Breaking News

ಮಠ ಪೀಠಗಳು ಸಾರ್ವಜನಿಕ ಸಂಸ್ಥೆಗಳು. ಸಾರ್ವಜನಿಕರ ಕಾಣಿಕೆಯಿಂದ ನಡೆಯುವ ಸಂಸ್ಥೆಗಳು..! ಭಕ್ತರ ಮುಂದೆ ವಾರ್ಷಿಕ ಲೆಕ್ಕ ಪತ್ರ ಮಂಡನೆ ಮಾಡಬೇಕು ಇದು ನ್ಯಾಯ..?

The short URL of the present article is: https://kalyanasiri.in/xxcg

*ಮಠ ಪೀಠಗಳು ಗೀಜಗನ ಗೂಡಿನಂತಾಗದೇ ಗುರು ಬಸವಣ್ಣನವರ ಮಹಾಮನೆಯಂತಾಗಬೇಕು-ಶರಣ ರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿ

ಮಠ ಪೀಠಗಳು ಸಾರ್ವಜನಿಕ ಸಂಸ್ಥೆಗಳು. ಸಾರ್ವಜನಿಕರ ಕಾಣಿಕೆಯಿಂದ ನಡೆಯುವ ಸಂಸ್ಥೆಗಳು..! ಭಕ್ತರ ಮುಂದೆ ವಾರ್ಷಿಕ ಲೆಕ್ಕ ಪತ್ರ ಮಂಡನೆ ಮಾಡಬೇಕು ಇದು ನ್ಯಾಯ ..?

Math Peethas are public institutions. Institutions run by public donations..! Is it fair that annual accounts should be presented to the devotees..?

Screenshot 2025 12 14 14 10 06 30 965bbf4d18d205f782c6b8409c5773a46813171236359898698

ಶರಣ ರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿ

ಎಲ್ಲಾ ಮಠ ಪೀಠಗಳು ಸಾರ್ವಜನಿಕ ಸಂಸ್ಥೆಗಳು. ಸಾರ್ವಜನಿಕರ ಕಾಣಿಕೆಯಿಂದ ನಡೆಯುವ ಸಂಸ್ಥೆಗಳು.

ಎಲ್ಲಾ ಮಠಗಳು ಭಕ್ತರ ಮುಂದೆ ವಾರ್ಷಿಕ ಲೆಕ್ಕ ಪತ್ರ ಮಂಡನೆ ಮಾಡಬೇಕು. ಇದರಿಂದ ತಾನು ನೀಡುವ ಕಾಣಿಕೆ ಎಲ್ಲಿ ಸಲ್ಲುತ್ತಿದೆ ಎಂದು ಭಕ್ತರಿಗೆ ಅರಿವಾಗುತ್ತದೆ.

ಭಕ್ತನು ತನು-ಮನ-ಧನವನ್ನು ಗುರು-ಲಿಂಗ-ಜಂಗಮಕ್ಕೆ ಸವೆಸಬೇಕು ಎನ್ನುವುದು ಲಿಂಗಾಯತ ಧರ್ಮದ ಸಿದ್ಧಾಂತ.

*ಹಾಗೆಯೇ ಭಕ್ತನ ಧನವನ್ನು ಪಡೆದ ಜಂಗಮನು ಆ ಧನವನ್ನು ಭಕ್ತರೋದ್ಧಾರಕ್ಕಾಗಿ ಸಮಾಜದ ಉದ್ದಾರಕ್ಕಾಗಿ ಬಳಸಬೇಕೆ ವಿನಹ ತನ್ನ ಭೋಗ ಜೀವನಕ್ಕಾಗಿ, ತನ್ನವರ ಉದ್ಧಾರಕ್ಕಾಗಿ, ರಕ್ತ ಸಂಬಂಧಿಗಳಿಗಾಗಿ ಕುಲಬಾಂಧವರಿಗಾಗಿ ಬಳಸಬಾರದು ಎನ್ನುವುದು ಕೂಡ ಲಿಂಗಾಯತ ಧರ್ಮ ಸಿದ್ದಾಂತ.*

