Breaking News

ದೇಶದ ಆರೋಗ್ಯ ಕ್ಷೇತ್ರದಲ್ಲಿ ಕಳೆದ 11 ವರ್ಷಗಳಲ್ಲಿ ಮಹತ್ವದ ಪರಿವರ್ತನೆ: ಕೇಂದ್ರ ಸಚಿವ ಅಮಿತ್ ಶಾ

Significant transformation in the country’s health sector in the last 11 years: Union Minister Amit Shah

ಜಾಹೀರಾತು


ಆದಿಚುಂಚನಗಿರಿ ವಿಶ್ವವಿದ್ಯಾಲಯ ಉದ್ಘಾಟನೆ
ಬಾಲ ಗಂಗಾಧರನಾಥ ಸ್ವಾಮೀಜಿ ಕನಸು – ನನಸು: ಡಾ.ನಿರ್ಮಲಾನಂದನಾಥ ಸ್ವಾಮೀಜಿ

ಬೆಂಗಳೂರು, ಜೂ.20; ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯಂತೆ ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಕ್ರಾಂತಿಕಾರಕ ಹೆಜ್ಜೆ ಇಟ್ಟಿದ್ದು, ಕಳೆದ 11 ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆ ತರಲಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದ್ದಾರೆ.

ಬೆಂಗಳೂರು ಉತ್ತರ ತಾಲ್ಲೂಕಿನ ನಗರೂರಿನ ಬಿಜಿಎಸ್ ಎಂಸಿಎಚ್ ಆವರಣದಲ್ಲಿ ಆದಿಚುಚನಗಿರಿ ವಿಶ್ವವಿದ್ಯಾಲಯ, ಬಿಜಿಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ವಿಶ್ವವಿದ್ಯಾಲಯದ ಕುಲಪತಿಗಳೂ ಆಗಿರುವ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರು ವಿವಿ ಕ್ಯಾಂಪಸ್ ಉದ್ಘಾಟಿಸಿ ಮಾತನಾಡಿ, ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 26 ವರ್ಷಗಳ ಹಿಂದೆ ಬಡವರಿಗೆ ಆರೋಗ್ಯ ಚಿಕಿತ್ಸಾ ವೆಚ್ಚ ಭರಿಸುವುದು ಬಹುದೊಡ್ಡ ಸವಾಲು ಎಂದು ಚಿಂತಿತರಾಗಿದ್ದರು. ಆ ಸವಾಲನ್ನು ಇದೀಗ ಕೇಂದ್ರ ಸರ್ಕಾರ ಸಾಕಾರಗೊಳಿಸಿದೆ. 60 ಕೋಟಿ ಜನರಿಗೆ ಪ್ರಧಾನಮಂತ್ರಿ ಆಯುಷ್ಮಾನ್ ಆರೋಗ್ಯ ವಿಮಾ ಯೋಜನೆಯಡಿ ಪ್ರತಿವರ್ಷ ವೆಚ್ಚ ಐದು ಲಕ್ಷ ರೂ ಮೊತ್ತದಷ್ಟು ಉಚಿತ ಚಿಕಿತ್ಸೆ ದೊರೆಯುತ್ತಿದೆ. ಪ್ರಧಾನಮಂತ್ರಿ ಜನೌಷಧಿ ಮಳಿಗೆಗಳಲ್ಲಿ ರಿಯಾಯಿತಿ ದರದಲ್ಲಿ ಔಷಧಿಗಳನ್ನು ಒದಗಿಸುತ್ತಿದ್ದೇವೆ. ಮಗು ಗರ್ಭಾವಸ್ಥೆಯಿಂದ ಹಿಡಿದು ಬೆಳೆದುದೊಡ್ಡವರಾಗುವ ತನಕ ಮಿಷನ್ ಇಂದ್ರ ಧನುಷ್ ಸೇರಿದಂತೆ ಹಲವಾರು ಆರೋಗ್ಯ ಯೋಜನೆಗಳಡಿ ಸಮಗ್ರ ದೃಷ್ಟಿಕೋನದ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಿಸಲಾಗುತ್ತಿದೆ ಎಂದರು.

