Save the environment in Koppal, “Paint Campaign” against factories continues

ಕೊಪ್ಪಳ: ನಗರಕ್ಕೆ ಹೊಂದಿಕೊಂಡು ಸ್ಥಾಪನೆಗೆ ಸಿದ್ಧವಾದ ಬಿಎಸ್‌ಪಿಎಲ್ ಹಾಗೂ ಕಿರ್ಲೋಸ್ಕರ್, ಕಲ್ಯಾಣ ಸೇರಿ ಇತರೆ ಕಾರ್ಖಾನೆಗಳ ಆರಂಭ, ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ ಜನಾಂದೋಲನದ ಭಾಗವಾಗಿ ನಡೆಯುತ್ತಿರುವ ಹೋರಾಟ ತೀವ್ರಗೊಳಿಸಲು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ವತಿಯಿಂದ “ಪೇಂಟ್ ಅಭಿಯಾನ”ವನ್ನು ಇಂದು ಸಹ ಮುಂದುವರಿಸಿದ್ದು ಕಿನ್ನಾಳ ರಸ್ತೆ ಅಂಡರ್ ಪಾಸ್ ಬ್ರಿಡ್ಜ್ ಗೆ ವೈಟ್ ವಾಶ್ ಆರಂಭಿಸಲಾಗಿದೆ.
ಕೊಪ್ಪಳದ ವಿವಿದೆಡೆ ಮತ್ತು ಬಾದಿತ ಪ್ರದೇಶಗಳ ಹಳ್ಳಿಗಳಲ್ಲಿ ಕಾರ್ಖಾನೆ ವಿರುದ್ಧ ಮತ್ತು ಅದರಿಂದ ಆಗುತ್ತಿರುವ ಹಾನಿಯ ಬಗ್ಗೆ ಜನಜಾಗೃತಿ ಗೋಡೆ ಬರಹಗಳನ್ನು ಬರೆಯುವ ಉದ್ದೇಶ ಈ ಪೇಂಟ್ ಅಭಿಯಾನ ಹೊಂದಿದ್ದು, ಗೋಡೆ ಬರಹಕ್ಕೆ ಅಗತ್ಯ ಇರುವ ಬಣ್ಣಗಳನ್ನು ಕೊಪ್ಪಳ ಭಾಗ್ಯನಗರದ ವಿವಿಧ ಬಣ್ಣದ ವ್ಯಾಪಾರಿಗಳಿಂದ ದೇಣಿಗೆ ರೂಪದಲ್ಲಿ ಪಡೆದು ಗೋಡೆ ಬರಹಗಳನ್ನು ಮಾಡಲು ಸಮಿತಿ ನಿರ್ಧರಿಸಿದೆ, ನಗರದ ಕುಷ್ಟಗಿ ರಸ್ತೆಯಲ್ಲಿರುವ ಕಿರಣ್ ಪೇಂಟ್ಸ್‌ನ ಮಾಲೀಕರಾದ ಗವಿಸಿದ್ದಪ್ಪ ಚಿನ್ನೂರ್ ಮತ್ತು ಹುಲಿಗಮ್ಮ ದೇವಿ ಪೇಂಟ್ಸ್ ನ ಮಾರುತಿ ಅವರು ದೇಣಿಗೆ ನೀಡಿದರು. ಇಂದು ತಾಲೂಕ ಕ್ರೀಡಾಂಗಣ ಮುಂದಿರುವ ಶ್ರೀನಿವಾಸ್ ಪೇಂಟ್ಸ್ ಅವರು ವೈಟ್ ವಾಶ್ ದೇಣಿಗೆ ನೀಡಿದರು. ಅಭಿಯಾನದಲ್ಲಿ ಗೋಡೆ ಬರಹ ಬರೆಯಲು ಹಿರಿಯ ಚಿತ್ರ ಕಲಾವಿದರಾದ ರಾಜು ತೇರದಾಳ್ ಮತ್ತು ಕೃಷ್ಣ ಚಿತ್ರಗಾರರವರು ಇತರರು ರವಿವಾರ ಬರಹ ಆರಂಭಿಸುತ್ತಿದ್ದಾರೆ. ಪರಿಸರ ಹಿತರಕ್ಷಣಾ ವೇದಿಕೆ ಸದಸಯಸಹ ಇದರಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ. ಕೊಪ್ಪಳದಿಂದ ಕಾರ್ಖಾನೆಗಳನ್ನು ಓಡಿಸುವ ನಿಟ್ಟಿನೊಳಗಡೆ ಆಂದೋಲನವನ್ನು ತೀವ್ರಗೊಳಿಸಲು ಜನರು ಭಾಗವಹಿಸಲು ಕೋರಲಾಗಿದೆ.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನದ ಪ್ರೊ. ಅಲ್ಲಮಪ್ರಭು ಬೆಟ್ಟದೂರ್, ಕೆ. ಬಿ. ಗೋನಾಳ, ಬಸವರಾಜ ಶೀಲವಂತರ್, ಮಹಾಂತೇಶ್ ಕೊತಬಾಳ, ಮಂಜುನಾಥ ಜಿ. ಗೊಂಡಬಾಳ, ಶರಣು ಶೆಟ್ಟರ್, ಎಸ್.ಎ. ಗಫಾರ್, ಜ್ಯೋತಿ ಎಂ. ಗೊಂಡಬಾಳ, ಶರಣು ಗಡ್ಡಿ, ಮುದುಕಪ್ಪ ಹೊಸಮನಿ, ಚನ್ನಬಸಪ್ಪ ಅಪ್ಪಣ್ಣವರ ಇತರರು ಇದ್ದರು. ಬಣ್ಣದ ಸಹಾಯ ಮಾಡಲಿಚ್ಚಿಸುವ ಬಣ್ಣದ ಅಂಗಡಿಯವರು, ಗೋಡೆ ಬರಹ ಮಾಡಲು ಇಚ್ಛಿಸುವ ಚಿತ್ರ ಕಲಾವಿದರು ಆಂದೋಲನದ ಸದಸ್ಯರನ್ನು ಸಂಪರ್ಕಿಸಿ ಹೋರಾಟದಲ್ಲಿ ತೊಡಗಿಸಿಕೊಳ್ಳಲು ಸಂಘಟಕರು ಮನವಿ ಮಾಡಿದ್ದಾರೆ.