Women should get free legal services – Justice Mahantesh Dargad

ಕೊಪ್ಪಳ ಆಗಸ್ಟ್ 21 (ಕರ್ನಾಟಕ ವಾರ್ತೆ): ಮಹಿಳೆಯರು ಕಾನೂನು ಸೇವಾ ಪ್ರಾಧಿಕಾರಗಳ ಮೂಲಕ ಉಚಿತವಾದ ಕಾನೂನು ಸೇವೆ ಪಡೆದುಕೊಳ್ಳುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕೊಪ್ಪಳ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ಎಸ್. ದರಗದ್ ಹೇಳಿದರು.
ಅವರು ಬುಧವಾರ ಕೊಪ್ಪಳದ ಕೃಷಿ ವಿಸ್ತರಣಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಬೆಂಗಳೂರು. ದೇವದಾಸಿ ಪುನರ್ವಸತಿ ಯೋಜನೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮತ್ತು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕೊಪ್ಪಳ ಇವರ ಸಹಯೋಗದಲ್ಲ್ಲಿ ಏರ್ಪಡಿಸಿದ್ದ ಮಾಜಿ ದೇವದಾಸಿ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಖಾಯಂ ಜನತಾ ನ್ಯಾಯಾಲಯದ ಮೂಲಕ ಸಾರ್ವಜನಿಕರು ವ್ಯಾಜ್ಯಗಳನ್ನು ಬೇಗನೆ ಇತ್ಯರ್ಥ ಪಡಿಸಿಕೊಳ್ಳಬಹುದು. ಸರ್ಕಾರಿ ಇಲಾಖೆಗಳಿಂದ ತೊಂದರೆಗಳಾಗಿದ್ದರೆ ಜನತಾ ನ್ಯಾಯಾಲಯದ ಮೂಲಕ ಪರಿಹಾರವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪಿ.ವೈ ಶೆಟ್ಟೆಪ್ಪನವರ್ ಮಾತನಾಡಿ, ಮಾಜಿ ದೇವದಾಸಿ ಮಹಿಳೆಯರು ಜಾರಿಯಲ್ಲಿರುವ ಸರ್ಕಾರದ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕೃಷಿ ವಿಸ್ತರಣಾ ತರಬೇತಿ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಂ.ವಿ ರವಿ ಅವರು ಮಾತನಾಡಿ, ಎಲ್ಲಾ ಮಹಿಳೆಯರು ತಂಬಾಕು ಮತ್ತು ಗುಟಕಾ ಸೇವನೆಯಂತಹ ದುಶ್ಚಟಗಳಿಂದ ದೂರವಿರಲು ಕರೆ ನೀಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರ ರೋಹಿಣಿ ಕೊಟಗಾರ ಅವರು, ಬಾಲ್ಯ ವಿವಾಹ ಮತ್ತು ಪೋಕ್ಸೋ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.
ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿ ಪೂರ್ಣಿಮಾ ಅವರು, ದೇವದಾಸಿ ಮರು ಸಮೀಕ್ಷೆ
ಕೈಗೊಳ್ಳುವ ಕುರಿತು ಮಾತನಾಡಿದರು.

ತಂಬಾಕು ವ್ಯಸನ ಕೇಂದ್ರ ಸೈಕಾಲೋಜಿಸ್ಟ್ಟ್ ಶಾಂತಾ ಕಟ್ಟಿಮನಿ ಅವರು ಮಹಿಳೆಯರಿಗೆ ದುಶ್ಚಟಗಳಿಂದ ಬರಬಹುದಾದ ಕಾಯಿಲೆಗಳ ಬಗ್ಗೆ ಮಾಡನಾಡಿದರು.
ಈ ಕಾರ್ಯಕ್ರಮದಲ್ಲಿ 90 ಜನ ಮಾಜಿ ದೇವದಾಸಿ ಮಹಿಳೆಯರಿಗೆ ಆರೋಗ್ಯ ಇಲಾಖೆಯಿಂದ ಉಚಿತ ಆರೋಗ್ಯ ತಪಾಸಣೆಯನ್ನು ಮಾಡಲಾಯಿತು.
ಕಿಮ್ಸ್ ವೈಧ್ಯಾಧಿಕಾರಿ ಡಾ.ಚನ್ನಕೇಶವ, ಡಾ.ಮುಖೇಶ, ಡಾ.ಅಮರೇಶ, ಡಾ.ಸುಷ್ಮಾ, ಸಖಿ ಕೇಂದ್ರದ ಯಮುನಾ, ಪಿ.ಐ.ಓ ರೇಣುಕಾ, ಸಕ್ಕೂಬಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕೃಷ್ಣವೇಣಿ ಪ್ರಾರ್ಥನಾ ಗೀತೆ ಹಾಡಿದರೆ, ಅನುಷ್ಠಾನಾಧಿಕಾರಿ ದಾದೇಸಾಬ ಹಿರೇಮನಿ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.