Demand for cancellation of registration of bogus construction workers: Bhardwaj

ಗಂಗಾವತಿ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಡಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಗುರುತಿನ ನೀಟಿ ನೀಡಿ, ಕಾರ್ಮಿಕರಿಗೆ ವಿವಿಧ ಸೌಲಭ್ಯಗಳನ್ನು ನೀಡುವ ಮೂಲಕ ಕಾರ್ಮಿಕರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿರುವುದು ಸ್ವಾಗತಾರ್ಹವಾಗಿದ್ದು, ಆದರೆ ನಕಲಿ ಕಟ್ಟಡ ಕಾರ್ಮಿಕರು ಕಾರ್ಮಿಕರ ನೋಂದಣಿ ಮಾಡಿಸಿಕೊಂಡು ಅಕ್ರಮವಾಗಿ ಸರ್ಕಾರದ ಯೋಜನೆಗಳ ಫಲಾನುಭವಿಗಳಾಗುತ್ತಿರುವುದು ದುರದೃಷ್ಟಕರ ಸಂಗತಿ ಎಂದು ಕ್ರಾಂತಿಚಕ್ರ ಬಳಗದ ಅಧ್ಯಕ್ಷರಾದ ಭಾರಧ್ವಾಜ್ ಬೇಸರ ವ್ಯಕ್ತಪಡಿಸಿದರು.
ಕಾರ್ಮಿಕ ಇಲಾಖೆಯಿಂದ ಸಿಗುವ ಮದುವೆ ಪ್ರೋತ್ಸಾಹ ಧನ, ಹೆರಿಗೆ ಧನಸಹಾಯ, ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ಅಲ್ಲದೇ ವಿವಿಧ ಕಾರ್ಮಿಕರಿಗೆ ನೀಡಲಾಗುತ್ತಿರುವ ಕಿಟ್‌ಗಳನ್ನು ನಕಲಿ ಕಾರ್ಮಿಕರು ಪಡೆಯುತ್ತಿದ್ದು, ಇದರಿಂದ ನಿಜವಾದ ಬಡ ಕಟ್ಟಡ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಇದರಿಂದ ಮಂಡಳಿಯ ಯೋಜನೆಗಳು ವಿಫಲಗೊಳ್ಳುತ್ತಿವೆ. ಕಾರಣ ಮಂಡಳಿಯು ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಿ, ನಕಲಿ ಕಟ್ಟಡ ಕಾರ್ಮಿಕರ ನೋಂದಣಿಯನ್ನು ರದ್ದುಪಡಿಸಿ, ನಿಜವಾದ ಕಟ್ಟಡ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ತ್ವರಿತಗತಿಯಲ್ಲಿ ಸಿಗುವಂತೆ ಕ್ರಮ ಜರುಗಿಸಬೇಕೆಂದು ಕ್ರಾಂತಿಚಕ್ರ ಬಳಗ ಆಗ್ರಹಿಸಿದೆ.