A huge job fair is being held on the premises of APS Educational Institute.

ಬೆಂಗಳೂರು, ಮೇ, 3; ಎಪಿಎಸ್ ಶಿಕ್ಷಣ ಸಂಸ್ಥೆಯಿಂದ ಮಹಾ ಶಿಕ್ಷಣ ಎಕ್ಸ್ ಪೋ ಮತ್ತು ಬೃಹತ್ ಉದ್ಯೋಗ ಮೇಳವನ್ನು 3 ಮೇ ರಂದು ಎನ್.ಆರ್. ಕಾಲೊನಿಯ ಎಪಿಎಸ್ ಜನನ ದೇಗುಲ ಕ್ಯಾಂಪಸ್ ನಲ್ಲಿ ಆಯೋಜಿಸಿತ್ತು.
ಈ ಕಾರ್ಯಕ್ರಮವನ್ನು ಎಐಸಿಟಿಇ ಅಧ್ಯಕ್ಷ ಪ್ರೊ. ಟಿ. ಜಿ. ಸೀತಾರಾಮ್ ಉದ್ಘಾಟಿಸಿ, ವಿದ್ಯಾರ್ಥಿಗಳಲ್ಲಿ ಭವಿಷ್ಯದ ಬಗ್ಗೆ ನೈತಿಕ ಬದ್ಧತೆ ಇದ್ದು, ಇದನ್ನು ಸಕಾರಗೊಳಿಸಲು ಅವಿರತವಾಗಿ ಶ್ರಮಿಸುವ ಅಗತ್ಯವಿದೆ. ಈ ಕನಸು ನನಸು ಮಾಡಲು ಯಾವುದೇ ನೋಂದಣಿ ಶುಲ್ಕವಿಲ್ಲದೇ ಉದ್ಯೋಗ ಮೇಳ ಆಯೋಜಿಸಿರುವುದು ಉತ್ತಮ ಬೆಳವಣಿಗೆ ಎಂದರು.
ಎಪಿಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ವಿಷ್ಣು ಭಾರತ ಅಲಂಪಲ್ಲಿ ಮಾತನಾಡಿ, ನಮ್ಮ ಸಂಸ್ಥೆ ಶೈಕ್ಷಣಿಕ ಚಟುವಟಿಕೆ ಜೊತೆಗೆ ಜಾಗತೀಕರಣ ಯುಗದಲ್ಲಿ ಉತ್ತಮ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ತಯಾರಾಗುವಂತೆ ಮಾರ್ಗದರ್ಶನ ನೀಡುವುದು ನಮ್ಮ ನೈತಿಕ ಜವಾಬ್ದಾರಿಯಾಗಿದೆ. ಇಂದಿನ ಯುವಶಕ್ತಿ ಕೇವಲ ಬುದ್ಧಿಮತ್ತೆ ಅಷ್ಟೇ ಅಲ್ಲದೆ ಭಾವನಾತ್ಮಕ ಬಲ ಹೊಂದಿರುವ ಶ್ರೇಷ್ಠ ಸಾಮರ್ಥ್ಯವನ್ನು ಹೊಂದಿದೆ ಎಂದರು.
ಪ್ರತಿಷ್ಠಿತ ಕಂಪನಿಗಳ 100ಕ್ಕೂ ಹೆಚ್ಚು ಸಂಸ್ಥೆಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು. ಕೆಲವರಿಗೆ ಸ್ಥಳದಲ್ಲಿಯೇ ನೇಮಕಾತಿ ಆದೇಶ ನೀಡಲಾಯಿತು. ಸಮಾಜ ಸೇವೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ‘ದಿ ರೋಡ್ ಅಹೆಡ್ 2.0” ಎಂಬ ಪುಸ್ತಕವನ್ನು, ಪ್ರೊ. ಟಿ.ಜಿ. ಸೀತಾರಾಮ್ ಮತ್ತು ಯೋಗಿ ಕೊಚ್ಚಾರ್ ಬಿಡುಗಡೆ ಮಾಡಿದರು.
ಉದ್ಯೋಗ ಮೇಳದಲ್ಲಿ ಬ್ರೋಸ್ ಜಾಬ್ ಸಿಇಒ ಕೃಷ್ಣ ಭಾರ್ಗವ್, ಪರಿಸರವಾದಿಗಳಾದ ರೇವತಿ ಕಾಮತ್, ಹರಿ ಕೇಶವ್ ಮಾಧವ್ ಮತ್ತು ನಟಿ ಬೃಂದಾ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.