Gudneshwar Rathotsava was held in grandeur with the shouts of thousands of devotees.
ವರದಿ : ಪಂಚಯ್ಯ ಹಿರೇಮಠ.
ಕುಕನೂರು : ಪಟ್ಟಣದ ಐತಿಹಾಸಿಕ ಪ್ರಸಿದ್ದ ಶ್ರೀ ಗುದ್ನೇಶ್ವರ ರಥೋತ್ಸವವು ಡಿ. 15ರ ರವಿವಾರದಂದು ಸಾಯಂಕಾಲ 5.30 ಗಂಟೆಗೆ ನೆರೆದ ಸಾವಿರಾರು ಭಕ್ತಾಧಿಗಳ ಜಯಘೋಷದೊಂದಿಗೆ ಅದ್ದೂರಿಯಾಗಿ ಜರುಗಿತು
ವಿವಿಧ ಕಡೆಗಳಿಂದ ಆಗಮಿಸಿದ್ದ ಸುಮಾರು 40 ರಿಂದ 50 ಸಾವಿರ ಭಕ್ತಾಧಿಗಳು ಜಾತ್ರೋತ್ಸವದಲ್ಲಿ ಪಾಲ್ಗೋಂಡು ಗುದ್ನೇಶ್ವರ ರಥೋತ್ಸವಕ್ಕೆ ಉತ್ತತ್ತಿ, ಬಾಳೆಹಣ್ಣು ಸಮರ್ಪಿಸಿ ಭಕ್ತಿ ಮೆರೆದರು.
ರವಿವಾರದಂದು ಬೆಳಗ್ಗೆಯಿಂದ ಸ್ವಾಮಿಯ ಗದ್ದುಗೆಗೆ ವಿಷೇಶ ಪೂಜೆ ವಿಧಿ, ವಿಧಾನಗಳು ಜರುಗಿದವು.
ರಥೋತ್ಸವದ ನಂತರ ಹೆಂಗೆಳೆಯರು ಮಂಡಕ್ಕಿ, ಮಿರ್ಚಿಯತ್ತ ಮುಖ ಮಾಡಿದರೇ, ಕುಟುಂಬಸ್ಥರು ಜಾತ್ರೆಯಲ್ಲಿ ಫಳಾರ ಖರೀದಿಗೆ ಮುಗಿ ಬಿದ್ದಿದ್ದರು. ಇನ್ನೂ ಮಕ್ಕಳು ಮರಿಗಳು ಆಟಿಕೆ ವಸ್ತು, ಮನೋರಂಜನೆಯ ಜೋಕಾಲಿ, ಡ್ಯಾನ್ಸಿಂಗ್ ವಿಲ್, ಜಾರುಬಂಡಿಯತ್ತ ವಾಲುತ್ತಿದ್ದರೇ, ಮಹಿಳೆಯರು ಬಳೆ, ಶೃಂಗಾರ ವಸ್ತುಗಳ ಖರೀದಿಗೆ ಮುಗಿ ಬಿದ್ದಿದ್ದರು.
ಜಾತ್ರೋತ್ಸವದ ನಿಮಿತ್ತ ವಾರದಿಂದ ಜಾತ್ರೆಯ ಸಕಲ ಸಿದ್ದತೆಗಳು ನಡೆದರೇ, ತರಹೇವಾರು ಅಂಗಡಿ ಮುಂಗಟ್ಟುಗಳವರು ಎಂಟತ್ತು ದಿನಗಳ ಮುಂಚಿತವಾಗಿ ತಮ್ಮ ತಮ್ಮ ಬಿಡಾರುಗಳ ಸಿದ್ಧತೆ ಕೈಗೊಂಡರೇ, ಕಂದಾಯ ಇಲಾಖೆ, ಪಟ್ಟಣ ಪಂಚಾಯತಿಯವರು ಗ್ರಾಮದ ಸ್ವಚ್ಚತೆ ಹಾಗೂ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲು ಮುಂದಾಗಿರುವುದು ಕಂಡುಬಂದಿತು. ಅದರಂತೆ ಆರೋಗ್ಯ ಇಲಾಖೆಯವರು ಪ್ರಥಮ ಚಿಕಿತ್ಸೆಯ ಎಲ್ಲಾ ಸಿದ್ದತೆಯೊಂದಿಗೆ ಬೀಡು ಬಿಟ್ಟಿದ್ದರು.
ಇದೆಲ್ಲದರ ಮಧ್ಯೆ ಕುಕನೂರು ಠಾಣಾ ಪಿಎಸ್ಐ ಟಿ.ಗುರುರಾಜ ಇವರ ನೇತೃತ್ವದಲ್ಲಿ ಪೋಲಿಸ್ ಇಲಾಖೆಯವರು ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಪೋಲಿಸ್ ಬಿಗಿ ಬಂದೋಬಸ್ತ್ ನಿಯೋಜಿಸಿ, ಅಲಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ನೂರಾರು ಪೋಲಿಸ್ ಪಡೆಗಳು ಎಚ್ಚರದಿಂದ ಕಾರ್ಯಪ್ರವೃತ್ತರಾಗಿದ್ದು ಕಂಡು ಬಂದಿತು ಜೊತೆಗೆ ಅಲ್ಲಲ್ಲಿ ಬ್ಯಾರಿಕೆಡ್ ಅಳವಡಿಸಿ, ದ್ವಿಚಕ್ರ ವಾಹನಗಳನ್ನು ಇನ್ನಿತರೇ ವಾಹನ ಸವಾರರನ್ನು ನಿಯಂತ್ರಿಸಿ ಸಾರ್ವಜನಿಕರ ಓಡಾಟಕ್ಕೆ ಅನೂಕೂಲ ಕಲ್ಪಿಸಿದ್ದರು.