High Court Division Bench issues order to the Minority Welfare Department; High Court cracks the whip, ordering the recovery of a ₹5 lakh grant illegally awarded to a madrasa.
ಕಾನೂನುಬಾಹಿರವಾಗಿ ಮದರಸಾಗೆ ನೀಡಿರುವ ಐದು ಲಕ್ಷ ರೂ ಅನುದಾನ ವಾಪಸ್ ಪಡೆಹಯುವಂತೆ ಹೈಕೋರ್ಟ್ ನ ವಿಭಾಗೀಯ ಪೀಠ ಆದೇಶ



ಕಾನೂನುಬಾಹಿರವಾಗಿ ಮದರಸಾಗೆ ನೀಡಿರುವ ಐದು ಲಕ್ಷ ರೂ ಅನುದಾನ ವಾಪಸ್ ಪಡೆಯಲು ಹೈ ಕೋರ್ಟ್ ಚಾಟಿ – ಹೈಕೋರ್ಟ್ ನ ವಿಭಾಗೀಯ ಪೀಠ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗೆ ಆದೇಶ
ಬೆಂಗಳೂರು: ಶಿಕ್ಷಣ ಇಲಾಖೆಯಿಂದ ಮಾನ್ಯತೆ ರದ್ದಾಗಿರುವ ಥಣಿಸಂದ್ರದ ಸಾಮರ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ನಡೆಸುತ್ತಿರುವ ಮದರಸಾಗೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ನೀಡಿರುವ ಐದು ಲಕ್ಷ ರೂಪಾಯಿ ಅನುದಾನ ವಾಪಸ್ ಪಡೆಯುವ ಕುರಿತು ಕೈಗೊಂಡಿರುವ ಕ್ರಮದ ಬಗ್ಗೆ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ರಾಜ್ಯ ಹೈಕೋರ್ಟ್ ನ ವಿಭಾಗೀಯ ಪೀಠ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗೆ ಆದೇಶಿಸಿದೆ.
ಮುಂದಿನ ವಿಚಾರಣೆ ಸಂದರ್ಭದಲ್ಲಿ ವಂಚನೆಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ವಿರುದ್ಧ ನಡೆಯುತ್ತಿರುವ ತನಿಖೆಯ ವಸ್ತುಸ್ಥಿತಿ ಮಾಹಿತಿ ಹಾಗೂ ಕೈಗೊಂಡಿರುವ ಕ್ರಮಗಳ ವರದಿಯನ್ನು ಸಲ್ಲಿಸಬೇಕು. ಅಲ್ಪ ಸಂಖ್ಯಾತರ ಇಲಾಖೆಯ ನಿರ್ದೇಶಕರು ಆರೋಪಗಳನ್ನು ರೂಪಿಸುವ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗಬೇಕು ಎಂದು ನಿರ್ದೇಶನ ನೀಡಿದೆ.
ಅಬ್ದುಲ್ ಹಮೀದ್ ಪಾಷ, ಪ್ರದೀಪ್ ಸಿಂಹ ಮತ್ತಿತರರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಟಿ.ಎಂ. ನದಾಫ್ ನೇತೃತ್ವದ ವಿಭಾಗೀಯ ಪೀಠ ಎರಡನೇ ಬಾರಿಗೆ ಈ ಮಹತ್ವದ ಆದೇಶ ನೀಡಿ, ವಿಚಾರಣೆಯನ್ನು ಸೆಪ್ಟೆಂಬರ್ 24ಕ್ಕೆ ಮುಂದೂಡಿದೆ.
ಇದಕ್ಕೂ ಮುನ್ನ ಮುಖ್ಯನ್ಯಾಯಮೂರ್ತಿ ವಿಭು ಭಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ನೇತೃತ್ವದ ವಿಭಾಗೀಯಪೀಠ ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಈ ಕುರಿತಾದ ಅರ್ಜಿ ವಿಚಾರಣೆ ನಡೆಸಿ ಮದರಸಾಗೆ ನೀಡಿರುವ ಹಣದ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಆದೇಶಿಸಿತ್ತು.
ಇದೀಗ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎನ್. ಮೂಲಿಮನಿ ಅವರು ನ್ಯಾಯಪೀಠದ ಮುಂದೆ ಪ್ರಮಾಣ ಪತ್ರಸಲ್ಲಿಸಿ ಪ್ರತಿವಾದಿಗಳು ಬೆಂಗಳೂರಿನಲ್ಲಿ ವಿವಿಧ ಹೆಸರುಗಳಡಿ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿರುವುದನ್ನು ಶಿಕ್ಷಣ ಇಲಾಖೆ ಆಯುಕ್ತರು ತನಿಖೆ ನಡೆಸಿ ಶಿಕ್ಷಣ ಇಲಾಖೆಯ ಮಾನ್ಯತೆ ರದ್ದುಪಡಿಸಿದ್ದಾರೆ. ಇದನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಯೂ ಸಹ ವಜಾ ಆಗಿದೆ. ದೂರಿನಲ್ಲಿ ಮಾಡಲಾದ ಆರೋಪಗಳು ಪರಿಶೀಲನೆಯ ನಂತರ ಸತ್ಯವೆಂದು ಕಂಡುಬಂದಿರುವುದರಿಂದ, ನಿಯಮಗಳ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲು, ಈಗಾಗಲೇ ಬಿಡುಗಡೆ ಮಾಡಲಾದ ರೂ.5 ಲಕ್ಷ ಮೊತ್ತವನ್ನು ವಸೂಲಿ ಮಾಡಿ ಸರ್ಕಾರಕ್ಕೆ ಹಿಂತಿರುಗಿಸುವ ಕುರಿತು ಕ್ರಮ ಕೈಗೊಳ್ಳಲು ಅನುಮತಿ ಕೋರಿರುವುದನ್ನು ಸಹ ನ್ಯಾಯಪೀಠ ಗಮನಿಸಿ ಹೈಕೋರ್ಟ್ ವಿಭಾಗೀಯ ಪೀಠದ ಮುಂದೆ ಖುದ್ಧಾಗಿ ವಿಚಾರಣೆಗೆ ಹಾಜರಾಗುವಂತೆ ಅಲ್ಪ ಸಂಖ್ಯಾತರ ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡಿತು.

