Even in the age of technology, may the Indian culture that cherishes the spirit of the Guru not fade away.

ತಂತ್ರಜ್ಞಾನ ಯುಗದಲ್ಲೂ ಗುರುಪ್ರಜ್ಞೆಯ ಭಾರತೀಯ ಸಂಸ್ಕೃತಿ ಮರೆಯಾಗದಿರಲಿ

ವಿದ್ಯಾರ್ಥಿಗಳೇ ಮುಂದಾಳತ್ವ ವಹಿಸಿ ಶಿಕ್ಷಕರಿಗೆ ಗುರುವಂದನೆ; ನಾಯಕತ್ವ ಗುಣ ಬೆಳೆಸಿಕೊಳ್ಳಲು ಪ್ರಾಂಶುಪಾಲ ಡಾ. ಕರಿಗೂಳಿ ಕರೆ
ಶ್ರೀರಾಮನಗರ: ತಂತ್ರಜ್ಞಾನ ಎಷ್ಟೇ ವೇಗವಾಗಿ ಬೆಳೆಯುತ್ತಿದ್ದರೂ ಭಾರತೀಯ ಸಂಸ್ಕೃತಿಯ ಮೂಲವಾದ ಗುರು-ಶಿಷ್ಯ ಪರಂಪರೆ ಹಾಗೂ ಗುರುಪ್ರಜ್ಞೆಯನ್ನು ಮರೆಯಬಾರದು ಎಂದು ಚಿಲುಕೂರಿ ನಾಗೇಶ್ವರ ರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಕರಿಗೂಳಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಲೂಕಿನ ಶ್ರೀರಾಮನಗರದ ಕಾಲೇಜಿನಲ್ಲಿ ಸೆ.5ರಂದು ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಶೇಷವೆಂದರೆ, ಶಿಕ್ಷಕರ ದಿನಾಚರಣೆಯ ಸಂಪೂರ್ಣ ಕಾರ್ಯಕ್ರಮವನ್ನು ವಿದ್ಯಾರ್ಥಿಗಳೇ ಮುಂದಾಳತ್ವ ವಹಿಸಿ ರೂಪಿಸಿ, ವ್ಯವಸ್ಥಿತವಾಗಿ ನಡೆಸಿಕೊಟ್ಟರು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಶಿಕ್ಷಕರಿಗೂ ವಿದ್ಯಾರ್ಥಿಗಳು ಪ್ರೀತಿಯಿಂದ ಪೆನ್ನುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಗೌರವ ಸಲ್ಲಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಸರ್ವೆಪಲ್ಲಿ ರಾಧಾಕೃಷ್ಣನ್, ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಗೌರವಿಸಲಾಯಿತು. ಬಳಿಕ ವಿದ್ಯಾರ್ಥಿನಿಯರಾದ ಹರ್ಷಿತಾ, ಪಂಚವತಿ, ಮಮತಾ, ಫಾತಿಮಾ ಸೇರಿದಂತೆ ಹಲವರು ಮಾತನಾಡಿ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿದರು.
ಪ್ರಾಂಶುಪಾಲ ಡಾ. ಕರಿಗೂಳಿ ಮಾತನಾಡಿ, “ವಿದ್ಯಾರ್ಥಿಗಳೇ ಸ್ವತಃ ಮುಂದಾಳತ್ವ ವಹಿಸಿ ಶಿಕ್ಷಕರ ದಿನಾಚರಣೆಯನ್ನು ರೂಪಿಸಿ, ತಮ್ಮ ಗುರುಗಳನ್ನು ಗೌರವಿಸುತ್ತಿರುವುದು ಅತ್ಯಂತ ಸಂತಸದ ಸಂಗತಿ. ಇಂತಹ ನಾಯಕತ್ವದ ಗುಣಗಳೇ ಮುಂದಿನ ದಿನಗಳಲ್ಲಿ ನಿಮ್ಮನ್ನು ಯಶಸ್ಸಿನೆಡೆಗೆ ಕೊಂಡೊಯ್ಯಲಿವೆ” ಎಂದು ಶುಭ ಹಾರೈಸಿದರು.
“ಇಂದಿನ ತಂತ್ರಜ್ಞಾನ ಯುಗದಲ್ಲಿ ಆಧುನಿಕ ಜ್ಞಾನವನ್ನು ಪಡೆದುಕೊಳ್ಳುವುದು ಅಗತ್ಯ. ಆದರೆ ಅದರೊಂದಿಗೆ ಭಾರತೀಯ ನೈಜ ಸಂಸ್ಕೃತಿ, ಗುರು-ಶಿಷ್ಯ ಪರಂಪರೆ ಮತ್ತು ಗುರುಪ್ರಜ್ಞೆಯನ್ನು ಮರೆಯಬಾರದು” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅಧ್ಯಾಪಕ ಡಾ. ಸರಫರಾಜ್ ಅಹಮದ್ ಅವರು ವಿದ್ಯಾರ್ಥಿಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.
ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ವೀರೇಶ, ಶಂಕ್ರಪ್ಪ ಎಂ., ರವಿಕುಮಾರ, ಡಾ. ಶಶಿಕುಮಾರ, ಡಾ. ವಿರುಪಾಕ್ಷ ಕೆ., ಉಪನ್ಯಾಸಕರಾದ ವೆಂಕಟರಾಜು, ದೇವರಾಜ, ಬಾಲಚಂದ್ರಪ್ಪ, ಈಶಪ್ಪ, ಕಲ್ಪನಾ, ರವಿಕುಮಾರ್, ರೋಜಾ, ಮಾರೆಪ್ಪ, ವಿನಯಕುಮಾರ, ಕನಕಪ್ಪ, ಆಡಳಿತ ಸಿಬ್ಬಂದಿ ಜಬೀನಾ ಬೇಗಂ, ಸಹಾಯಕ ಸಿಬ್ಬಂದಿಯಾದ ಶಾಂತಿ, ಶರಣ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