ಯೋಗ, ಯೋಗಕ್ಷೇಮ, ಲಸಿಕೆ ನೀಡುವ ಮೂಲಕ ಆರೋಗ್ಯವಂತ ವ್ಯಕ್ತಿಗಳನ್ನು ನಿರ್ಮಿಸಲು ಒತ್ತು ನೀಡಲಾಗಿದೆ. 2014ಕ್ಕೂ ಮುನ್ನ ದೇಶದಲ್ಲಿ 7 ಏಮ್ಸ್ ಗಳಿದ್ದವು. ಇದೀಗ ಅವುಗಳ ಸಂಖ್ಯೆ 23 ಕ್ಕೆ ಏರಿಕೆಯಾಗಿದೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆ 387 ರಿಂದ 780ಕ್ಕೆ, ವೈದ್ಯಕೀಯ ಸೀಟುಗಳ ಸಂಖ್ಯೆ 51 ಸಾವಿರದಿಂದ 1.18 ಲಕ್ಷ, ಪಿಜಿ ಸೀಟುಗಳು 31 ಸಾವಿರದಿಂದ 74 ಸಾವಿರಕ್ಕೆ ಏರಿಕೆಯಾಗಿದೆ. ಈ ಕ್ರಮಗಳಿಂದ ದೇಶದಲ್ಲಿ ನುರಿತ ವೈದ್ಯಕೀಯ ಸಿಬ್ಬಂದಿ ಪ್ರಮಾಣ ವೃದ್ದಿಸಿದೆ ಎಂದು ಹೇಳಿದರು.

ಆದಿ ಚುಂಚನಗಿರಿ ಮಠಕ್ಕೆ 1800 ವರ್ಷಗಳ ಹಿನ್ನೆಲೆಯಿದ್ದು, ಈ ಭವ್ಯ ಪರಂಪರೆಯನ್ನು ಡಾ. ನಿರ್ಮಲನಾನಂದ ನಾಥ ಸ್ವಾಮೀಜಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಸೇವೆ, ಶಿಕ್ಷಣ, ಸಮರ್ಪಣೆಯಂತಹ ಉನ್ನತ ಮೌಲ್ಯಗಳನ್ನು ಪರಿಪಾಲಿಸುತ್ತಿದ್ದಾರೆ. ಬಡವರಿಗೆ ಉಚಿತ ಚಿಕಿತ್ಸೆ, ಅನ್ನ, ಶಿಕ್ಷಣ, ಆರೋಗ್ಯ, ರಕ್ಷಣೆ, ಆಧ್ಯಾತ್ಮಿಕ, ಅರಣ್ಯ, ಅನುಕಂಪ, ಅನುಬಂಧ ಸೇರಿ 9 ಆಧಾರ ಸ್ತಂಭಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಸೇವಾ ಮನೋಭಾವ, ನಮ್ಮ ಸಂಸ್ಕೃತಿ, ಧರ್ಮ ರಕ್ಷಣೆ ಜೊತೆಗೆ ಸಮಾಜವನ್ನು ಜೋಡಿಸುವ ಎಕತೆಯ ಕೆಲಸ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ. ಆಧುನಿಕ ಶಿಕ್ಷಣ ನೀಡುವ ಮೂಲಕ ಸಮಾಜ ಮತ್ತು ವಿಶ್ವದಲ್ಲಿ ಗೌರವ ಸ್ಥಾನವನ್ನು ದೊರಕಿಸಿಕೊಡುತ್ತಿದ್ದಾರೆ. ಇಲ್ಲಿ ಆತ್ಮ ಉತ್ಥಾನದ ಕೆಲಸ ನಡೆಯುತ್ತಿದ್ದು, ವೈಯಕ್ತಿಕ ಮತ್ತು ಸಮಾಜದ ಆತ್ಮ ಸುಧಾರಿಸುವ ಕಾರ್ಯಯೂ ನಿರಂತರವಾಗಿ ಸಾಗಿದೆ ಎಂದರು.