*ಗುರು ಬಸವಣ್ಣನವರ ವಚನ:*
*ಗೀಜಗನ ಗೂಡು, ಕೋಡಗದಣಲ ಸಂಚ,*
*ಬಾದುಮನ ಮದುವೆ, ಬಾವಲ ಬಿದ್ದಿನಂತೆ ಜೂಜುಗಾರನ ಮಾತು.*
*ಬೀದಿಯ ಗುಂಡನ ಸೊಬಗು, ಓಡಿನೊಳಗಗೆಯ ಹೊಯ್ದಂತೆ ಕಾಣಿರೋ.*
*ಶಿವನಾದಿ ಅಂತುವನರಿಯದವನ ಭಕ್ತಿ ಸುಖಶೋಧನೆಗೆ ಮದ್ದ ಕೊಂಡಂತೆ, ಲಿಂಗದೇವಾ.*

ಕೇವಲ ತನ್ನವರಿಗಾಗಿ ತನ್ನ ಕುಲಬಾಂಧವರಿಗಾಗಿ ತನ್ನ ರಕ್ತ ಸಂಬಂಧದವರಿಗಾಗಿ ತನಗೆ ಇಷ್ಟವಾಗುವವರಗಾಗಿ ತನ್ನನ್ನು ಕೊಂಡಾಡುವವರಿಗಾಗಿ ಮಾಡಿದರೆ, ಆ ಮಠಪೀಠಗಳು ಗೀಜಗನ ಗೂಡಿನಂತೆ.

*ಗೀಜಗ ಸುಂದರವಾದ ಗೂಡು ಕಟ್ಟಿ ಅದರಲ್ಲಿ ಕೇವಲ ತನ್ನವರನ್ನು ಸಾಕುತ್ತದೆ ಹೊರತು ಗೀಜಗದ ಸಂತತಿಯ ದಾಸೋಹಕ್ಕಾಗಿ ಉಪಯೋಗಿಸುವುದಿಲ್ಲ.*

ಸಂಗ್ರಹಿಸಿದ ಕಾಣಿಕೆ ತನ್ನವರಿಗಾಗಿ ತನಗೆ ಬೇಕಾದವರಿಗಾಗಿ ಮಾತ್ರ ಸಂಗ್ರಹಿಸಿ ಉಪಯೋಗಿಸಿದರೆ, ಅದು ಕೋಡಗದ ಅಣಲೊಗಣ ಸಂಚದಂತೆ.

*ಕೋತಿ (=ಕೋಡಗ)ಹೆಚ್ಚಿಗೆ ಆಹಾರ ಸಿಕ್ಕಾಗ ತನ್ನ ಅಣಲೊಳಗೆ (=ದವಡೆಯೊಳಗೆ) ಸಂಗ್ರಹಿಸಿಟ್ಟುಕೊಳ್ಳುತ್ತದೆ. ಆ ಯಾರೂ ಇಲ್ಲದ ಜಾಗದಲ್ಲಿ ಮರ ಹತ್ತಿ ಕುಳಿತು ತಾನೊಂದೇ ತಿನ್ನುತ್ತದೆಯೇ ಹೊರತು ಕೋತಿಗಳ ಸಂಕುಲಕ್ಕೆ ದಾಸೋಹ ಮಾಡಲು ಉಪಯೋಗಿಸುವುದಿಲ್ಲ.*

ನಿರಂತರ ದಾಸೋಹ ಮಾಡುತ್ತೇವೆ ಅನಾಥಾಶ್ರಮ ನಡೆಸುತ್ತೇವೆ ವೃದ್ದಾಶ್ರಮ ನಡೆಸುತ್ತೇವೆ ಎಂದು ಹೇಳಿ ದಾಸೋಹ ನಡೆಸದೆ ಅನಾಥಾಶ್ರಮ ನಡೆಸದೆ ವೃದ್ಧಾಶ್ರಮ ನಡೆಸದೆ ಹೋದರೆ *ಅದು ಬಾದುಮನ ಮದುವೆಯಂತೆ*

ಮಕ್ಕಳು ಆಡಿ ಮಾಡುವ ಬೊಂಬೆ(ಬಾದುಮ)ಗಳ ಮದುವೆಯಲ್ಲಿ ಮದುವೆಗೆ ಎಲ್ಲರನ್ನೂ ಕರೆಯುತ್ತಾರೆ ಮದುವೆ ಮಾಡಿದಂತೆ ಮಾಡುತ್ತಾರೆ ಊಟ ನೀಡಿದಂತೆ ಮಾಡುತ್ತಾರೆ ಆದರೆ ಅಲ್ಲಿ ನಿಜವಾಗಿ ಮದುವೆ ಇರುವುದಿಲ್ಲ. ಸುಮ್ಮನೆ ಅದೊಂದು ಆಟ ಮಾತ್ರ. ಅವರಿಗೆ ಅದು ವಿನೋದ ಮಾತ್ರ.

