇ ದಿನದ ಅನಿರ್ಧಿಷ್ಟ ಧರಣಿಗೆ ಅಪೌಷ್ಟಿಕತೆ ಹೋಗಲಾಡಿಸಲು ಜಾಗೃತಿ ಮೂಡಿಸುತ್ತಿರುವ ಜಾಗೃತಿ ಸಂಸ್ಥೆ ಬೆಂಬಲಿಸಿತು. ಸಂಸ್ಥೆಯ ಪ್ರಮುಖರಾದ ರುಕ್ಸಾನಾ ಕುರುಬನವರ ಮಾತನಾಡಿ, ನಮ್ಮ ಸಂಸ್ಥೆ ತಾಲೂಕಿನ ಅಪೌಷ್ಟಿಕತೆ ಹೋಗಲಾಡಿಸಲು ಜಾಗೃತಿ ನೀಡುವ ಕೆಲಸ ಮಾಡುತ್ತಿದೆ. ಬಹಳಷ್ಟು ಕಾರ್ಖಾನೆಗಳು ಸುತ್ತುವರಿದ ಹಳ್ಳಿಯ ಜನರನ್ನು ಭೇಟಿ ಮಾಡಿದಾಗ ಅವರು ನಮಗೆ ಮೊದಲು ದೂರುವುದು ಕಾರ್ಖಾನೆಗಳನ್ನು. ಆ ಕಾರ್ಖಾನೆಗಳು ಮೊದಲು ದೂಳು, ಬೂದಿ, ಹೊಗೆ ಬಿಡುವುದನ್ನು ನಿಲ್ಲಿಸಬೆಕು. ಇಲ್ಲದಿದ್ದರೆ ನಾವು ಕೆಮ್ಮು, ದಮ್ಮು, ಟಿ.ಬಿ, ಅಸ್ತಮಾ, ಎದೆನೋವು, ಸುಸ್ತು, ಮೈಕೆರೆತ, ಕ್ಯಾನ್ಸರ್, ಪಾರ್ಶ್ವವಾಯು ರೋಗದಿಂದ ಸಾಯುತ್ತಿದ್ದೇವೆ. ನಾವು ಬದುಕಿದರಷ್ಟೇ ನೀವು ಹೇಳುವ ಪೌಷ್ಟಿಕತೆ ನಮಗೆ ತಿಳಿಯುತ್ತದೆ ಎನ್ನುತ್ತಾರೆ. ಒಂದರ್ಥದಲ್ಲಿ ಇಲ್ಲಿನ ಜನರು ಹೇಳುವ ಮಾತು ಎಷ್ಟೊಂದು ಗಂಭೀರವಾಗಿದೆ. ಇವರು ಬೆಳೆಯುವ ಫಸಲು ಗುಣಮಟ್ಟದ ಕೊರತೆಯಿಂದ ಕಳಪೆ ಆಹಾರ ತಯಾರಾಗಿ, ಈ ಆಹಾರ ಜನ ತಿಂದು ಮತ್ತಷ್ಟು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ನಾವು ಇದನ್ನು ಹೇಳಿದರೆ ನಮಗೆ ಮೊದಲು ಜೀವ ಉಳಿಸಿ ಎಂದು ದೂಳು ಬಾಧಿತ ಹಳ್ಳಿಗಳ ಜನ ಅಂಗಲಾಚಿ ಬೇಡಿಕೊಳ್ಳುತ್ತಾರೆ, ಇವರು ಆರೋಗ್ಯ ಮತ್ತು ಜೀವ ಉಳಿಸಿಕೊಳ್ಳಲು ನಡೆಸಿದ ಬದುಕಿನ ಹೋರಾಟ ನಿರಂತರವಾಗಿ ನಡೆಯುತ್ತಿದೆ ಎಂದಾಗ ಮೊದಲು ನಾವು ಮೊದಲು ಜವಾಬ್ದಾರಿ ತೆಗೆದುಕೊಳ್ಳುತ್ತೇವೆ ಎಂದರು. ಹೋರಾಟ ಮಾಡಲು ಸಹ ಭಯ ಇದ್ದಂತೆ ಕಾಣುತ್ತದೆ ಎಂದರು.
ಇಂದಿನ ಧರಣಿಗೆ ಕೊಪ್ಪಳ ನಗರಸಭೆ ಮಾಜಿ ಆಯುಕ್ತ ಬಿ. ರಾಮಚಂದ್ರ ಬೆಂಗಳೂರು ಇವರು ಮಾತನಾಡಿ, ಈ ಹೋರಾಟ ಅತ್ಯಂತ ಜನರಪರ ಕಾಳಜಿಯ ಹೋರಾಟವಾಗಿದೆ. ನಾನು ಇಲ್ಲಿ ನಗರಸಭೆಯಲ್ಲಿ ಸೇವೆ ಸಲ್ಲಿಸಿದ್ದು, ಅಪಾರ ಪ್ರೀತಿ ಕೊಟ್ಟ ಜಾಗವಾಗಿದೆ. ಈ ಹೋರಾಟದಲ್ಲಿ ಕರೆದಾಗ ನಾನು ಬಂದು ಬೆಂಬಲ ಕೊಡುತ್ತೇನೆ ಎಂದು ಹೇಳಿದರು.
ಧರಣಿ ನೇತೃತ್ವವನ್ನು ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಪುಷ್ಪಲತಾ ಏಳುಭಾವಿ, ಶಾಂತಯ್ಯ ಅಂಗಡಿ, ಶಂಭುಲಿಂಗಪ್ಪ ಹರಗೇರಿ, ರವಿ ಕಾಂತನವರ, ಹನುಮಂತಪ್ಪ ಗೊಂದಿ, ಎಸ್.ಬಿ.ರಾಜೂರು, ಎಸ್.ಮಹಾದೇವಪ್ಪ ಮಾವಿನಮಡು, ಯಮನೂರಪ್ಪ ಹಾಲಳ್ಳಿ ಬಸಾಪುರ, ಈಶ್ವರ ಹತ್ತಿ ವಹಿಸಿದ್ದರು. ಹೋರಾಟದಲ್ಲಿ ಜಾಗೃತಿ ಸಂಸ್ಥೆಯ ಮೈತ್ರಾ ಜೆ, ಪೂಜಾ ದನಕನದೊಡ್ಡಿ, ಯಂಕಪ್ಪ ಜ್ಯೋಗಿ, ಭೀಮಪ್ಪ ಯಲಬುರ್ಗಾ, ಈರಯ್ಯ ಸ್ವಾಮಿ, ಮಂಜುನಾಥ ಕವಲೂರು, ಗಂಗಾಧರ ಭಾನಾಪುರ, ಗೌಸಮೋಹಿದ್ದೀನ್ ಸರ್ದಾರ್, ಬಿ.ಜಿ.ಕರಿಗಾರ, ಮಾನವ ಬಂಧುತ್ವ ವೇದಿಕೆಯ ಕುಕನೂರು ಸಂಚಾಲಕ ಈಶಪ್ಪ ದೊಡ್ಡಮನಿ ಪಾಲ್ಗೊಂಡರು.




