Strict instructions to officials to take action on issues discussed in KDP meeting
ಜಿಲ್ಲಾಧಿಕಾರಿಗಳು, ಜಿಪಂ ಸಿಇಓ ಅವರಿಂದ ಜಂಟಿ ಸಭೆ
ರಾಯಚೂರ ಜನವರಿ 11 (ಕ.ವಾ.): ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಈ ಹಿಂದೆ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚಿಸಿದ ವಿಷಯಗಳ ಬಗ್ಗೆ ಆಯಾ ಇಲಾಖೆಯ ಅಧಿಕಾರಿಗಳು ವಿಶೇಷವಾಗಿ ಗಮನ ಹರಿಸಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಹಿಂದಿನ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ನಡವಳಿ ಕುರಿತು ತೆಗೆದುಕೊಂಡ ಕ್ರಮದ ಮೇಲೆ ಚರ್ಚಿಸಲು ಜಿಲ್ಲಾ ಪಂಚಾಯತನ ಜಲ ನಿರ್ಮಲ ಸಭಾಂಗಣದಲ್ಲಿ ಜನವರಿ 10ರಂದು ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಇಓ ಅವರು ನಡೆಸಿದ ಜಂಟಿ ಸಭೆಯಲ್ಲಿ ಅವರು ಮಾತನಾಡಿದರು.
ಮಾನ್ವಿ ಮತ್ತು ರಾಯಚೂರುನಲ್ಲಿರುವ
ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸೇರಿದಂತೆ ಜಿಲ್ಲೆಯಲ್ಲಿನ 5 ತಾಲೂಕು ಸಾರ್ವಜನಿಕ ಆಸ್ಪತ್ರೆಗಳು, 6 ಸಮುದಾಯ ಮತ್ತು 50 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 5 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಪ್ರಸೂತಿ ಕೇಂದ್ರ ಮತ್ತು ನಮ್ಮ ಕ್ಲಿನಿಕಗಳಲ್ಲಿ ಬಾಣಂತಿಯರು ಮತ್ತು ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಲು ಕ್ರಮ ವಹಿಸಬೇಕು.
ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದರ ಜೊತೆಗೆ ಉತ್ತಮ ಆರೋಗ್ಯ ಕಲ್ಪಿಸುವುದು ನಮ್ಮ ಪ್ರಮುಖ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ
ಕ್ಷಯರೋಗ ಹಾಗೂ ಕುಷ್ಠರೋಗ ನಿಯಂತ್ರಣ, ಮಲೇರಿಯಾ ಮತ್ತು ಫೈಲೇರಿಯಾ, ಸಾಂಕ್ರಾಮಿಕ ರೋಗಗಳ ತಡೆಗೆ ಸಂಬಂಧಿಸಿದ ಕಾರ್ಯಕ್ರಮಗಳ ಅನುಷ್ಠಾನಾಧಿಕಾರಿಗಳು ಗಮನ ಹರಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ತಾಯಿ ಮತ್ತು ಆರೋಗ್ಯ ಕಾರ್ಯಕ್ರಮದಡಿ ಮಕ್ಕಳು ಮತ್ತು ಗರ್ಭಿಣಿಯರ ದಾಖಲಾತಿ ಮಾಡಿ ಆರೋಗ್ಯ ಶಿಕ್ಷಣ ನೀಡಲಾಗುತ್ತದೆ. 2024-25ನೇ ಸಾಲಿನಲ್ಲಿ 21,573 ಗರ್ಭಿಣಿಯರ ದಾಖಲಾತಿ ಆಗಿದ್ದು ಈ ಪೈಕಿ ಸರ್ಕಾರಿ ಆಸ್ಪತ್ರೆಗಳಲ್ಲಿ 18,141 ಹೆರಿಗೆ ಆಗಿವೆ. ತಾಯಿ ಮಕ್ಕಳ ರಕ್ಷಣಾ ಚಿಕಿತ್ಸೆ ಕಾರ್ಯಕ್ರಮದಡಿ
ಪೆಂಟಾ, ಪೊಲಿಯೋ, ಬಿ.ಸಿ.ಜಿ., ದಡಾರ ಮತ್ತು ಟಿ.ಟಿ.ಗರ್ಭಿಣಿಯರ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕೊಠಡಿಗಳ ಕಾಮಗಾರಿಗೆ ಕೆಕೆಆರ್ ಡಿಬಿಯಿಂದ ನೀಡುವ ಅನುದಾನ ಸಕಾಲಕ್ಕೆ ಬಳಕೆಯಾಗಬೇಕು. ಬಾಕಿ ಕಾಮಗಾರಿಗಳನ್ನು ಬೇಗನೇ ಪೂರ್ಣಗೊಳಿಸಿ ಆಯಾ ಶಾಲೆಗಳ ಮುಖ್ಯಾಧ್ಯಾಪಕರಿಗೆ ಹಸ್ತಾಂತರಿಸಬೇಕು. 2024-25ನೇ ಸಾಲಿನಲ್ಲಿ ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಬಾಕಿ ಎರಡನೇ ಹಂತದಲ್ಲಿ ಬಿಡುಗಡೆಯಾದ 539 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಬೇಗನೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗೃಹಜ್ಯೋತಿ ಕಾರ್ಯಕ್ರಮದಡಿ ರಾಯಚೂರು, ಮಾನವಿ, ಸಿರವಾರ, ದೇವದುರ್ಗ, ಸಿಂಧನೂರ, ಲಿಂಗಸೂಗುರು ಮತ್ತು ಮಸ್ಕಿ ಸೇರಿ ನೋಂದಾಯಿತ ಅರ್ಹ 3,44,001 ಗ್ರಾಹಕರಿಗೆ ಜೆಸ್ಕಾಂ ವೃತ್ತದ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿ ಗ್ರಾಹಕರ ವೆಚ್ಚ ಭರಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಗೃಹಜ್ಯೋತಿ ಕಾರ್ಯಕ್ರಮದಡಿ 2023ರ ಆಗಸ್ಟನಿಂದ 2024ರ ಸೆಪ್ಟೆಂಬರವರೆಗೆ 182.14 ಕೋಟಿ ರೂ ವೆಚ್ಚವಾಗಿದೆ. ಸರ್ಕಾರದಿಂದ 172.79 ಕೋಟಿ ರೂ ಬಿಡುಗಡೆಯಾಗಿದೆ ಎಂದು ಜೆಸ್ಕಾ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಇದೆ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಅವರು ಮಾತನಾಡಿ, ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಸಭೆಯಲ್ಲಿ ನೀಡಿದ ನಿರ್ದೇಶನಗಳನ್ನು ಸರಿಯಾಗಿ ಪಾಲನೆ ಮಾಡಬೇಕು. ಪೂರಕ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.