ಅದೇ ರೀತಿ ನಿರಂತರ ದಾಸೋಹ ಮಾಡುತ್ತೇವೆ ಧರ್ಮ ಕ್ಷೇತ್ರಕ್ಕೆ ತಾವು ಬರಬೇಕು ಎಂದು ಕರೆದು, ಎಂದು ಹೇಳಿ ಕಾಣಿಕೆ ಸಂಗ್ರಹಿಸಿ ಧರ್ಮ ಕ್ಷೇತ್ರಕ್ಕೆ ಹೋದಾಗ, ಮಠಗಳಿಗೆ ಹೋದಾಗ ಹೊಡೆದೋಡಿಸುವುದು, ಪ್ರಸಾದ ನೀಡದೆ ಕಳಿಸುವುದು ಇದು ಬಾದುಮನ ಮದುವೆಯಂತೆ.

ಜೂಜುಗಾರ ದಿಕ್ಕೊಂದು ಸುಳ್ಳು ಹೇಳುತ್ತ, ನಾಳೆ ಜೂಜಿನಲ್ಲಿ ಗೆಲ್ಲುವವನಿದ್ದೇನೆ. ಅದನ್ನು ಸಾಧಿಸುತ್ತೇನೆ ಇದನ್ನು ಸಾಧಿಸುತ್ತೇನೆ ಎಂದು ಓಡಾಡುತ್ತ, ದುಷ್ಟರ ಸಂಗ ಮಾಡಿದ ಫಲವಾಗಿ ಕೊನೆಗೆ ಇದ್ದುದನ್ನೆಲ್ಲಾ ಕಳೆದುಕೊಂಡು ದರಿದ್ರನಾಗುತ್ತಾನೆ.

ಅದೇ ರೀತಿ ತನ್ನ ಮಠದ ಸಂಕಲ್ಪಗಳನ್ನೆಲ್ಲ ಆದರ್ಶಗಳನೆಲ್ಲ ಬಿಟ್ಟು, ಅವರಿವರನ್ನು ತೃಪ್ತಿಪಡಿಸುತ್ತಾ ತಿರುಗುವವನ ಮಾತು ಜೂಜುಗಾರನ ಮಾತಿನಂತೆ ವ್ಯರ್ಥ ವ್ಯರ್ಥ.

ಆಳಾಗಬಲ್ಲವನು ಆಳುವನು ಅರಸಾಗಿ ಎನ್ನುವಂತೆ ಕಷ್ಟಪಟ್ಟು ದುಡಿದು ಸಂಪಾದನೆ ಮಾಡಿ ಸೊಬಗಿನಿಂದ ಮೆರೆದರೆ ಅದಕ್ಕೊಂದು ಅರ್ಥ ಬರುತ್ತದೆ.

*ಇದ್ದಲ್ಲಿಯೂ ಸಲುವ| ಹೋಗಿದ್ದಲ್ಲಿಯೂ ಸಲುವ| ವಿದ್ಯೆಯ ಕಲಿತ ಬಡವ ತಾ ಗಿರಿಯ| ಮೇಲಿದ್ದರೂ ಸಲುವ ಸರ್ವಜ್ಞ ||*

ಎನ್ನುವ ಸರ್ವಜ್ಞನ ವಾಣಿಯಂತೆ ಕಷ್ಟಪಟ್ಟು ಓದುವಂತಹ ವಿದ್ಯಾರ್ಥಿಗಳಿಗೆ ಜನ ಮೆಚ್ಚುತ್ತಾರೆ ಹೊರತು ಸುಮ್ಮನೆ ಸ್ಟೈಲ್ ಮಾಡಿಕೊಂಡು ಬೀದಿಯಲ್ಲಿ ಓಡಾಡುವಂತಹ ಗುಂಡನಿಗೆ ಯಾರು ಮೆಚ್ಚುವುದಿಲ್ಲ.

