
ಪರಿಸರ ಇಲಾಖೆ ಜನರ ಪಾಲಿಗೆ ಸತ್ತುಹೋಗಿದೆ:
ಮಹೇಶ ವದ್ನಾಳ
Environment Department is dead to the people: Mahesh Vadnal
ಪರಿಸರ, ಜೀವ ಉಳಿಸಿಕೊಳ್ಳಲು ನಾವೇ ಹೋರಾಡಬೇಕು


ಕೊಪ್ಪಳ: ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆಯಿಂದ ನಗರಸಭೆ ಆವರಣದಲ್ಲಿ ನಡೆಯುತ್ತಿರುವ 55ನೇ ದಿನದ ಧರಣಿಯಲ್ಲಿ ಹಿರೇಬಗನಾಳ ರೈತ ಮಹೇಶ ವದ್ನಾಳ ಮಾತನಾಡಿ, ಕಾರ್ಖಾನೆ ಹರಡುವ ಕಪ್ಪುದೂಳು, ಕಲ್ಲಿದ್ದಲು ಸುಡುವ ಹಾರು ಬೂದಿ, ಚಿಮಣಿಯಿಂದ ಬರುವ ದಟ್ಟ ಹೊಗೆ, ವಿಷಾನೀಲ, ಯಂತ್ರದ ಕರ್ಕಶ ಶಬ್ಧ, ಬಹು ಚಕ್ರಗಳ ಭಾರಿ ವಾಹನಗಳು, ಟಿಪ್ಪರ್ ಓಡಾಟದಿಂದ ನಮ್ಮ ಜೀವನ ದುರ್ಬರವಾಗಿದೆ. ನಿನ್ನೆ ದಿನ ಕೊಪ್ಪಳ ಪರಿಸರ ಅಧಿಕಾರಿಗಳು ನಮ್ಮ ಒತ್ತಾಯದ ಮೇರೆಗೆ ಹಿರೇಬಗನಾಳಕ್ಕೆ ಬಂದರು. ಅವರಿಗೆ ನಮಗೆ ಕಾರ್ಖಾನೆಗಳು ಉಂಟು ಮಾಡುವ ಮಾಲಿನ್ಯವನ್ನು ಓಣಿಗಳಲ್ಲಿ ಸುತ್ತಾಡಿ, ದೇವಸ್ಥಾನ, ಶಾಲೆ, ಜಮೀನುಗಳಿಗೆ ಕರೆದುಕೊಂಡು ಹೋಗಿ ತೋರಿಸಲಾಯಿತು. ಹಗುರವಾಗಿ ಹೇಳಿಕೆ ನೀಡಿ ತಪ್ಪಿಸಿಕೊಂಡು ಹೋಗುವಾಗ ಗ್ರಾಮದವರೆಲ್ಲಾ ಅಡ್ಡ ಹಾಕಿ ನಮ್ಮನ್ನು ಇಲ್ಲಿಂದ ಬೇಕಾದರೆ ಬಂಧಿಸಿ, ನೀವು ನಮ್ಮೊಂದಿಗೆ ಎರಡು ದಿನ ಇರಬೇಕು. ಗ್ರಾಮದಲ್ಲಿ ವಾಸ್ತವ್ಯ ಮಾಡಬೇಕು. ಯಾವಾಗಲೂ ನಿಮ್ಮ ಇಲಾಖೆ ದೂಳು ಇದೆ ಎಂದು ರೈತರು ಹೇಳುತ್ತಾರೆ ಎಂದು ವರದಿ ಮಾಡುತ್ತೀರಿ.
ಆದರೆ ಇಲ್ಲಿ ನಿಮಗೆ ದೂಳು ಕಾಣುತ್ತಿಲ್ಲವೇ? ನಿಮಗೆ ಕಂಡುಬರುವ ದೂಳು, ಮಾಲಿನ್ಯ ಏಕೆ ಸಾಕ್ಷೀಕರಿಸುವುದಿಲ್ಲ? ದೂಳು ಅಡರಿದ ಕರಿಬೇವು, ಸೊಪ್ಪು ತಿಂದು ತೋರಿಸಿ ಎಂದಾಗ ಸಾರಾಸಗಟಾಗಿ ತಿರಸ್ಕರಿಸಿದ ಪರಿಸರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. ಆಗ ಹಿರಿಯ ಪರಿಸರ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿಸಿ ಸೋಮವಾರವರೆಗೆ ತಡೆಯಿರಿ ನಾನು ಖುದ್ದಾಗಿ ಬಂದು ನೋಡಿ ಕ್ರಮ ತೆಗೆದುಕೊಳ್ಳುತ್ತೇನೆ. ಭರವಸೆ ಇಡಿ ಎಂದು ಗ್ರಾಮದ ಜನರಲ್ಲಿ ಕೇಳಿಕೊಂಡಾಗ ಅಧಿಕಾರಿಗಳನ್ನು ಬಿಟ್ಟುಕಳಿಸಲಾಯಿತು. ಇಷ್ಟೊಂದು ವಾತಾವರಣ ಪರಿಸ್ಥಿತಿ ಕೆಟ್ಟಿರುವಾಗ ವನ್ಯಾ ಸ್ಟೀಲ್ ವಿಸ್ತರಣೆಗೆ, ದೇವಿಶ್ರೀ ಸ್ಪಾಂಜ್ ಐರನ್ ಹೊಸ ಘಟಕಕ್ಕೆ ಅನುಮತಿ ಕೊಡುತ್ತಾರೆ ಎಂದರೆ ನಮ್ಮನ್ನು ಮುಗಿಸಲು ಹೊರಟಂತಿದೆ. ಇದನ್ನು ಪ್ರಶ್ನಿಸಿ ಮಾತನಾಡಿದರೆ ಗೂಂಡಾಗಳಿಂದ ಹಲ್ಲೆ ಮಾಡಿಸುತ್ತಾರೆ.
