ಬಿಸಿರಹಳ್ಳಿ ಗ್ರಾಮದಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
International Workers' Day celebrated in Bicirahalli village

ಬಿಸಿರಹಳ್ಳಿ ಗ್ರಾಮದಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ

ಜಾಹೀರಾತು


ಕೊಪ್ಪಳ: ತಾಲ್ಲೂಕಿನ ಬಿಸಿರಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ ಮತ್ತು ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಅಂತರಾಷ್ಟ್ರೀಯ ಕಾರ್ಮಿಕ ದಿನವನ್ನು ಭಾನುವಾರ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ಶರಣು ಗಡ್ಡಿ ಅವರು, ಕಾರ್ಮಿಕರ ದೀರ್ಘಕಾಲದ ಹೋರಾಟದ ಪ್ರತಿಫಲವಾಗಿ ಮೇ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು. ಮೇ ದಿನಕ್ಕೆ ಐತಿಹಾಸಿಕ ಹೋರಾಟದ ಹಿನ್ನೆಲೆ ಇದೆ. ಅಮೆರಿಕದ ಚಿಕಾಗೋ ನಗರದಲ್ಲಿ 1886ರ ಮೇ 4ರಂದು ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿದಾಗ, ಪೊಲೀಸ್ ದೌರ್ಜನ್ಯದಿಂದ ಆ ಹೋರಾಟವನ್ನು ಹತ್ತಿಕ್ಕಲಾಯಿತು ಎಂದು ವಿವರಿಸಿದರು.
ಆ ಸಮಯದಲ್ಲಿ ಕಾರ್ಮಿಕರನ್ನು ದಿನಕ್ಕೆ 12 ರಿಂದ 16 ಗಂಟೆಗಳವರೆಗೆ ದುಡಿಸಿಕೊಳ್ಳಲಾಗುತ್ತಿತ್ತು. ಈ ಶೋಷಣೆಗೆ ವಿರೋಧವಾಗಿ ನಡೆದ ರಕ್ತಸಿಕ್ತ ಹೋರಾಟದ ಫಲವಾಗಿ ಮೇ ದಿನ ಹುಟ್ಟಿಕೊಂಡಿದೆ. ದಿನಕ್ಕೆ 8 ಗಂಟೆಗಳ ಕೆಲಸದ ಅವಧಿ, ನ್ಯಾಯವಾದ ವೇತನ, ಕಾರ್ಮಿಕರ ಹಕ್ಕುಗಳು ಹಾಗೂ ಸಂಘಟನೆಗಳ ಸ್ಥಾಪನೆಗಾಗಿ ಕಾರ್ಮಿಕರು ಹೋರಾಟ ನಡೆಸಿದ್ದು, ಇಂದಿಗೂ ಆ ಹೋರಾಟದ ಸ್ಪೂರ್ತಿಯೇ ಮೇ ದಿನವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ, ಪ್ರಸ್ತುತ ಸರ್ಕಾರವು 8 ಗಂಟೆಗಳ ಕೆಲಸದ ಅವಧಿಯನ್ನು ದುರ್ಬಲಗೊಳಿಸಿ 12 ಗಂಟೆಗಳ ದುಡಿಮೆಯನ್ನು ಜಾರಿಗೆ ತರಲು ನಾಲ್ಕು ಲೇಬರ್ ಕೋಡ್‌ಗಳನ್ನು ಮಾಲೀಕರ ಪರವಾಗಿ ಜಾರಿಗೊಳಿಸುತ್ತಿದೆ ಎಂದು ಆರೋಪಿಸಿ, ಎಲ್ಲಾ ಕಾರ್ಮಿಕ ವರ್ಗವು ಮತ್ತೊಂದು ಐತಿಹಾಸಿಕ ಚಳುವಳಿಗೆ ಒಂದಾಗಬೇಕೆಂದು ಕರೆ ನೀಡಿದರು.
ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ನಾಗರಾಜ್ ಬಿಕ್ಕನಹಳ್ಳಿ ಅವರು ಮಾತನಾಡಿ, ಕಟ್ಟಡ ಕಾರ್ಮಿಕರ ಹಲವು ಸಮಸ್ಯೆಗಳು ಇನ್ನೂ ಪರಿಹಾರವಾಗಿಲ್ಲ. ಸರ್ಕಾರ ಘೋಷಿಸಿರುವ ಸೌಲಭ್ಯಗಳು ಕಾಲಕ್ಕೆ ತಕ್ಕಂತೆ ಕಾರ್ಮಿಕರಿಗೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರವು ಎಲ್ಲಾ ಸೌಲಭ್ಯಗಳನ್ನು ತಕ್ಷಣ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಈ ಕಾರ್ಯಕ್ರಮದಲ್ಲಿ ಸಂಘದ ಮುಖಂಡರಾದ ಬರಮಪ್ಪ ದೊಡ್ಮನಿ, ಸಿದ್ದಪ್ಪ, ಹನುಮಂತ, ಮೋದಿನ್ ಸಾಬ್,ಮೌನೇಶ್, ಮೌಲ ಹುಸೇನ್, ವೀರಣ್ಣ ಸಜ್ಜನ್, ನಿಸಾರ್ ಅಹ್ಮದ, ಶಿವಣ್ಣ, ಮಂಜುನಾಥ್, ಮೌನೇಶ್, ರಾಜೇಶ್ ಜಾಲಹಳ್ಳಿ ಸೇರಿದಂತೆ ಹಲವಾರು ಕಾರ್ಮಿಕರು ಭಾಗವಹಿಸಿದ್ದರು.

Total Views: 0
Share This Article