Breaking News

ಹೆಚ್ಚಿನ ಬಡ್ಡಿಯಾಸೆ ತೋರಿಸಿ ಬಡವರನ್ನು ವಂಚಿಸುವವರ ಸಂರಕ್ಷಣೆಗೆ ಕಾನೂನು : ವಿಧೇಯಕ ಅಂಗೀಕಾರ

Law to protect those who defraud the poor by charging high rates of interest: Bill passed

ಜಾಹೀರಾತು

ಬೆಳಗಾವಿ ಸುವರ್ಣಸೌಧ, ಡಿ.16 (ಕರ್ನಾಟಕ ವಾರ್ತೆ):
ಬಡವರನ್ನು ಅತಿ ಹೆಚ್ಚಿನ ಬಡ್ಡಿ ನೀಡುವ ಆಸೆಯೊಡ್ಡಿ, ಠೇವಣಿ ಪಡೆದು, ನಂತರ ವಂಚಿಸುವ ಯತ್ನವನ್ನು ತಡೆಗಟ್ಟುವುದು ಹಾಗೂ ವಂಚಕರನ್ನು ಕಠಿಣವಾಗಿ ಶಿಕ್ಷಿಸುವ ನಿಟ್ಟಿನಲ್ಲಿ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ವಿಧಾನಸಭೆಯಲ್ಲಿ ಸೋಮವಾರ 2024 ನೇ ಸಾಲಿನ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ತಿದ್ದುಪಡಿ) ವಿಧೇಯಕವನ್ನು ಮಂಡಿಸಿದರು. ಬಡವರು, ಮಧ್ಯವರ್ಗದವರು, ಮತ್ತಿತರರು ಹಣಕಾಸು ವ್ಯವಹಾರಗಳಲ್ಲಿ ಆಸೆಗೆ ಬಲಿಯಾಗಿ ವಂಚನೆಗೆ ಒಳಗಾಗುವುದನ್ನು ತಡೆಗಟ್ಟಲು ಹಾಗೂ ವಂಚಕರನ್ನು ಶಿಕ್ಷಿಸುವ ನಿಟ್ಟಿನಲ್ಲಿ ವಿಧೇಯಕ ತರಲಾಗುತ್ತಿದೆ. ಈ ದಿಸೆಯಲ್ಲಿ ಆಯಾ ವಿಭಾಗದ ಉಪವಿಭಾಗಾಧಿಕಾರಿಗಳು ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡು, ಕಾನೂನು ಕ್ರಮ ಕೈಗೊಳ್ಳಲು ಹೆಚ್ಚಿನ ಅಧಿಕಾರ ನೀಡಲಾಗುತ್ತಿದೆ ಎಂದರು.
ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಮಾತನಾಡಿ, 2003-04 ರಲ್ಲಿ ವಿನಿವಿಂಕ್ ಶಾಸ್ತಿç ಕೋಟ್ಯಾಂತರ ರೂ. ಗಳ ಠೇವಣಿ ಸಂಗ್ರಹಿಸಿ, ಜನರು ವಂಚನೆಗೊಳಗಾದಂತಹ ಪ್ರಕರಣದಲ್ಲಿ ಅನೇಕ ಅಮಾಯಕರು ಠೇವಣಿದಾರರು ವಂಚನೆಗೊಳಗಾಗಿದ್ದರು. ಹೀಗಾಗಿ 2004 ರಲ್ಲಿಯೇ ಇದರ ತಡೆಗೆ ಕಾನೂನನ್ನು ಜಾರಿಗೆ ತರಲಾಗಿತ್ತು. ಆದರೆ ಪಿರಮಿಡ್ ಸ್ಕೀಂ, ಪೊಂಜಿ ಸ್ಕೀಮ್ ಮುಂತಾದ ವಂಚನೆ ಪ್ರಕರಣಗಳು ಕಾಲ ಬದಲಾದ ಹಾಗೆ ವಂಚನೆ ಸ್ವರೂಪ ಹಾಗೂ ವಂಚನೆಯ ವಿಧಾನ ಬದಲಾಗುತ್ತಿದ್ದು, ಕಾನೂನಿನಲ್ಲಿನ ಲೋಪಗಳನ್ನು ಸರಿಪಡಿಸಿ, ವಂಚಕರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಕಾನೂನಿನಲ್ಲಿಯೂ ತಿದ್ದುಪಡಿ ತರಲಾಗುತ್ತಿದೆ. ಐಎಂಎಎ ನಂತಹ ಪ್ರಕರಣಗಳಲ್ಲಿ ವಂಚಕರನ್ನು ಹಿಡಿದು, ಪ್ರಕರಣಗಳು ಸೆಟಲ್‌ಮೆಂಟ್ ಆಗ್ತಾ ಇದೆಯೇ ಹೊರತು, ಬಾಧಿತರಿಗೆ ಸಮರ್ಪಕ ನ್ಯಾಯ ಒದಗಿವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ಬಾಧಿತರಿಗೆ ಇನ್ನಷ್ಟು ಅನುಕೂಲ ತರಲು, ವಂಚನೆ ಪ್ರಕರಣಗಳಲ್ಲಿನ ಅನುಷ್ಠಾನಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಿ, ನಷ್ಟಕ್ಕೆ ಒಳಗಾದ ಠೇವಣಿದಾರರಿಗೆ ಹಣ ವಾಪಸ್ ಕೊಡಿಸಲು ತಿದ್ದುಪಡಿ ತರಬೇಕಿದೆ. ಹೌಸಿಂಗ್ ಲೋನ್ಸ್, ಗೋಲ್ಡ್ ಲೋನ್ಸ್ ಮುಂತಾದ ಹೆಸರಿನಲ್ಲಿ ಕೆಲವೆಡೆ ವಂಚನೆ ನಡೆಯುವುದು ಕೂಡ ಗಮನಕ್ಕೆ ಬಂದಿದೆ. ಹೀಗಾಗಿ ಬಡವರು ವಂಚನೆಗೆ ಒಳಗಾಗುವುದನ್ನು ತಡೆಯಲು ಸಕ್ಷಮ ಪ್ರಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡುವುದು, ಠೇವಣಿಗಳ ಹೊಣೆ ನಿರ್ಧರಣೆ, ಹಣಕಾಸು ಸಂಸ್ಥೆಯಿಂದ ವಂಚನೆಯ ಉದ್ದೇಶವನ್ನು ತಪ್ಪಿಸುವುದು, ವಿಶೇಷ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸುವುದು, ವಶ ಪಡೆದ ಸ್ವತ್ತುಗಳ ನಗದು ಪರಿವರ್ತನೆ ಮತ್ತು ಠೇವಣಿದಾರರಿಗೆ ಹಣ ಸಂದಾಯಕ್ಕೆ ವಿಶೇಷ ನ್ಯಾಯಾಲಯಕ್ಕೆ ಅಧಿಕಾರಿ ನೀಡುವುದು, ವಂಚಕರ ಸ್ವತ್ತಿನ ಜಪ್ತಿ ಮುಂತಾದ ವಿಷಯಗಳಿಗೆ ಸಂಬಂಧಿಸಿದ ವಿಧೇಯಕದಲ್ಲಿ ವಿಶೇಷ ಒತ್ತು ನೀಡಲಾಗಿದೆ ಎಂದರು.
ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಠೇವಣಿದಾರರ ಸಂರಕ್ಷಣೆಗಾಗಿ ಮಂಡಿಸಲಾಗಿರುವ ತಿದ್ದುಪಡಿ ವಿಧೇಯಕವನ್ನು ಸ್ವಾಗತಿಸುತ್ತೇವೆ. ವಂಚನೆ ಪ್ರಕರಣದಲ್ಲಿ ವಶಕ್ಕೆ ಪಡೆದ ಸಲಕರಣೆಗಳು, ಸ್ವತ್ತು, ಉಪಕರಣಗಳನ್ನು ವಿಲೇವಾರಿ ಮಾಡುವ ವಿಧಾನ ಸರಳೀಕರಣ ಆಗಬೇಕು. ಈ ರೀತಿ ವಂಚಿಸುವವರ ಮೇಲೆ ಗೂಡಾ ಕಾಯ್ದೆ ಹಾಕಬೇಕು ಎಂದರು. ಶಾಸಕರುಗಳಾದ ಅಶ್ವತ್ಥ ನಾರಾಯಣ, ಆರಗ ಜ್ಞಾನೇಂದ್ರ, ಸಿದ್ದು ಸವದಿ, ನರೇಂದ್ರಸ್ವಾಮಿ ಅವರು ಕೂಡ ದನಿಗೂಡಿಸಿ, ಕೆಲವು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಣ ಸಂಗ್ರಹಣೆ ಹೆಸರಿನಲ್ಲಿ ನಡೆಯುವ ವಂಚನೆಗಳನ್ನು ತಡೆಗಟ್ಟಬೇಕು, ಕಾನೂನು ಇನ್ನಷ್ಟು ಬಲಪಡಿಸಿ ವಂಚನೆ ತಡೆಗಟ್ಟಬೇಕು ಎಂದು ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ತಿದ್ದುಪಡಿ ತಂದು ಕಾನೂನು ಬಿಗಿಗೊಳಿಸಲಾಗುವುದು ಎಂದು ಸಚಿವ ಕೃಷ್ಣ ಭೈರೇಗೌಡ ಭರವಸೆ ನೀಡಿದರು.

About Mallikarjun

Check Also

ಧಾರವಾಡ: ಮತ್ತೆ ನಕ್ಕಿತು ಭೂಮಿ ಕವನ ಸಂಕಲನದ ಬಿಡುಗಡೆ ಕಾರ್ಯಕ್ರಮ

Dharwad: Nakkitu Bhoomi poetry collection release program again ಧಾರವಾಡ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಭವನದಲ್ಲಿ ದಿನಾಂಕ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.