ಆದಿಚುಂಚನಗಿರಿ ಮಹಾ ಸಂಸ್ಥಾನಕ್ಕೆ ಮಹೋನ್ನತ ಸ್ಥಾನ ತಂದುಕೊಟ್ಟ ಬಾಲಗಂಗಾಧರ ನಾಥ ಸ್ವಾಮೀಜಿ ಅವರನ್ನು ಅವರನ್ನು ಸ್ಮರಿಸಲೇಬೇಕು. ಅವರು 40 ವರ್ಷಗಳಲ್ಲಿ ಹಲವಾರು ಆಸ್ಪತ್ರೆಗಳನ್ನು ನಿರ್ಮಿಸಿದ್ದು, ಅನಾಥಾಲಯ, ವಿದ್ಯಾಸಂಸ್ಥೆಗಳನ್ನು ಕಟ್ಟಿದ್ದಾರೆ. ಈ ಪರಂಪರೆ ಮುಂದುವರೆಯಲಿ. ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗೆ ನ್ಯಾಕ್ ಪ್ಲಸ್ ಮಾನ್ಯತೆ ದೊರೆತಿರುವುದು ಇಲ್ಲಿನ ಶಿಕ್ಷಣ ಗುಣಮಟ್ಟಕ್ಕೆ ಸೂಕ್ತ ನಿದರ್ಶನವಾಗಿದೆ. ಬಡ ಮತ್ತು ಮಧ್ಯಮ ವರ್ಗದ ಜನರನ್ನು ಒಗ್ಗೂಡಿಸಿ ಡಾ. ನಿರ್ಮಲಾನಂದ ಸ್ವಾಮೀಜಿ ಅವರು ಕರ್ಮಯೋಗಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಡಾ. ನಿರ್ಮಲಾನಂದ ಸ್ವಾಮೀಜಿ ಮಾತನಾಡಿ, 1974 ರಲ್ಲಿ ಸರಿಯಾದ ಆರೋಗ್ಯ ಸೇವೆ ಸಿಗದೇ ನಮ್ಮ ಗುರುಗಳು ದೇಹ ತ್ಯಾಗ ಮಾಡಿದಾಗ ನಮ್ಮ ಹಿಂದಿನ ಗುರುಗಳು ಮಾಡಿದ ಸಂಕಲ್ಪದಿಂದ ಹಲವಾರು ಆರೋಗ್ಯ, ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಸಾಧ್ಯವಾಯಿತು. ವಿವಿ ಸ್ಥಾಪನೆ ಮೂಲಕ ಬಾಲ ಗಂಗಾಧರನಾಥ ಸ್ವಾಮೀಜಿ ಅವರ ಕನಸು ನನಸಾಗಿದೆ. ಅಮಿತ್ ಶಾ ಅವರು ದೊಡ್ಡ ಶಕ್ತಿ. ಮರ ಹಣ್ಣು, ಹೂವು ನೀಡಬೇಕಾದರೆ ಮರದ ಬೇರುಗಳು ಆಳವಾಗಿರಬೇಕಾಗುತ್ತದೆ. ಹಾಗೆಯೇ ಅಮಿತ್ ಶಾ ಗಟ್ಟಿತನದ ನಾಯಕರು. ನಮ್ಮ ದೇಶದ ಸಂಸ್ಕೃತಿ, ಪರಂಪರೆ ಶ್ರೇಷ್ಠವಾದದ್ದು. ಭಾರತ ಉಳಿದರೆ ಅಳಿಯುವರಾರು, ಭಾರತ ಅಳಿದರೆ ಉಳಿಯುವವರು ಯಾರು ಎಂಬ ಮಾತು ಅಕ್ಷರಶಃ ಸತ್ಯ. ನಮ್ಮಲ್ಲಿರುವ ಶತಮಾನಗಳ ಜ್ಞಾನ ಸಂಪತ್ತು ಮತ್ತು ಪರಂಪರೆಯನ್ನು ಉಳಿಸಬೇಕಾಗಿದೆ ಎಂದು ಹೇಳಿದರು.

ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಎಚ್.ಡಿ. ಕುಮಾರ ಸ್ವಾಮಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ನೇತೃತ್ವದಲ್ಲಿ ದೇಶದ ಅಭಿವೃದ್ಧಿಗಾಗಿ ನಾವೆಲ್ಲರೂ ಕಠಿಣ ಪರಿಶ್ರಮದಿಂದ ಕೆಲಸ ಮಾಡುತ್ತಿದ್ದೇವೆ. ನಮ್ಮ ಇಲಾಖೆಯ ಸಮಸ್ಯೆಗಳಿಗೆ ಅಮಿತ್ ಶಾ ಅವರು ಸಲಹೆ ನೀಡಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕರ್ನಾಟಕದ ಹಲವಾರು ಸಮಸ್ಯೆಗಳನ್ನು ನಾವು ಒಂದೊಂದಾಗಿ ಬಗೆಹರಿಸುತ್ತೇವೆ. ರಾಜ್ಯಕ್ಕೆ ಹೆಚ್ಚಿನ ಕೊಡುಗೆ ನೀಡಿದ ಮಠ ಇದಾಗಿದ್ದು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟಿದೆ ಎಂದು ಶ್ಲಾಘಿಸಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಮಾತನಾಡಿ, ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು, ಅಪಘಾತ ಮತ್ತು ಕ್ಯಾನ್ಸರ್ ಆಸ್ಪತ್ರೆಗಳನ್ನು ಆರಂಭಿಸುವುದು ನಮ್ಮ ಗುರಿಯಾಗಿದೆ. ರಾಜ್ಯದಲ್ಲಿ ಶರಣ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದು, ಮಠ, ಮಂದಿರಗಳು ಅನ್ನ, ಅಕ್ಷರ ದಾಸೋಹದ ಮೂಲಕ ಮಹತ್ವದ ಕೊಡುಗೆ ನೀಡುತ್ತಿವೆ ಎಂದರು.

ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ನಮ್ಮ ಪೀಠದ ಶ್ರೇಯೋಬಿವೃದ್ಧಿಗಾಗಿ ಆದಿಚುಂಚನಗಿರಿ ಮಠದ ಕೊಡುಗೆ ಅನನ್ಯ. ನಮ್ಮ ಗುರುಪೀಠವನ್ನು ಶಾಖಮಠದಂತೆ ಪೋಷಿಸಿ ಬೆಳೆಸುತ್ತಿದ್ದು, ಇದಕ್ಕಾಗಿ ನಾವು ಸದಾ ಕಾಲ ಋಣಿಯಾಗಿರುತ್ತೇವೆ. ನಮ್ಮ ಸಮಾಜವನ್ನು ಸಹ ಮುಖ್ಯವಾಹಿನಿಗೆ ತರುತ್ತೇವೆ. ಮಾದಿಗ ಸಮುದಾಯಕ್ಕೆ ಕೇಂದ್ರ ಸರ್ಕಾರ ಮೀಸಲಾತಿ ಕಲ್ಪಿಸಬೇಕು. ಈ ಹೊಸ ವಿವಿ ನಮ್ಮ ನಾಡಿಗೆ ಬಹುದೊಡ್ಡ ಕೊಡುಗೆಯಾಗಿದೆ ಎಂದರು.

ರಾಜ್ ಕೋಠ್ ನ ಅರ್ಶ ವಿದ್ಯಾ ಮಂದಿರದ ಜಗದ್ಗುರು ಸ್ವಾಮಿ ಪರಮಾತ್ಮಾನಂದ ಸ್ವಾಮೀಜಿ ಮಾತನಾಡಿ, ನಮ್ಮ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭವಾಯ್ ಪಟೇಲರ ಮಾದರಿಯಲ್ಲಿ ಅಮಿತ್ ಶಾ ಕಾರ್ಯನಿರ್ವಹಿಸುತ್ತಿದ್ದಾರೆ. ದೂರದೃಷ್ಟಿ, ಶೌರ್ಯದ ಮೂಲಕ ಆಡಳಿತ ನಡೆಸುತ್ತಿದ್ದಾರೆ ಎಂದು ಹೇಳಿದರು.
ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ. ಸಂಸದ ಡಾ.ಕೆ. ಸುಧಾಕರ್, ಶಾಸಕರಾದ ಎಸ್.ಆರ್. ವಿಶ್ವನಾಥ್, ಎನ್. ಶ್ರೀನಿವಾಸ್, ಟ್ರಸ್ಟಿ ಡಿ. ದೇವರಾಜು, ಉಪಕುಲಪತಿ ಡಾ. ಎಂ.ಎ.ಶಂಕರ್, ರಿಜಿಸ್ಟ್ರಾರ್ ಡಾ. ಸಿ.ಕೆ. ಸುಬ್ಬರಾಯ, ಪ್ರಾಂಶುಪಾಲರಾದ ಡಾ.ಕೆ.ಎಸ್. ಗಂಗಾಧರ, ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಕೃಷ್ಣಮೂರ್ತಿ ವಿ.ಆರ್. ಮತ್ತಿತರರು ಉಪಸ್ಥಿತರಿದ್ದರು.

About Mallikarjun

Check Also

ಜುಲೈ-೦೧ರಂದುಸಂಗಾಪುರದ ಐತಿಹಾಸಿಕ ಶ್ರೀ ಲಕ್ಷ್ಮಿ ನಾರಾಯಣ ಕೆರೆಯ ಒತ್ತುವರಿ ತೆರವುಗೊಳಿಸಲು ಸರ್ವೆ.

Survey to clear encroachment on historic Sri Lakshmi Narayana Lake in Singapore on July 1. …

Leave a Reply

Your email address will not be published. Required fields are marked *