ಬಹದ್ದೂರಬಂಡಿ ಗ್ರಾಮ ಪಂಚಾಯತಿಯಲ್ಲಿ ಜರುಗಿದ ವಿಶೇಷ ಗ್ರಾಮಸಭೆ

H.Mallikarjun
H.Mallikarjun - Kalyanasiri
2 Min Read

Special village meeting held in Bahaddurbandi village panchayat

2026-27ನೇ ಸಾಲಿನ ವಿಕಸಿತ ಭಾರತ ಜೀರಾಮ್‌ಜೀ ಕ್ರಿಯಾ ಯೋಜನೆ ತಯಾರಿಕೆ


ಬಹದ್ದೂರಬಂಡಿ ಗ್ರಾಮ ಪಂಚಾಯತಿಯಲ್ಲಿ ಜರುಗಿದ ವಿಶೇಷ ಗ್ರಾಮಸಭೆ

ಕೊಪ್ಪಳ ಆಗಸ್ಟ್ 04 (ಕರ್ನಾಟಕ ವಾರ್ತೆ): 2026-27ನೇ ಸಾಲಿನ ವಿಕಸಿತ ಭಾರತ ಜೀರಾಮ್‌ಜೀ (ಎಂಜಿಎನ್‌ಆರ್‌ಇಜಿಎ) ಕ್ರಿಯಾ ಯೋಜನೆ ಸಿದ್ಧಪಡಿಸುವ ಸಂಬಂಧ ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಗ್ರಾಮ ಪಂಚಾಯತಿಯಲ್ಲಿ ಮಂಗಳವಾರ (ಆ. 4ರಂದು) ವಿಶೇಷ ಗ್ರಾಮಸಭೆ ನಡೆಯಿತು.
ಬಹದ್ದೂರಬಂಡಿ ಗ್ರಾಮ ಪಂಚಾಯತಿ ಆವರಣದಲ್ಲಿ ನಡೆದ ಸಭೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಸವರಾಜ ಕಿರ್ದಿ ಅವರು ಮಾತನಾಡಿ, ರೈತರು ಹಾಗೂ ಕೂಲಿಕಾರರ ಆರ್ಥಿಕ ಸದೃಢತೆಗೆ ವಿಕಸಿತ ಭಾರತ ಜೀರಾಮ್‌ಜೀ ಯೋಜನೆ ಗ್ರಾಮೀಣ ಭಾಗಕ್ಕೆ ವರದಾನವಾಗಲಿದೆ. ಗ್ರಾಮ ಪಂಚಾಯತಿ, ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ವೈಯಕ್ತಿಕ ಹಾಗೂ ಸಾರ್ವಜನಿಕ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ ಅವರು ಮಾತನಾಡಿ, ಗ್ರಾಮೀಣ ಭಾಗದ ಕೂಲಿಕಾರರು ಗುಳೆ ಹೋಗುವುದನ್ನು ತಡೆದು ಸ್ಥಳೀಯವಾಗಿ ಒಂದು ಕುಟುಂಬಕ್ಕೆ 125 ದಿನಗಳ ಉದ್ಯೋಗ ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು. ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೂಲಿ ನಿಗದಿಪಡಿಸಲಾಗಿದ್ದು, ಜಲ ಸಂರಕ್ಷಣೆ, ನೀರಾವರಿ, ಅಂತರ್ಜಲ ಮರುಪೂರಣ, ಜಲಾನಯನ ಪ್ರದೇಶ ಅಭಿವೃದ್ಧಿ ಹಾಗೂ ಜಲಮೂಲಗಳ ಪುನಶ್ಚೇತನ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಯೋಜನೆಯಡಿ ಪ್ರತಿ ಮಾನವ ದಿನಕ್ಕೆ 382 ಕೂಲಿ ನಿಗದಿಪಡಿಸಲಾಗಿದ್ದು, ಜಾನುವಾರು ಶೆಡ್, ಮೇಕೆ ಶೆಡ್, ಕೃಷಿಹೊಂಡ, ಬದು ನಿರ್ಮಾಣ, ಕೋಳಿ ಶೆಡ್ ಸೇರಿದಂತೆ 318 ವಿಧದ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಜಮೀನು ಇಲ್ಲದವರು ಗ್ರಾಮ ಪಂಚಾಯತಿ ಕೈಗೊಳ್ಳುವ ಸಾಮೂಹಿಕ ಕಾಮಗಾರಿಗಳಲ್ಲಿ ಭಾಗವಹಿಸಿ ಉದ್ಯೋಗ ಪಡೆದು ಆರ್ಥಿಕವಾಗಿ ಸಬಲರಾಗಬೇಕು. ಹೊಸದಾಗಿ ನೋಂದಾಯಿಸಿದ ಕುಟುಂಬಗಳಿಗೆ ಉದ್ಯೋಗ ಖಾತರಿ ಕಾರ್ಡ್ಗಳನ್ನು ವಿತರಿಸಲಾಗುವುದು ಎಂದರು.
ಸಂಜೀವಿನಿ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸುನೀಲ್ ಅವರು ಮಾತನಾಡಿ, ಸಂಜೀವಿನಿ ಸಂಘದ ಮಹಿಳೆಯರು ವೈಯಕ್ತಿಕ ಕಾಮಗಾರಿಗಳಿಗೆ ಆದ್ಯತೆ ನೀಡಿ ಯೋಜನೆಯ ಸೌಲಭ್ಯಗಳನ್ನು ಪಡೆದು ಶಾಶ್ವತ ಆದಾಯ ಗಳಿಸಬೇಕು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯತಿ ಆಡಳಿತಾಧಿಕಾರಿ ನಾಗರತ್ನ ಅಧ್ಯಕ್ಷತೆ ವಹಿಸಿದ್ದರು. ಪಶುವೈದ್ಯಾಧಿಕಾರಿ ವಿನಯ ಅಂಗಡಿ, ತಾಂತ್ರಿಕ ಸಹಾಯಕ ಗುರುರಾಜ, ಶ್ರೀ ಟಿಪ್ಪು ಸುಲ್ತಾನ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ಅಧ್ಯಕ್ಷೆ ರತ್ನಮ್ಮ ಹೊಸಳ್ಳಿ, ಎಂಬಿಕೆ ಶಕುಂತಲಾ, ಸಖಿ ಚಿನ್ನಮ್ಮ, ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಮೆಹಬೂಬ, ಕನಕರಾಯ, ಗ್ರಾಮ ಕಾಯಕ ಮಿತ್ರ ಭಾಗ್ಯ ಹಾದಿಮನಿ, ರೈತರು, ಸಂಜೀವಿನಿ ಯೋಜನೆಯ ಒಕ್ಕೂಟದ ಮಹಿಳೆಯರು, ಕೃಷಿ ಗ್ರಾಮಸ್ಥರು, ಕಾಯಕ ಬಂಧುಗಳು ಹಾಗೂ ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.
Total Views: 0
Share This Article