Breaking News

ದೂರು ನೀಡಿದ ರೈತರ ಕಬ್ಬು ನುರಿಸುವ ಹೊಣೆ ಸರ್ಕಾರದ್ದು: ಸಕ್ಕರೆ ಸಚಿವ ಶಿವಾನಂದ ಪಾಟೀಲ ಭರವಸೆ

It is the government’s responsibility to clear the sugarcane of the farmers who have complained: Sugar Minister Sivananda Patil assured

ಜಾಹೀರಾತು

ಬೆಳಗಾವಿ, ಡಿಸೆಂಬರ್ 16 (ಕರ್ನಾಟಕ ವಾರ್ತೆ):- ರೈತರು ಯಾವುದೇ ಸಕ್ಕರೆ ಕಾರ್ಖಾನೆ ವಿರುದ್ಧ ಸೂಕ್ತ ದಾಖಲೆಗಳೊಂದಿಗೆ ತೂಕದಲ್ಲಿ ವಂಚನೆಯ ದೂರು ದಾಖಲು ಮಾಡಿದರೆ 24 ಗಂಟೆಯೊಳಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.

ದೂರು ದಾಖಲು ಮಾಡಲು ಭಯಪಡುವ ಅಗತ್ಯವಿಲ್ಲ. ತೂಕದಲ್ಲಿ ವಂಚನೆ ಮಾಡಿದ ದೂರು ನೀಡಿದರೆ ಕ್ರಿಮಿನಲ್‌ ಕೇಸು ದಾಖಲಿಸುವುದು ಅಷ್ಟೇ ಅಲ್ಲ, ಸರ್ಕಾರ ರೈತರ ಪರವಾಗಿ ನಿಲ್ಲಲಿದೆ. ವಂಚನೆ ದೂರು ದಾಖಲು ಮಾಡುವ ರೈತನಿಗೆ ಒಂದು ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು ಹಾಗೂ ಅವರ ಕಬ್ಬನ್ನು ನುರಿಸುವ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿದೆ ಎಂದು ಹೇಳಿದರು.

ತೂಕದಲ್ಲಿ ವಂಚನೆ ತಡೆಗೆ ತೂಕ ಮತ್ತು ಮಾಪನ ಇಲಾಖೆ ಅಧಿಕಾರಿಗಳು ಎಲ್ಲಾ ಕಾರ್ಖಾನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಡಿಜಿಟಲ್‌ ತೂಕದ ಯಂತ್ರ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ಈ ಕ್ರಮ ಪ್ರಶ್ನಿಸಿ ಕೆಲವು ಕಾರ್ಖಾನೆಗಳು ಕೋರ್ಟಿಗೆ ಹೋಗಿವೆ. ತೂಕದಲ್ಲಿ ವಂಚನೆ ತಡೆ ವಿಚಾರದಲ್ಲಿ ಸರ್ಕಾರದ ನಿರ್ಧಾರ ಅಚಲವಾಗಿದೆ ಎಂದು ಸ್ಪಷ್ಟಪಡಿಸಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಬ್ಬು ಬೆಳೆಗಾರರು ಸೋಮವಾರ ಸುವರ್ಣ ವಿಧಾನಸೌಧದ ಬಳಿ ಕೈಗೊಂಡಿದ್ದ ಧರಣಿ ಸ್ಥಳಕ್ಕೆ ತೆರಳಿ ಮನವಿ ಪತ್ರ ಸ್ವೀಕರಿಸಿದ ಸಚಿವರು ಸ್ಥಳದಲ್ಲೇ ಕೆಲವು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.