ಇವರಿಗೆ ಹೆದರಿ ನಾವು ಊರು ತೊರೆಯಬೇಕು ಇಲ್ಲವೇ ಸಾಯಲು ಸಿದ್ಧರಾಗಬೇಕು ಎಂದು ಆತಂಕ ಹೊರಹಾಕಿದರು. ಗ್ರಾಮ ರೈತ ಘಟಕದ ಅಧ್ಯಕ್ಷ ಶಿವಪ್ಪ ದೇವರಮನಿ ಮಾತನಾಡಿ ಇಲ್ಲಿ ಹಾಳಾದ ಬೆಳೆಯನ್ನು ತಂದಿದ್ದೇವೆ. ಇದನ್ನೇ ಆ ಅಧಿಕಾರಿಗಳಿಗೆ ತಿನ್ನಲು ಕೊಡಲಾಯಿತು. ಅವರು ಇದನ್ನು ಕೈಯಲ್ಲಿ ಹಿಡಿದುಕೊಳ್ಳಲು ಸಹ ಹಿಂದೆಟು ಹಾಕಿದರು. ನಮಗೆ ಇಷ್ಟೆಲ್ಲಾ ಗೋಳು ಎದುರಾದರೂ ರಾಜಕಾರಣಿಗಳು ಏನೂ ಆಗಿಲ್ಲ ಎನ್ನುವಂತೆ ನಡೆದುಕೊಳ್ಳುವುದು, ಅಧಿಕಾರಿಗಳು ಉಡಾಫೆಯಿಂದ ವರ್ತಿಸುವದು ನಾವೇ ನಾಚಿಕೆ ಪಟ್ಟು ಕೊಳ್ಳಬೇಕು. ಮುಂದಿನ ಚುನಾವಣೆಯಲ್ಲಿ ನಾವು ಪಾಠ ಕಲಿಸುವುದು ಅನಿವಾರ್ಯ ಎಂದರು.
ಜಗದೀಶ ಕುಂಬಾರ ಮಾತನಾಡಿ, ನನ್ನ ಮೆಣಸಿನಕಾಯಿ ಕೇವಲ ಇಪ್ಪತ್ತೈದು ಪ್ರಮಾಣ ಮಾತ್ರ ಇಳುವರಿ ಬಂದಿದೆ. ಕಾರ್ಖಾನೆಗೆ ಹೋಗಿ ಕೇಳಿದರೆ ನಾವು ಹೇಳಿದಂತೆ ಕೇಳಿದರಸ್ಟೇ ಪರಿಹಾರ ಇಲ್ಲದಿದ್ದರೆ ಎಲ್ಲಿಗಾದರೂ ಹೋಗಿ ಎಂದು ಬೆದರಿಸುತ್ತಿದ್ದಾರೆ. ನಮ್ಮ ರೈತರು ಹಾಳಾದ ಬೆಳೆ ಗೇಟಿಗೆ ಒಯ್ದರೆ ಪೊಲೀಸರು ಬಂದು ಕೇಸು ಹಾಕುವುದಾಗಿ ಬೆದರಿಕೆ ಹಾಕಿ ಕಳಿಸುತ್ತಾರೆ.
ಗೂಂಡಾಗಳ ಬೆದರಿಕೆಯಡಿಯಲ್ಲಿ ನಾವು ಬದುಕು ನೂಕುತ್ತಿದ್ದೆವೆ ಎಂದರು. ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಡಿ.ಎಚ್. ಪೂಜಾರ, ಸರೋಜಾ ಬಾಕಳೆ, ಪುಷ್ಪಲತಾ ಏಳುಭಾವಿ, ಪ್ರಕಾಶಕ ಡಿ.ಎಂ.ಬಡಿಗೇರ, ಎಸ್.ಬಿ.ರಾಜೂರು, ಹನುಮಂತಪ್ಪ ಗೊಂದಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಯಮನೂರಪ್ಪ ಹಾಲಳ್ಳಿ ಬಸಾಪುರ, ಶರಣು ಗಡ್ಡಿ, ಮಹಾದೆವಪ್ನ ಮಾವಿನಮಡು, ಮಹಾಂತೇಶ ಕೊತಬಾಳ ನೇತೃತ್ವವನ್ನು ವಹಿಸಿದ್ದರು.
ಹೋರಾಟ ಬೆಂಬಲಿಸಿ ಹಿರೇಬಗನಾಳ ರೈತರಾದ ಮಲ್ಲಪ್ಪ ಮೇಟಿ, ಜಗದೀಶ್ ಕುಂಬಾರ, ಗಣೇಶ ವಿಶ್ವಕರ್ಮ , ಮಂಜುನಾಥ ಕೊಂಡನಹಳ್ಳಿ, ಶಂಕ್ರಪ್ಪ ಕರ್ಕಿಹಳ್ಳಿ ಅನೇಕರು ಪಾಲ್ಗೊಂಡರು. ಶೀಘ್ರವೇ ಇನ್ನಷ್ಟು ಪ್ರಖರವಾದ ಹೋರಾಟ ರೂಪಿಸಲು ಸಂಘಟನೆ ಚಿಂತಿಸಿದೆ. ಅಲ್ಲಿನ ಬೆಳೆಗಳನ್ನು ರಾಷ್ಟ್ರಪತಿ, ಪ್ರಧಾನಮಂತ್ರಿ, ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಸಚಿವ ಶಾಸಕರ ಮನೆಗೆ ಕಳುಹಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಎಂದು ತಿಳಿಸಿದ್ದಾರೆ.