ಅದೇ ರೀತಿ ಕಷ್ಟಪಟ್ಟು ತಪಸ್ಸು ಮಾಡಿ ಸಾಧನೆ ಮಾಡಿ ಸ್ವಾಮಿಯಾಗಿ ಯೋಗಿಯಾಗಿ ಕಾವಿ ಧರಿಸಿದರೆ ಅಂಥವರನ್ನು ಗುರುವೆನ್ನುತ್ತಾರೆ. ಅಂಥವರನ್ನು ಭಕ್ತರು ಮೆಚ್ಚುತ್ತಾರೆ ಹೊರತು, ಸಾಧನೆಯೂ ಇಲ್ಲ ಅಧ್ಯಯನವೂ ಇಲ್ಲ ತಪಸ್ಸು ಇಲ್ಲ ಪೂಜೆ ನಿಷ್ಠೆಯೂ,ಇಲ್ಲ, ಗುರು ನಿಷ್ಠೆ ಇಲ್ಲ ಲಿಂಗನಿಷ್ಠೆ ಇಲ್ಲ. ಇಂಥವರು ಕಾವಿಧರಿಸಿದರೆ ಅವರ ಸೊಬಗು ಬೀದಿಯ ಗುಂಡನ ಸೊಬಗಿನಂತೆ ನಿಷ್ಪ್ರಯೋಜಕವಾದುದು. ಅಂಥವರನ್ನು ಅಂಥವರು ಮಾತ್ರ ಅವರನ್ನು ಮೆಚ್ಚುತ್ತಾರೆ.

ಇವೆಲ್ಲ ಓಡಿನೊಳಗೆ ಅಗೆ ಹೊಯ್ದಂತೆ. ಹಂಚಿನೊಳಗೆ ಸಸಿ ನೆಟ್ಟರೆ ಯಾವ ರೀತಿ ಅದು ಬೆಳೆದು ಫಲ ಕೊಡುವುದಿಲ್ಲವೋ ಅದೇ ರೀತಿ ಯೋಗ, ಸಾಧನೆ, ಸಿದ್ದಿ, ಪೂಜೆ, ಅನುಷ್ಠಾನ, ಅಧ್ಯಯನ, ತಪಸ್ಸು ಇಲ್ಲದ ವ್ಯಕ್ತಿಯ ಕಾಷಾಯಂಬರ ಫಲ ಕೊಡುವುದಿಲ್ಲ.

ಇಂದಿನ ಕಾಲದಲ್ಲಿ ಯೋಗ, ಸಾಧನೆ, ಸಿದ್ದಿ, ಪೂಜೆ, ಅನುಷ್ಠಾನ, ಅಧ್ಯಯನ, ತಪಸ್ಸು, ಧ್ಯಾನ ಮೌನ, ಇಷ್ಟಲಿಂಗಯೋಗ ಇಂತಹ ಶಬ್ದಗಳು ಕಾವಿ ಸಂಕುಲದಿಂದಲೇ ಮರೆಯಾದಂತೆ ತೋರುತ್ತಿದೆ.

ಸುಖ ಶಾಂತಿ ನೆಮ್ಮದಿಗಳು ಆತ್ಮನು ಮೂಲ ಗುಣಗಳು. ಸುಖ ಎನ್ನುವುದು ಅಂತರಂಗದಿಂದ ಹೊರಹೊಮ್ಮಬೇಕೆ ಹೊರತು ಅದಕ್ಕಾಗಿ ಔಷಧಿ ತೆಗೆದುಕೊಂಡರೆ ಸಿಗುವಂತಹುದಲ್ಲ. ಅದೇ ರೀತಿ ಶಿವನಾರು? ಗುರು ಯಾರು? ಲಿಂಗದೇವ ಯಾರು? ಶಿವನಿಗೂ ಗುರುವಿಗೂ ಲಿಂಗ ದೇವರಿಗೂ ಇರುವ ಸಂಬಂಧವೇನು? ಇವೆಲ್ಲವನ್ನು ಅರಿತು ಭಕ್ತಿ ಮಾಡಬೇಕು ಇಲ್ಲದಿದ್ದರೆ ಇಲ್ಲದಿದ್ದರೆ ಅದು ಸುಖ ಶೋಧನೆಗೆ ಮುದ್ದುಕೊಂಡಂತೆ. ಆ ಕಡೆ ಸುಖವೂ ಸಿಗುವುದಿಲ್ಲ ಮುದ್ದು ತಿನ್ನುವುದು ಬಿಡುವುದಿಲ್ಲ ಎನ್ನುವಂತಾಗುತ್ತದೆ.