ಸಕ್ಕರೆ ಆಯುಕ್ತರ ಕಚೇರಿಯನ್ನು ಬೆಳಗಾವಿಗೆ ಸ್ಥಳಾಂತರ ಮಾಡಲಾಗುವುದು. ಸ್ಥಗಿತಗೊಂಡಿರುವ ಸಹಕಾರಿ ಕ್ಷೇತ್ರದ ಸಕ್ಕರೆ ಕಾರ್ಖಾನೆಗಳನ್ನು ಸಹಕಾರಿ ವಲಯದಲ್ಲೇ ಉಳಿಸಿ ಪುನರಾರಂಭಕ್ಕೆ ಪ್ರಯತ್ನಿಸಲಾಗುವುದು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ಹೆಚ್ಚುವರಿ 150 ರೂ. ಕೊಡಿಸುವ ಭರವಸೆ ನೀಡಿದ್ದು, ಈ ಹಣ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ರೈತರ ಕಬ್ಬಿನ ಬಿಲ್‌ ಬಾಕಿಯನ್ನು ಸಕ್ಕರೆ ಕಾರ್ಖಾನೆಗಳು ಪೂರ್ಣ ಪ್ರಮಾಣದಲ್ಲಿ ಪಾವತಿ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ. ಕಬ್ಬು ಪೂರೈಕೆ ಮಾಡಿದ 15 ದಿನಗಳೊಳಗೆ ಬಿಲ್‌ ಪಾವತಿ ಮಾಡಬೇಕು ಎಂಬುದು ರೈತರ ಬೇಡಿಕೆ. ಆದರೆ ಸಕ್ಕರೆ ಮಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡುವುದು ವಿಳಂಬ ಮಾಡಿದರೆ ಕಬ್ಬು ಬೆಳೆಗಾರರಿಗೆ ಬಿಲ್‌ ಪಾವತಿ ಮಾಡುವುದು ಕಷ್ಟ ಎಂದು ಹೇಳಿದ್ದಾರೆ. ಸಕ್ಕರೆ ಕಾರ್ಖಾನೆಗಳಿಗೆ ಅಡಮಾನ ಸಾಲ ನೀಡಲು ಸರ್ಕಾರ ಬದ್ಧವಿದ್ದು, ಬಿಲ್‌ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ 30 ಸಹಕಾರಿ ಸಕ್ಕರೆ ಕಾರ್ಖಾನೆಗಳಿದ್ದು, ಅವುಗಳಲ್ಲಿ 13 ಮಾತ್ರ ಕಬ್ಬು ನುರಿಸುತ್ತಿವೆ. ಹಿಂದಿನ ಸರ್ಕಾರ ನಷ್ಟದಲ್ಲಿರುವ 13 ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಖಾಸಗಿಯವರಿಗೆ ಗುತ್ತಿಗೆ ಆಧಾರದ ಮೇಲೆ ನೀಡಿದೆ. ನಮ್ಮ ಸರ್ಕಾರ ನಷ್ಟದಲ್ಲಿರುವ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಸಹಕಾರಿ ವಲಯದಲ್ಲಿಯೇ ಉಳಿಸಿಕೊಂಡು ಪುನಶ್ಚೇತನಗೊಳಿಸಲು ಪ್ರಯತ್ನಿಸಲಿದೆ. ದೇಶಕ್ಕೆ ಮಾದರಿಯಾಗಿದ್ದ ವಿಜಯಪುರ ಜಿಲ್ಲೆಯ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಕೂಡ ನಷ್ಟದಲ್ಲಿದ್ದು, ಈ ಸಕ್ಕರೆ ಕಾರ್ಖಾನೆಗೆ ಸಾಲ ಕೊಡುವ ಮೂಲಕ ಸಹಕಾರಿ ವಲಯದಲ್ಲಿಯೇ ಉಳಿಸಿಕೊಳ್ಳಲಾಗಿದೆ. ಸರ್ಕಾರದ ಒಡೆತನದಲ್ಲಿರುವ ಮೈಷುಗರ್‌ ಸಕ್ಕರೆ ಕಾರ್ಖಾನೆಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ರಾಜ್ಯ ಸರ್ಕಾರವೇ 50 ಕೋಟಿ ರೂ. ನೆರವು ನೀಡಿದೆ ಎಂದು ವಿವರಿಸಿದರು.

