Inspection of Narega works at Anegondi

ಪ್ರತಿ ಕುಟುಂಬಕ್ಕೂ 100 ಮಾನವ ದಿನಗಳ ಕೆಲಸ ನೀಡಿ ಜಿಪಂ ಯೋಜನಾ ನಿರ್ದೇಶಕರಾದ ಪ್ರಕಾಶ ವಿ. ಸೂಚನೆ

ಗಂಗಾವತಿ : ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಮಹಾತ್ಮ ಗಾಂಧಿ ನರೇಗಾ ಯೋಜನೆ ನೆರವಾಗಿದ್ದು, ಕಾಮಗಾರಿಗಳನ್ನು ವೈಜ್ಞಾನಿಕವಾಗಿ ಅನುಷ್ಠಾನ ಮಾಡಬೇಕು ಎಂದು ಜಿಪಂ ಯೋಜನಾ ನಿರ್ದೇಶಕರಾದ ಮಾನ್ಯ ಪ್ರಕಾಶ ವಿ. ಸೂಚಿಸಿದರು.
ತಾಲೂಕಿನ ಆನೆಗೊಂದಿ ಗ್ರಾಮ ಪಂಚಾಯತ್ ಗೆ ಶುಕ್ರವಾರ ಭೇಟಿ ನೀಡಿ ನರೇಗಾ ಕಾಮಗಾರಿಗಳ ಪರಿಶೀಲಿಸಿ ಮಾತನಾಡಿದರು.
ಉದ್ಯೋಗ ಖಾತರಿ ಯೋಜನೆಯಡಿ ಕೆರೆ, ನಾಲಾ ಹೂಳೆತ್ತುವ ಕಾಮಗಾರಿಗಳ ಜೊತೆಗೆ ಆಸ್ತಿ ಸೃಜನೆಯಾಗುವ ಸಿಸಿರಸ್ತೆ, ಚರಂಡಿ, ಶಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಹಕಾರಿಯಾಗಿದೆ. ಗ್ರಾಮೀಣ ಭಾಗದಲ್ಲಿ ನರೇಗಾದಡಿ ನಡೆಯುತ್ತಿರುವ ಎಲ್ಲ ಕಾಮಗಾರಿಗಳು ವೈಜ್ಞಾನಿಕ ಹಾಗೂ ಗುಣಮಟ್ಟದ ಕಾಮಗಾರಿಗಳನ್ನು ನಡೆಸಬೇಕು. ದುರ್ಬಲ ವರ್ಗದವರಿಗೆ ಹೆಚ್ಚಿನ ಆದ್ಯತೆ ನೀಡಿ ನರೇಗಾ ಕೆಲಸ ನೀಡಬೇಕು. ಪ್ರತಿ ಕುಟುಂಬಕ್ಕೂ 100 ಮಾನವ ದಿನಗಳ ಕೆಲಸ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಾಮಗಾರಿ ವೀಕ್ಷಣೆ: ನಂತರ ನರೇಗಾದಡಿ ನಿರ್ಮಾಣಗೊಂಡ ಚರಂಡಿ ಕಾಮಗಾರಿ ವೀಕ್ಷಿಸಿ, ಎಲ್ ಡಬ್ಲ್ಯುಎಂ (ಬೂದು ನೀರು ನಿರ್ವಹಣೆ ಘಟಕ) ಹಾಗೂ ಸಮುದಾಯ ಶೌಚಾಲಯ ಕಾಮಗಾರಿ ಕೈಗೊಳ್ಳಲು ಸ್ಥಳ ಪರಿಶೀಲನೆ ನಡೆಸಿದರು.
ಮಕ್ಕಳ ಕಲಿಕಾ ಮಟ್ಟ ಪರಿಶೀಲನೆ : ಚಿಕ್ಕರಾಂಪುರ ಗ್ರಾಮದ ಸರ್ಕಾರಿ ಶಾಲೆಯ ಶಾಲಾ ಕಾಂಪೌಂಡ್ ಕಾಮಗಾರಿ ವೀಕ್ಷಿಸಿ, ಶಾಲಾ ಮಕ್ಕಳ ಕೊಠಡಿಗೆ ತೆರಳಿ ಮಕ್ಕಳ ಶಿಕ್ಷಣ ಮಟ್ಟ ಹಾಗೂ ಬಿಸಿಯೂಟದ ಬಗ್ಗೆ ಮಾಹಿತಿ ಪಡೆದು, ಖುದ್ದಾಗಿ ಜಿಪಂ ಯೋಜನಾ ನಿರ್ದೇಶಕರಾದ ಶ್ರೀ ಪ್ರಕಾಶ ವಿ ಅವರು ‘ಬೋರ್ಡ್ ಮೇಲೆ ಕನ್ನಡ ಅಕ್ಷರ ಬರೆದು’ ಮಕ್ಕಳ ಕಲಿಕಾ ಮಟ್ಟ ಪರಿಶೀಲಿಸಿದರು. ನಂತರ ಸಮೀಪದ ಅಂಗನವಾಡಿಗೆ ಭೇಟಿ ನೀಡಿ ಮಕ್ಕಳ ಶಾಲಾ ಪೂರ್ವ ಶಿಕ್ಷಣ, ಪೌಷ್ಟಿಕ ಆಹಾರ ವಿತರಣೆ ಬಗ್ಗೆ ಬಗ್ಗೆ ಪರಿಶೀಲಿಸಿದರು.
ಈ ವೇಳೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ, ತಾಪಂ ಸಹಾಯಕ ನಿರ್ದೇಶಕರಾದ ಮಹಾಂತಗೌಡ ಪಾಟೀಲ್, ಗ್ರಾಪಂ ಅಧ್ಯಕ್ಷರಾದ ಹುಲಿಗೆಮ್ಮ ಹೊನ್ನಪ್ಪ ನಾಯಕ, ಉಪಾಧ್ಯಕ್ಷರಾದ ಪೂರ್ಣಿಮಾ, ಸದಸ್ಯರಾದ ಡಾ.ವೆಂಕಟೇಶ ಬಾಬು, ರಾಜಶೇಖರ, ಕೆ.ತಿಮ್ಮಪ್ಪ, ಗ್ರಾಪಂ ಪಿಡಿಒ ಕೃಷ್ಣಪ್ಪ, ತಾಂತ್ರಿಕ ಸಂಯೋಜಕರಾದ ಬಸವರಾಜ ಜಟಗಿ, ತಾಂತ್ರಿಕ ಸಹಾಯಕರಾದ ಯೋಗೇಶ, ಗ್ರಾಪಂ ಸಿಬ್ಬಂದಿಗಳು ಇದ್ದರು.