Stay away from drugs and vices: PSI Igali

ಸಾವಳಗಿ: ಮಾದಕ ವಸ್ತುಗಳು ಹಾಗೂ ದುಶ್ಚಟಗಳಿಂದ ದೂರವಿದ್ದರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು. ಯುವಜನರು ಜೀವಕ್ಕೆ ಮಾರಕವಾಗುವ ವ್ಯಸನಗಳನ್ನು ಬೆಳೆಸಿಕೊಳ್ಳಬಾರದು. ಮಾದಕ ವಸ್ತುಗಳನ್ನು ಮಾರುವುದು ಅಥವಾ ಬಳಸುತ್ತಿರುವುದು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸಬೇಕು. ಆರೋಗ್ಯಕರ ಸಮಾಜ ನಿರ್ಮಾಣದ ಹೊಣೆ ಎಲ್ಲರ ಮೇಲೂ ಇದೆ ಎನ್ನುವುದನ್ನು ಮರೆಯಬಾರದು ಎಂದು ಸಾವಳಗಿ ಪಿಎಸ್ಐ ಅಪ್ಪಣ್ಣ ಐಗಳಿ ಹೇಳಿದರು.
ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಎಸ್. ಡಿ. ಎಸ್. ಜಿ ಪಿಯು ಹಾಗೂ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಾದಕ ವ್ಯಸನ ಮುಕ್ತ ದಿನ ಪ್ರತಿಜ್ಞಾ ಭೋದನೆ ಕಾರ್ಯಕ್ರಮ ನಡೆಸಿ ಅವರು ಮಾತನಾಡಿ ‘ಸಂಚಾರ ನಿಯಮಗಳನ್ನು ಪಾಲಿಸಬೇಕು. ಇದರಿಂದ, ಅಪಘಾತಗಳ ಪ್ರಮಾಣವನ್ನು ತಪ್ಪಿಸಬಹುದಾಗಿದೆ, ಮಾದಕ ವಸ್ತುಗಳ ಸೇವನೆಯಿಂದ ಆಗುವಂತಹ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದೆ. ಉತ್ತಮ ಸಮಾಜಕ್ಕಾಗಿ ಉತ್ತಮ ಆರೋಗ್ಯ ಅತ್ಯವಶ್ಯ ಎನ್ನುವುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು’ ಎಂದು ಹೇಳಿದರು.
ಬಿಎಲ್ ಡಿ ಕಾಲೇಜಿನ ಪ್ರಾಚಾರ್ಯ ಕೃಷ್ಣಪ್ಪ ಎಚ್ ಮಾತನಾಡಿ ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಗೆ ಮಾತ್ರವಲ್ಲ ಕುಟುಂಬ ಹಾಗೂ ಇಡೀ ಸಮಾಜಕ್ಕೆ ತೊಂದರೆಯಾಗುತ್ತದೆ. ಮಕ್ಕಳು ದುಶ್ಚಟಗಳಿಗೆ ಒಳಗಾಗದೇ ಇರುವಂತೆ ಪಾಲಕರು ಗಮನಹರಿಸಬೇಕು’ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳು ಬಿರಾದಾರ, ಪೊಲೀಸ್ ಸಿಬ್ಬಂದಿಗಳಾದ ಶಿವಾನಂದ ಭಜಂತ್ರಿ, ವೈಬೂಬ ಮುಲ್ಲಾ, ಐ. ಎ. ನದಾಪ, ಬಿ. ಎಮ್. ಹೊಸಮನಿ, ಶಾಲಾ ಶಿಕ್ಷಕರು, ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.