Belleppa Graygumpy urges ban on online gaming
ಕೊಪ್ಪಳ ಡಿಸೆಂಬರ್ 10: ರಮ್ಮಿ, ಪೋಕರ್ ಸೇರಿ ಆನ್‌ಲೈನ್ ಗೇಮಿಂಗ್ ಎಂಬ ಜೂಜಾಟದ ವ್ಯಸನಕ್ಕೆ ಹಲವು ಯುವಕರು ಬಲಿಯಾಗುತ್ತಿರುವ ಬಗ್ಗೆ ಪ್ರಕರಣಗಳು ಬರುತ್ತಿವೆ. ಹಾಗಾಗಿ ಇಂತಹ ಆನ್ಲೈನ್ ಗೇಮ್‌ಗಳ ನಿಷೇಧ ಮಾಡಬೇಕು ಎಂದು ಬೆಳ್ಳೆಪ್ಪ ಬೂದುಗುಂಪಿ ಒತ್ತಾಯಿಸಿದ್ದಾರೆ.
ಅವರು ಮಂಗಳವಾರ ಕೊಪ್ಪಳ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ನಮ್ಮ ಕರ್ನಾಟಕ ಸೇನೆ ವತಿಯಿಂದ ಆನ್ಲೈನ್ ಗೇಮ್ ನಿಷೇಧ ಮಾಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಿ ನಂತರ ಮಾತನಾಡಿ, ರಾಜ್ಯದಲ್ಲಿ ಯುವಕರು ಈ ಆನ್‌ಲೈನ್ ಜೂಜಾಟದಲ್ಲಿ ವ್ಯಸ್ತರಾಗಿದ್ದಾರೆ. ಎಷ್ಟೋ ಬಡ ಕುಟುಂಬಗಳು ಇದರಿಂದ ನಾಶವಾಗಿ ಹೋಗಿದೆ. ಕೆಲ ಚಿತ್ರರಂಗದ ನಟರು ಹಾಗೂ ಕೆಲವರು ಆನ್ಲೈನ್ ಗೇಮ್ ಪ್ರಮೋಟ್ ಮಾಡುತ್ತಿದ್ದಾರೆ. ಆನ್ಲೈನ್ ಗೇಮ್ ನಿಂದ ವಂಚನೆಗೆ ಒಳಗಾದ ವ್ಯಕ್ತಿಗಳಿಗೆ ಇವರಿಂದ ಪರಿಹಾರ ಕೊಡಿಸಿದಾಗ ಮಾತ್ರ ಅವರಿಗೆ ಅರ್ಥವಾಗುತ್ತದೆ. ಆನ್ಲೈನ್ ಜೂಜಾಟದ ಗೇಮ್ ಪ್ರಮೋಟ್ ಮಾಡುವ ಚಿತ್ರರಂಗದ ನಟರಿಗೆ ಹಾಗೂ ಪ್ರಮೋಟ್ ಮಾಡುವ ವ್ಯಕ್ತಿಗಳು ಈಗಲಾದರೂ ಅರ್ಥ ಮಾಡಿಕೊಂಡು ಆನ್ಲೈನ್ ಗೇಮ್ ಪ್ರಮೋಟ್ ಮಾಡುವುದನ್ನು ನಿಲ್ಲಿಸಬೇಕು. ರಾಜ್ಯ ಸರ್ಕಾರ ಈ ಮನೆಹಾಳು ಆನ್ ಲೈನ್ ಗೇಮಿಂಗ್‌ಗಳ ಮೇಲೆ ನಿಷೇಧ ಹೇರಬೇಕು ಎಂದು ನಮ್ಮ ಕರ್ನಾಟಕ ಸೇನೆ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷರಾದ ಬೆಳ್ಳೆಪ್ಪ ಬೂದುಗುಂಪಿ ರವರು ಒತ್ತಾಯಿಸಿದರು. ನಂತರ ಜಿಲ್ಲಾಧ್ಯಕ್ಷರಾದ ಬಂದೇ ನವಾಜ್ ಮಾತನಾಡಿ, ಕಾಲೇಜು ಯುವಕರು ಆನ್ಲೈನ್ ಜೂಜಾಟದಲ್ಲಿ ತೊಡಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಹಣ, ಆಸ್ತಿಯನ್ನು ಕಳೆದುಕೊಂಡು ಸಾಲ ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಜ್ಯದಲ್ಲಿ ಜೂಜಾಟ ನಿಷೇಧ ಮಾಡಲಾಗಿದೆ. ಆದರೆ ಆನ್ಲೈನ್ ಜೂಜಾಟಕ್ಕೆ ಅವಕಾಶ ಇದು ನಿಜಕ್ಕೂ ದುರಂತ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಹಾಗೂ ಸರ್ಕಾರ ಕೂಡಲೇ ಸಿಕ್ಕಿಂ ಮತ್ತು ಮಣಿಪಾಲ್ ರಾಜ್ಯಗಳಲ್ಲಿ ಆನ್ಲೈನ್ ಗೇಮ್ ನಿಷೇಧಿಸಿದಂತೆ, ಕರ್ನಾಟಕ ರಾಜ್ಯದಲ್ಲಿ ನಿಷೇಧ ಮಾಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಯುವ ಘಟಕ ಅಧ್ಯಕ್ಷರಾದ ಬಸವರಾಜ್ ಹಂದ್ರಾಳ, ತಾಲೂಕ ಅಧ್ಯಕ್ಷರಾದ ರಮೇಶ್ ನರೇಗಲ್, ಉಪಾಧ್ಯಕ್ಷರಾದ ಭೂಪತಿ ರೆಡ್ಡಿ, ಸೇರಿದಂತೆ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.