ಎಸ್‌ಐಆರ್: ಸೆಪ್ಟೆಂಬರ್ 23 ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ

H.Mallikarjun
H.Mallikarjun - Kalyanasiri
4 Min Read

SIR: Opportunity to submit claims and objections until September 23.

ಎಸ್‌ಐಆರ್: ಸೆಪ್ಟೆಂಬರ್ 23 ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ


ಜಿಲ್ಲೆಯಲ್ಲಿ 10.41 ಲಕ್ಷ ಮತದಾರರ ಕರಡು ಪಟ್ಟಿ ಪ್ರಕಟ


ಕೊಪ್ಪಳ ಆಗಸ್ಟ್ 24, (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)-2026ರ ಸಂಬAಧ ಮತದಾರರ ಕರಡು ಪಟ್ಟಿ ಪ್ರಕಟಿಸಲಾಗಿದ್ದು, ಒಟ್ಟು 10,41,388 ಮತದಾರರು ಕರಡು ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿದ್ದ ಒಟ್ಟು 11,90,214 ಮತದಾರರ ಪೈಕಿ ಶೇ.87.50 ರಷ್ಟು ಅಂದರೆ 10,41,388 ಮತದಾರರ ಮಾಹಿತಿ ಪರಿಶೀಲಿಸಿ ಕರಡು ಪಟ್ಟಿ ತಯಾರಿಸಲಾಗಿದೆ. ಇದರಲ್ಲಿ 5,19,142 ಪುರುಷ ಮತದಾರರು, 5,22,189 ಮಹಿಳಾ ಮತದಾರರು ಹಾಗೂ 57 ಇತರೆ ಮತದಾರರಿದ್ದಾರೆ ಎಂದು ಹೇಳಿದರು.
ಕರಡು ಮತದಾರರ ಪಟ್ಟಿಯಿಂದ ಹೊರಗುಳಿದ ಒಟ್ಟು 1,48,826 ಮತದಾರರ ಪೈಕಿ 28,922 ಮಂದಿ ಮೃತಪಟ್ಟಿದ್ದರೆ, 76,071 ಮತದಾರರು ಶಾಶ್ವತವಾಗಿ ವಲಸೆ ಹೋಗಿದ್ದಾರೆ. 32,501 ಡಬಲ್ ಎಂಟ್ರಿ ಹಾಗೂ ಮೂರ್ನಾಲ್ಕು ಬಾರಿ ಭೇಟಿ ನೀಡಿದರೂ ಸ್ಥಳದಲ್ಲಿ ಲಭ್ಯವಿಲ್ಲದ 11,332 ಗೈರುಹಾಜರಿ ಮತದಾರ ಹೆಸರುಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ.  ಈ ಪಟ್ಟಿಯನ್ನು ಜಿಲ್ಲಾ ವೆನ್‌ಸೈಟ್  https://koppal.nic.in/en election/ /  ನಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರು ತಮ್ಮ ಹೆಸರುಗಳನ್ನು ಪರಿಶೀಲಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಕರಡು ಮತದಾರರ ಪಟ್ಟಿ ಪ್ರಕಟಗೊಂಡಿದ್ದು, ಇಂದಿನಿAದ ಸೆಪ್ಟೆಂಬರ್ 23 ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಸಾರ್ವಜನಿಕರು ಅರ್ಜಿ ಹಾಗೂ ಆಕ್ಷೇಪಣೆಗಳನ್ನು ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿಗಳು, ಗ್ರಾಮ ಪಂಚಾಯಿತಿ ಕೇಂದ್ರಗಳು ಹಾಗೂ ಬಿಎಲ್‌ಒ ಕೇಂದ್ರಗಳಲ್ಲಿ ಸಲ್ಲಿಸಬಹುದು.