ಕಬ್ಬಿನ ಉತ್ಪನ್ನಗಳನ್ನು ಕೇಂದ್ರ ಸರ್ಕಾರ ನಿಯಂತ್ರಣ ಮಾಡಲಿದ್ದು, ಕಳೆದ ಬಾರಿ ಸಕ್ಕರೆ ರಫ್ತು ಮಾಡಲು ಕೇಂದ್ರ ಅನುಮತಿ ನೀಡಿದ ಕಾರಣ ಕಬ್ಬಿಗೆ ಹೆಚ್ಚುವರಿ ಬೆಲೆ ಕೊಡಲು ಸಾಧ್ಯವಾಗಲಿಲ್ಲ. ರೈತರೂ ಕೂಡ 9 ತಿಂಗಳಿಗೆ ಕಬ್ಬು ಕಟಾವು ಮಾಡುವ ಬದಲಿಗೆ ಕನಿಷ್ಟ 12 ತಿಂಗಳ ನಂತರ ಕಟಾವು ಮಾಡಬೇಕು. ಆಗ ಸಕ್ಕರೆ ಇಳುವರಿ ಹೆಚ್ಚಿನ ಪ್ರಮಾಣದಲ್ಲಿ ಬರಲಿದೆ. ಮಹಾರಾಷ್ಟ್ರ ಮತ್ತು ಉತ್ತರಪ್ರದೇಶದಲ್ಲಿ 12ರಿಂದ 13 ತಿಂಗಳ ನಂತರ ಕಟಾವು ಮಾಡುತ್ತಾರೆ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಕ್ಕರೆ ಕಾರ್ಖಾನೆಗಳ ಮೇಲೆ ನಿಯಂತ್ರಣ ಸಾಧಿಸಿದ ನಂತರ ಇಳುವರಿ ಪ್ರಮಾಣ ಹೆಚ್ಚಾಗಿದೆ. ಕಬ್ಬು ನುರಿಸುವುದುನ್ನು ಆರಂಭಿಸುವ ಪೂರ್ವದಲ್ಲಿ ಸಕ್ಕರೆ ಕಾರ್ಖಾನೆಗಳು ರೈತರೊಂದಿಗ ಸಂವಾದ ಏರ್ಪಡಿಸಬೇಕಿದೆ ಎಂದರು.

ಎಪಿಎಂಸಿ ಕಾಯ್ದೆ ಮರುಸ್ಥಾಪನೆ ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಯನ್ನು ಮರುಸ್ಥಾಪನೆ ಮಾಡಿದ್ದು, ಈ ಕ್ರಮದಿಂದ ಈ ಹಿಂದೆ 180 ಕೋಟಿ ರೂ.ಗಳಷ್ಟಿದ್ದ ಆದಾಯ ಈಗ 300 ಕೋಟಿ ರೂ. ದಾಟಿದೆ. ಈ ಹಣವನ್ನು ರೈತರ ಹಿತಕ್ಕಾಗಿಯೇ ವಿನಿಯೋಗ ಮಾಡಲಾಗುವುದು. ರಾಜ್ಯದಲ್ಲಿ ಮೂರು ಖಾಸಗಿ ಎಪಿಎಂಸಿಗಳಿದ್ದು, ಅವುಗಳನ್ನು ಬಂದ್‌ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.

ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಅರಣ್ಯ ಇಲಾಖೆ, ಗೃಹ ಇಲಾಖೆಗಳಿಗೆ ಸಂಬಂಧಿಸಿದ ಬೇಡಿಕೆಗಳನ್ನು ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗುವುದು. ಈ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಶಾಸಕರಾದ ಎನ್.ಹೆಚ್. ಕೋನರೆಡ್ಡಿ, ದರ್ಶನ್‌ ಪುಟ್ಟಣ್ಣಯ್ಯ, ರೈತ ಮುಖಂಡರಾದ ಚೂನಪ್ಪ ಉದ್ದಪ್ಪ ಪೂಜೇರಿ, ಪಚ್ಚೆ ನಂಜುಂಡಸ್ವಾಮಿ, ಶಶಿಕಾಂತ ನಾಯಕ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

About Mallikarjun

Check Also

ಧಾರವಾಡ: ಮತ್ತೆ ನಕ್ಕಿತು ಭೂಮಿ ಕವನ ಸಂಕಲನದ ಬಿಡುಗಡೆ ಕಾರ್ಯಕ್ರಮ

Dharwad: Nakkitu Bhoomi poetry collection release program again ಧಾರವಾಡ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಭವನದಲ್ಲಿ ದಿನಾಂಕ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.