ಎಲ್ಲಿಯವರೆಗೆ ಮಠಪೀಠಗಳು ಭಕ್ತರ ಮುಂದೆ ವಾರ್ಷಿಕ ಲೆಕ್ಕ ಪತ್ರ ಮಂಡನೆ ಮಾಡುವುದಿಲ್ಲವೋ ಅಂತಹ ಮಠ-ಪೀಠಗಳಿಗೆ ಭಕ್ತರು ಕಾಣಿಕೆ ಕೊಡುವುದನ್ನು ನಿಲ್ಲಿಸಬೇಕು.

ಗೀಜಗನ ಗೂಡಿನಂತಿರುವ ಮಠಪೀಠಗಳಿಗೆ, ಕೋಗಡದಣಲ ಸಂಚಿನಂತೆ ಅರ್ಥ ಸಂಗ್ರಹಿಸುವ ಮಠಪೀಠ ಗಳಿಗೆ, ಬಾದುಮನ ಮದುವೆಯಂತೆ ವ್ಯವಹರಿಸುವ ಮಠ ಪೀಠಗಳಿಗೆ, ಜೂಜುಗಾರನ ಮಾತಿನಂತೆ ಭರವಸೆಗಳನ್ನು ಕೊಡುತ್ತಲೇ ಹೋಗುವ ಮಠ ಪೀಠಗಳಿಗೆ, ಬೀದಿಯ ಗುಂಡನ ಸೊಬಗಿನಂತೆ ಮೆರೆಯುವ ಮಠಪೀಠಗಳಿಗೆ ಕಾಣಿಕೆ ನೀಡುವುದನ್ನು ನಿಲ್ಲಿಸಲೇಬೇಕು.

*ಪಾಪ ಕಾರ್ಯಗಳಿಗೆ ದುಷ್ಕೃತ್ಯಗಳಿಗೆ ಧನವಿನಿಯೋಗಿಸುವ ಮಠಪೀಠ ಗಳಿಗೆ ನಾನು ಕಾಣಿಕೆ ನೀಡುವುದನ್ನು ನಿಲ್ಲಿಸಿ ಐದು ವರ್ಷಗಳಾಯಿತು. ಇದರಿಂದ ನನ್ನ ಶ್ರಮ ಅಪಾತ್ರದಾನಕ್ಕೆ ಸಲ್ಲುವುದು ನಿಂತಿದೆ.*

*ಧರ್ಮ ಪ್ರಚಾರಕ ಜಂಗಮರು ನಮ್ಮ ಮನೆಗೆ ಬಂದಾಗ, ಅವರಿಗೆ ವೈಭವದ ಜೀವನಕ್ಕಾಗಿ ನೀಡದೆ, ಕೇವಲ ಅಪ್ಯಾಯನಕ್ಕಾಗಿ ನೀಡುತ್ತಾ ಲಾಂಛನಕ್ಕೆ ಶರಣೆನ್ನುತ್ತ ಸಾಗಿಸುವ ಜೀವನ ಆದಿ ಶರಣರ ಮಾರ್ಗದಲ್ಲಿ ನಡೆಯುವ ಜೀವನ ಎಂದು ಮನದಟ್ಟಾಗುತ್ತಿದೆ.*

-ಶರಣ ರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿ

The short URL of the present article is: https://kalyanasiri.in/xxcg

About Mallikarjun

Check Also

screenshot 2025 12 17 18 45 28 37 e307a3f9df9f380ebaf106e1dc980bb6.jpg

ಉದ್ಯೋಗ ಖಾತ್ರಿ ಸೇರಿ ಮಹತ್ವದ ಯೋಜನೆಗಳ ಬದಲಾವಣೆಯಿಂದ ಬಡವರಿಗೆ ಅನ್ಯಾಯ: ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕ ಡಾ. ಆನಂದ್ ಕುಮಾರ್

ಉದ್ಯೋಗ ಖಾತ್ರಿ ಸೇರಿ ಮಹತ್ವದ ಯೋಜನೆಗಳ ಬದಲಾವಣೆಯಿಂದ ಬಡವರಿಗೆ ಅನ್ಯಾಯ: ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕ ಡಾ. ಆನಂದ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.