
A life of service continues even after death: Principal Dr. Ravi Chavan
ಸೇವೆಯ ಬದುಕು ಸಾವಿನ ನಂತರವೂ ಉಳಿಯುತ್ತದೆ: ಪ್ರಾಚಾರ್ಯ ಡಾ. ರವಿ ಚವ್ಹಾಣ:


ಗಂಗಾವತಿ: ಮನುಷ್ಯ ಜೀವನ ಇರುವುದು ಕೇವಲ ತಾನೊಬ್ಬನೇ ಬದುಕುವುದಕ್ಕಲ್ಲ, ಸಾಮಾಜಿಕ ಪ್ರಾಣಿಯಾದ ಮನುಷ್ಯನ ಮೇಲೆ ಸಮಾಜದ ಋಣ ಅಪಾರವಾಗಿದೆ.
ಹಾಗಾಗಿ ಅವನು ಆ ಋಣವನ್ನು ತೀರಿಸಬೇಕಾದದ್ದು ಆತನ ಕರ್ತವ್ಯವಾಗಿದೆ . ಋಣ ತೀರಿಸಲು ಸೇವೆ ಒಂದು ಸುಂದರ ಸಾಧನವಾಗಿದೆ. ಪ್ರತಿಯೊಬ್ಬರೂ ಸೇವಾ ಮನೋಭಾವನೆಯನ್ನು ಬೆಳಸಿಕೊಂಡು ಯಾವುದೇ ರೂಪದ ಸಾಮಾಜಿಕ ಸೇವೆಯಲ್ಲಿ ತೊಡಗಬೇಕು.ಅಂದಾಗಲೇ ಜೀವನ ಸಾರ್ಥಕವಾಗುತ್ತದೆ. ಇಂಥ ಸೇವೆಯ ಬದುಕು ಸಾವಿನ ನಂತರವೂ ಉಳಿಯುತ್ತದೆ ಎಂದು ಹೆಚ್ ಆರ್ ಸರೋಜಮ್ಮ ಕಾಲೇಜಿನ ಪ್ರಾಚಾರ್ಯ ಡಾ. ರವಿ ಚವ್ಹಾಣ ಅಭಿಪ್ರಾಯ ಪಟ್ಟರು .ಅವರು ಇಂದು ಗಂಗಾವತಿಯ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಕಲ್ಮಠ ಶ್ರೀ ಚನ್ನಬಸವಸ್ವಾಮಿ ಮಹಿಳಾ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕಗಳ 2025-26 ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅವರು ಮುಂದುವರೆದು ಮಾತನಾಡುತ್ತಾ ಸೇವಾ ಮನೋಭಾವನೆಯನ್ನು ವಿದ್ಯಾರ್ಥಿದಿಶೆಯಲ್ಲಿ ಅಳವಡಿಸಿಕೊಳ್ಳಲು ಎನ್ಎಸ್ಎಸ್ ಒಂದು ಉತ್ತಮ ಯೋಜನೆಯಾಗಿದೆ. ಇದರ ಲಾಭವನ್ನು ವಿದ್ಯಾರ್ಥಿನಿಯರು ಪಡೆಯಬೇಕೆಂದು ಕರೆನೀಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಡಾ. ಶರಣಬಸಪ್ಪ ಕೋಲ್ಕಾರ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಕಾಲೇಜಿನಲ್ಲಿ ಎನ್ಎಸ್ಎಸ್ ಘಟಕಗಳ ಮೂಲಕ ವಿದ್ಯಾರ್ಥಿನಿಯರಿಗೆ ಸೇವೆಯ ಬಗ್ಗೆ ತಿಳಿಸಿಕೊಡಲಾಗುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮ ಅಧಿಕಾರಿ ಡಾ. ವಾಣಿಶ್ರೀ ಪಾಟೀಲ್ ಶಿಬಿರದ ವರದಿ ವಾಚಿಸಿದರು.ಶಿಬಿರಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು, ಉತ್ತಮ ಸ್ವಯಂ ಸೇವಕಿಯರಿಗೆ ಬಹುಮಾನ ವಿತರಿಸಲಾಯಿತು.ಉಪಪ್ರಾಚಾರ್ಯ ಡಾ. ಕೆ.ಎಂ .ಬಸವರಾಜ್ ಸ್ವಾಗತಿಸಿದರು. ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಸುರೇಶಗೌಡ, ಡಾ. ಬಸಮ್ಮ ಶಿಗ್ಗಾವಿ , ಉಪನ್ಯಾಸಕರಾದ ಪ್ರೊ. ಜಿ. ಬಸವರಾಜ್, ಡಾ. ಶಾರದಾ ಪಾಟೀಲ್, ಡಾ. ಜರೀನಾ,ಶಿವಮ್ಮ, ಶಾಂತಮ್ಮ, ವಿಜಯಲಕ್ಷ್ಮಿ, ರಷ್ಮೀ, ಹನುಮಂತ, ಮೆಹಕ್ ಸಾನಿಯಾ, ಶಂಕರನಾಗ್, ಸತೀಶ್, ನಿಮಿಷಾ ಮುಂತಾದವರು ಉಪಸ್ಥಿತರಿದ್ದರು
