ಗ್ರಾಮೀಣ ಸೊಗಡಿನ ಕಲಾವಿದ ‘ಹನುಮಂತಪ್ಪ ಮಲ್ಲಾಪುರ’

H.Mallikarjun
H.Mallikarjun - Kalyanasiri
3 Min Read
ಜಾಹೀರಾತು
Artist of rural beauty 'Hanumanthappa Mallapura'

ಗ್ರಾಮೀಣ ಸೊಗಡಿನ ಕಲಾವಿದ ‘ಹನುಮಂತಪ್ಪ ಮಲ್ಲಾಪುರ’

ಜಾಹೀರಾತು

ಇತ್ತೀಚಿನ ವರ್ಷಗಳಲ್ಲಿ ಹವ್ಯಾಸಿ ರಂಗಭೂಮಿ ತಂಡಗಳಿಂದ ರಂಗ ಪ್ರದರ್ಶನಗಳು ಹೆಚ್ಚಾಗಿ ನಡೆಯುತ್ತಿದ್ದು ಹವ್ಯಾಸಿ ಕಲಾವಿದರು ಬೆಳಕಿಗೆ ಬರುತ್ತಿದ್ದಾರೆ. ತಾಲೂಕು ಕೇಂದ್ರ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಆಗೊಮ್ಮೆ ಈಗೊಮ್ಮೆ ಪ್ರದರ್ಶನಗೊಳ್ಳುವ ಹವ್ಯಾಸಿ ನಾಟಕಗಳಿಂದಲೂ ಕಲಾವಿದರು ಗುರುತಿಸಿಕೊಳ್ಳುತ್ತಿದ್ದಾರೆ. ಹೀಗೆ ಗುರುತಿಸಿಕೊಂಡು ಬೆಳಕಿಗೆ ಬರುವ ಕಲಾವಿದರು ರಂಗಕಲೆಯನ್ನು ವೃತ್ತಿಯನ್ನಾಗಿಸಿಕೊಳ್ಳುವುದಿಲ್ಲ ಮತ್ತು ನಟನೆಗೆ ಸಂಭಾವನೆ ಪಡೆಯುವುದಿಲ್ಲ. ಈ ಹವ್ಯಾಸಿ ಕಲಾವಿದರು ಕೆಲಸ, ಕಾರ್ಯ ನಿರ್ವಹಿಸುತ್ತಾ ಹವ್ಯಾಸಿ ನಾಟಕಗಳಲ್ಲಿ ಅಭಿನಯಿಸಿ ಪ್ರತಿಭೆ ಪ್ರದರ್ಶಿಸುತ್ತಾರೆ.
ಈ ದಿಸೆಯಲ್ಲಿ ಪ್ರತಿದಿನ ಹೊಲ, ಗದ್ದೆಗಳಲ್ಲಿ ಮೈ ಬಗ್ಗಿಸಿ ಕೆಲಸ ಮಾಡುತ್ತಾ ಬಿಡುವಿನ ಸಮಯದಲ್ಲಿ ನಾಟಕ, ಕಿರುಚಿತ್ರ, ವಿಡೀಯೋ ಸಾಂಗ್ ಗಳಲ್ಲಿ ಅಭಿನಯಿಸಿ ಪ್ರತಿಭೆ ಪ್ರದರ್ಶಿಸುತ್ತಿರುವ ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಕೃಷಿಕ ಹನುಮಂತಪ್ಪ ಗೂಗಿಬಂಡಿ ಅವರು ಗ್ರಾಮೀಣ ಸೊಗಡಿನ ಅಪ್ಪಟ ಕಲಾವಿದ.