ಮತದಾರರ ಪಟ್ಟಿಯಲ್ಲಿ ಹೆಸರಿನ ಕಾಗುಣಿತ, ವಿಳಾಸ ಸೇರಿದಂತೆ ಸಣ್ಣಪುಟ್ಟ ತಿದ್ದುಪಡಿಗಳಿರುವ ಸುಮಾರು 11,117 ಮತದಾರರು ಹಾಗೂ ಮ್ಯಾಪ್ ಆಗದ 3,281 ಮತದಾರರು ಸೇರಿದಂತೆ ಒಟ್ಟು 14,398 ಮತದಾರರಿಗೆ ನೋಟಿಸ್ ನೀಡಿ, ತಾಲೂಕು, ಮಟ್ಟದಲ್ಲಿ ತಹಶೀಲ್ದಾರ್ ಹಾಗೂ ಇಆರ್‌ಒ ಹಂತದಲ್ಲಿ ಕರೆಸಿ ಸೂಕ್ತ ದಾಖಲೆಗಳನ್ನು ಪಡೆದು ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಗಣತಿ ನಮೂನೆಯಲ್ಲಿ ಒದಗಿಸಿರುವ ಹಿಂದಿನ ವಿಶೇಷ ಸಮಗ್ರ ಪರಿಷ್ಕರಣೆ ಮತದಾರರ ಪಟ್ಟಿಯ ವಿವರಗಳು ಲಭ್ಯವಿಲ್ಲದಿದ್ದಲ್ಲಿ ಅಥವಾ ಡೇಟಾಬೇಸ್‌ನಲ್ಲಿರುವ ಮಾಹಿತಿಯೊಂದಿಗೆ ತಾಳೆಯಾಗದಿರುವ ಮತದಾರರಿಗೆ ನೋಟಿಸ್ ನೀಡಲಾಗುವುದು. ಅಂತಹ ನೋಟಿಸ್ ಸ್ವೀಕರಿಸಿದ ನಂತರ ಮತದಾರರು ಅವಶ್ಯಕ ದಾಖಲೆಗಳನ್ನು ಸಲ್ಲಿಸಬೇಕು ಎಂದರು.
ಜಿಲ್ಲೆಯಲ್ಲಿ ಈ ಹಿಂದೆ 1315 ಮತಗಟ್ಟೆ ಕೇಂದ್ರಗಳಿದ್ದವು. 1,200 ಕ್ಕಿಂತ ಹೆಚ್ಚು ಮತದಾರರಿರುವ ಕೇಂದ್ರಗಳನ್ನು ಗುರುತಿಸಿ, ಸುಲಭ ಮತದಾನಕ್ಕಾಗಿ 37 ಹೆಚ್ಚುವರಿ ಶಾಶ್ವತ ಮತದಾನ ಕೇಂದ್ರಗಳನ್ನು ನೂತನವಾಗಿ ಸ್ಥಾಪಿಸಲಾಗಿದ್ದು, ಇದರಿಂದ ಜಿಲ್ಲೆಯಲ್ಲಿ ಒಟ್ಟು ಮತಗಟ್ಟೆ ಕೇಂದ್ರಗಳ ಸಂಖ್ಯೆ 1352 ಕ್ಕೆ ಏರಿಕೆಯಾಗಿದೆ ಎಂದು ಹೇಳಿದರು.
ಕರಡು ಮತದಾರರ ಪಟ್ಟಿಯನ್ನು ಮತಗಟ್ಟೆ ಕೇಂದ್ರ, ಗ್ರಾಮ ಪಂಚಾಯಿತಿ ಕಚೇರಿ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ, ತಾಲ್ಲೂಕು ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ವೆಬ್‌ಸೈಟ್  www.koppal.nic.in        ನಲ್ಲಿ ಪರಿಶೀಲಿಸಿಕೊಂಡು ಈ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹತಾ ದಿನಾಂಕಕ್ಕೆ 18 ವರ್ಷ ಪೂರ್ಣಗೊಳ್ಳುವವರು ಹಾಗೂ ಅರ್ಹ ಹೊಸ ಮತದಾರರು ನಮೂನೆ 6, ಹೊಸ ಮತದಾರರ ನೋಂದಣಿ(ಎನ್‌ಆರ್‌ಐ) ನಮೂನೆ 6ಎ, ಈಗಿರುವ ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಲು ನಮೂನೆ 7 ಮತ್ತು ನಮೂದುಗಳ ತಿದ್ದುಪಡಿಗಾಗಿ ನಮೂನೆ 8 ಇವುಗಳನ್ನು  ECINET  ಮೊಬೈಲ್ ಆಪ್ ಅಥವ  voters.eci.gov.in     ನಲ್ಲಿಯೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ನಮೂನೆ 6 ಮತ್ತು ಘೋಷಣಾ ನಮೂನೆಯನ್ನು ಸಲ್ಲಿಸುವ ಅರ್ಜಿದಾರರು ಭಾರತದ ಪ್ರಜೆಯಾಗಿರಬೇಕು. ದಿನಾಂಕ: 01-10-2026 ರ ವೇಳೆಗೆ 18 ವರ್ಷ ವಯಸ್ಸು ಪೂರ್ಣಗೊಳಿಸಿರಬೇಕು ಅಥವಾ ಪೂರ್ಣಗೊಳಿಸಲಿರಬೇಕು. ಅರ್ಜಿಯಲ್ಲಿ ನಮೂದಿಸಿರುವ ವಿಳಾಸದಲ್ಲಿ ಅವರು ಸಾಮಾನ್ಯ ನಿವಾಸಿಯಾಗಿರಬೇಕು. ಪ್ರಸ್ತುತ ಭಾರತದ ಬೇರೆ ಯಾವುದೇ ಸ್ಥಳದಲ್ಲಿ ಮತದಾರರಾಗಿ ನೋಂದಾಯಿತರಾಗಿರಬಾರದು. ಚುನಾವಣಾ ಆಯೋಗವು ನಿಗದಿಪಡಿಸಿರುವ ಅಗತ್ಯ ದಾಖಲೆಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಹೊಸ ಮತದಾರರ ನೋಂದಣಿಗೆ (ನಮೂನೆ 6) 5,248, ಹೊಸ ಮತದಾರರ ನೋಂದಣಿಗೆ (ಎನ್‌ಆರ್‌ಐ) (ನಮೂನೆ 6ಎ) 01, ಈಗಿರುವ ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಲು (ನಮೂನೆ 7) 893 ಹಾಗೂ ನಮೂದುಗಳ ತಿದ್ದುಪಡಿಗಾಗಿ (ನಮೂನೆ 8) 10,432 ಅರ್ಜಿಗಳು ಸ್ವೀಕೃತವಾಗಿವೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಹಕ್ಕು ಮತ್ತು ಆಕ್ಷೇಪಣೆ ಅವಧಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರದಂದು (ಆಗಸ್ಟ್ 29, 30, ಸೆಪ್ಟೆಂಬರ್ 5, 6, 12, 13, 19, ಮತ್ತು 20) ಬೂತ್ ಮಟ್ಟದ ಅಧಿಕಾರಿಗಳನ್ನು ಹಾಗೂ ಇತರೆ ಅಧಿಕಾರಿಗಳನ್ನು ನಿಯೋಜನೆ ಮಾಡುವ ಮೂಲಕ ವಿಶೇಷ ನೋಂದಣಿ ಅಭಿಯಾನ ಅಥವಾ ಮಿಂಚಿನ ನೋಂದಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ವಿಶೇಷ ಅಭಿಯಾನವು ವಸತಿ ಪ್ರದೇಶಗಳು, ಅಪಾರ್ಟ್ಮೆಂಟ್, ಶೈಕ್ಷಣಿಕ ಸಂಸ್ಥೆಗಳು, ಕೈಗಾರಿಕಾ ಸಂಸ್ಥೆಗಳು ಹಾಗೂ ಅರ್ಹ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಇತರೆ ಸ್ಥಳಗಳಲ್ಲಿ ನಡೆಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಚುನಾವಣಾ ಶಾಖೆಯ ನಾಗರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.
Total Views: 0
ಜಾಹೀರಾತು
Share This Article