ಜೀವನ ನಿರ್ವಹಣೆಗೆ ತಮ್ಮದೇ 2ಎಕರೆ ಭೂಮಿಯಲ್ಲಿ ಕೃಷಿ ಕಾಯಕ ಮಾಡುವ ಇವರು ಬೇರೆಯವರ 4ಎಕರೆ ಭೂಮಿಯನ್ನು ಗುತ್ತಿಗೆ ಪಡೆದು ಭತ್ತ ಬೆಳೆಯುತ್ತಾರೆ. ಕಲೆಯನ್ನು ಹೆಚ್ಚು ಇಷ್ಟಪಡುವ ಇವರು ಕಲಾವಿದರನ್ನು ಆತ್ಮೀಯತೆ ಮತ್ತು ಗೌರವದಿಂದ ಕಾಣುತ್ತಾರೆ. ತಮ್ಮ ಕುಟುಂಬದಲ್ಲಿ ಕಲೆಯ ನಂಟು ಯಾರಿಗೂ ಇಲ್ಲ. ಆದರೂ ರಂಗಭೂಮಿ ಇವರನ್ನು ಸೆಳೆದಿದೆ.
ಕಲೆ ಎಲ್ಲರನ್ನೂ ಸೆಳೆಯುತ್ತದೆ ಕೆಲವರನ್ನು ಮಾತ್ರ ಆಯ್ದುಕೊಳ್ಳುತ್ತದೆ ಎಂಬ ಮಾತಿನಂತೆ ಕಲೆ ಇವರನ್ನು ಆಯ್ಕೆ ಮಾಡಿಕೊಂಡಿದ್ದು ಉತ್ತಮ ಕಲಾವಿದನನ್ನಾಗಿ ರೂಪಿಸಿದೆ. ಪರಿಣಾಮ ಹತ್ತಾರು ಹವ್ಯಾಸಿ ನಾಟಕ, ಕಿರುಚಿತ್ರ, ವಿಡೀಯೋ ಹಾಡುಗಳಲ್ಲಿ ಅಭಿನಯಿಸಿ ಪ್ರತಿಭೆ ಪ್ರದರ್ಶಿಸಿದ್ದಾರೆ.
ಇವರು ಬಣ್ಣ ಹಚ್ಚಿಕೊಂಡು ಅಭಿನಯಿಸಿದ್ದು 2009ರಲ್ಲಿ. ‘ಅಣ್ಣನ ಒಡಲು ಬಂಗಾರದ ಕಡಲು’ ವೃತ್ತಿ ರಂಗಭೂಮಿ ನಾಟಕದ ಹಳ್ಳಿ ರೈತ ಹುಂಬನ ಪಾತ್ರಕ್ಕೆ. ಈ ಪಾತ್ರದಲ್ಲಿ ಅಭಿನಯಿಸಿ ಮೆಚ್ಚುಗೆ ಗಳಿಸಿದರು.
ನಂತರ, ಕಣ್ಣಿಟ್ಟ ಖಳನಾಯಕ, ಅಣ್ಣ ತಂಗಿ, ಕೆಟ್ಟ ಮೇಲೆ ಬುದ್ಧಿ ಬಂತು(ವೃತ್ತಿ ರಂಗಭೂಮಿ ನಾಟಕಗಳು), ಛತ್ರಪತಿ ಮಹಾರಾಜ (ಡಪ್ಪಿನಾಟ), ವೀರ ಪೃಥ್ವಿರಾಜ, ದಾನಪ್ಪಗೌಡ, ಬಸವ ಮಹಾ ಮಾನವ, ಊರು ಸುಟ್ಟರೂ ಹನುಮಪ್ಪ ಹೊರಗೆ, ಸುರಪುರ ಸುರಸಿಂಹ ವೆಂಕಟಪ್ಪ ನಾಯಕ(ಹವ್ಯಾಸಿ ನಾಟಕಗಳು) ಸೇರಿದಂತೆ ಮತ್ತಿತರ ನಾಟಕಗಳಲ್ಲಿ ವಿವಿಧ ಪಾತ್ರಗಳಲ್ಲಿ ಅಭಿನಯಿಸಿ ರಂಜಿಸಿದ್ದಾರೆ. ಅಷ್ಟೇ ಅಲ್ಲದೇ ಪತ್ರ, ತ್ಯಾಗರತ್ನ, ಸಿಕ್ರೇಟ್ ಲಾಕ್, ಸ್ಪೆಷಲ್, ಒಂದು ಮುತ್ತು, ಸೂರಿ ಕಿರುಚಿತ್ರಗಳು, ಬಾಬೂಜಿ, ಜನಕ ಚಲನಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಬರತಿದ್ದಿ ನಮ್ಮೆನೆ ತನಾ…. ಕೋಲಾರ ಚಿನ್ನದ ಹೆಣ್ಣ…. ಹುಡುಗಿ ನಿನ್ನ ಕೈಗೆ ಸಿಕ್ಕ…. ಜನಪದ ವೀಡಿಯೋ ಸಾಂಗ್ ಗಳಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ್ದಾರೆ. ಇವರು ಅಭಿನಯಿಸಿದ ಬಸವ ಮಹಾ ಮಾನವ ಹವ್ಯಾಸಿ ನಾಟಕವು ಬಸವ ದೂರದರ್ಶನದಲ್ಲಿ ಪ್ರಸಾರ ಗೊಂಡಿದೆ.
ನಾಟಕಗಳಲ್ಲಿ ಅಭಿನಯಿಸುವಾಗ ಇಂತಹದ್ದೇ ಪಾತ್ರ ಬೇಕೆಂದು ಬಯಸದ ಇವರು ನಿರ್ದೇಶಕರು ನೀಡಿದ ಪಾತ್ರಕ್ಕೆ ನ್ಯಾಯ ಒದಗಿಸುತ್ತಾರೆ. ಪಾತ್ರವನ್ನು ಅರಿತು ಅದಕ್ಕೆ ತಕ್ಕಂತೆ ಸಿದ್ದತೆ ಮಾಡಿಕೊಂಡು ನೈಜವಾಗಿ ಅಭಿನಯಿಸುವ ಕಲೆ ಕರಗತ ಮಾಡಿಕೊಂಡಿದ್ದಾರೆ.
ಹನುಮಂತಪ್ಪ ಶಿವಪುರ, ಕಾಳಪ್ಪ ಪತ್ತಾರ, ಅಯ್ಯನಗೌಡ ಮಲ್ಲಾಪುರ, ಹುಸೇನಸಾಬ ಪಾಟೀಲ್, ರವಿರಾಜ್ ಗಂಗಾವತಿ, ಕೃಷ್ಣ ರಿತಿ ಹೊಸಪೇಟೆ, ಅಮಿತ್ ಗಂಗಾವತಿ, ಹನುಮಂತಪ್ಪ ಪೂಜಾರ ಮತ್ತಿತರರು ಗುರುಗಳಾಗಿ ಇವರಿಗೆ ಅಭಿನಯದ ಕುರಿತು ಮಾರ್ಗದರ್ಶನ ಮಾಡಿದ್ದು ಕಲಾವಿದನನ್ನಾಗಿ ರೂಪಿಸಿದ್ದಾರೆ. ಈ ಕಾರಣಕ್ಕೆ ಸದಾ ನೆನೆಯುತ್ತಾರೆ.
ಮಲ್ಲಾಪುರ ಗ್ರಾಮದ ಬಳಿ ಯಾವುದೇ ಚಲನಚಿತ್ರ, ಕಿರುಚಿತ್ರ, ವೀಡಿಯೋ ಸಾಂಗ್ ಚಿತ್ರೀಕರಣ ನಡೆಸುವ ತಂಡಗಳಿಗೆ ಇವರು ಸದಾ ಸಹಕಾರ ನೀಡುವ ಇವರು ಒತ್ತಡಗಳನ್ನು ಬದಿಗಿರಿಸಿ ಕಲೆ ಮತ್ತು ಕಲಾವಿದರ ಏಳಿಗೆಗೆ ಶ್ರಮಿಸುತ್ತಿದ್ದಾರೆ. ದೇವಿ ಪಾತ್ರದಲ್ಲಿ ನಟಿಸಬೇಕೆಂಬ ಇಚ್ಛೆ ಇವರಿಗಿದ್ದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಕಲಾವಿದನಾಗಿ ತಮ್ಮ ಬೆಳವಣಿಗೆಯಲ್ಲಿ
ನಾರಾಯಣ ಗೌಡ, ರಮೇಶ್ ಮಡಿವಾಳ ಆನೆಗೊಂದಿ, ಗುರಿಕಾರ ದುರುಗಪ್ಪ, ಪ್ರೇಮ, ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ಬೆಂಗಳೂರು ಅವರುಗಳ ಸಹಕಾರವನ್ನು ಯಾವಾಗಲೂ ಸ್ಮರಿಸುತ್ತಾರೆ.
ನೋಡಲು ಒರಟನಾಗಿ ಕಾಣುವ ಇವರು ಸಹೃದಯವಂತರು. ಹಾಸ್ಯ ಸ್ವಭಾವ ಇವರದ್ದು. ಹೀಗಾಗಿ ಇವರಿದ್ದಲ್ಲಿ ನಗೆಯ ವಾತಾವರಣ ಇರುತ್ತದೆ. ಇಂತಹವರಿಂದಲೇ ಹವ್ಯಾಸಿ ರಂಗಭೂಮಿಗೆ ಮೆರಗು ಬಂದಿದೆ. ಹವ್ಯಾಸಿ ರಂಗಭೂಮಿ ಉಳಿಸಿ ಬೆಳೆಸಲು ಹನುಮಂತಪ್ಪ ಗೂಗಿಬಂಡಿ ಅವರಂತಹವರು ಸದಾ ಬೇಕು.
-ಎಂ.ಪರಶುರಾಮ ಪ್ರಿಯ
ಪತ್ರಕರ್ತರು
ಗಂಗಾವತಿ – ಮುನಿರಾಬಾದ್

Total Views: 0
Share This Article