Anjanadri: The preparations for the Hanumamala program went on in full swing!
ವರದಿ : ಪಂಚಯ್ಯ ಹಿರೇಮಠ.
ಕಲ್ಯಾಣಸಿರಿ ವಾರ್ತೆ,,
ಕೊಪ್ಪಳ : ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಡಿಸೆಂಬರ್ 12 ಮತ್ತು 13 ರಂದು ನಡೆಯಲಿರುವ ಹನುಮಮಾಲಾ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗಿವೆ.
ಈ ಕಾರ್ಯಕ್ರಮಕ್ಕೆ ಬರುವ ಲಕ್ಷಾಂತರ ಭಕ್ತಾಧಿಗಳಿಗೆ ತೊಂದರೆಯಾಗದಂತೆ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ.
ರಸ್ತೆ ಮತ್ತು ಪಾರ್ಕಿಂಗ ಸ್ಥಳಗಳ ಸ್ವಚ್ಚತೆ, ಪಾದಚಾರಿ ಮಾರ್ಗದ ನಿರ್ಮಾಣ, ಭಕ್ತರಿಗೆ ಕುಡಿಯುವ ನೀರು ಮತ್ತು ಸ್ನಾನಕ್ಕಾಗಿ ನೂರಾರು ನೀರಿನ ಟ್ಯಾಫಗಳನ್ನು ಅಳವಡಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಬರುವ ಭಕ್ತರಿಗೆ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿದೆ. ವೇದಪಾಠ ಶಾಲೆಯ ಹತ್ತಿರದ ಕೋಣೆಯಲ್ಲಿ ಸಾವಿರಾರು ಲಾಡುಗಳ ಪ್ರಸಾದಕ್ಕೆ ಸಿದ್ಧಗೊಳುತ್ತಿವೆ. ಸೂಕ್ತ ಪೊಲೀಸ್ ಬಂದೋಬಸ್ತ್ ಜೊತೆಗೆ ಭಕ್ತಾಧಿಗಳ ಅನುಕೂಲಕ್ಕಾಗಿ ಸಹಾಯವಾಣಿ ಕೇಂದ್ರಗಳ ಸ್ಥಾಪನೆ ಸೇರಿದಂತೆ ಇತರೆ ಹಲವಾರು ಕಾರ್ಯಗಳು ಭರದಿಂದ ಸಾಗಿವೆ.
ಸಾರಿಗೆ ವ್ಯವಸ್ಥೆ: ಆನೆಗೊಂದಿಯಿಂದ ಅಂಜನಾದ್ರಿಯವರೆಗೆ ಎರಡು ಮಿನಿ ಬಸ್ಸುಗಳನ್ನು ಶುಲ್ಕ ರಹಿತವಾಗಿ ಸಂಚರಿಸುವ ವ್ಯವಸ್ಥೆ ಮಾಡಲಾಗಿದೆ. ಇತರ ಜೊತೆಗೆ ಗಂಗಾವತಿ, ಹೊಸಪೇಟೆ, ಕೊಪ್ಪಳದಿಂದ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸುವ ಭಕ್ತಾಧಿಗಳಿಗಾಗಿ ವಿಶೇಷ ಬಸ್ಸಿನ ವ್ಯವಸ್ಥೆ ಇರಲಿದೆ.
15 ಸ್ಥಳದಲ್ಲಿ ಪಾರ್ಕಿಂಗ ವ್ಯವಸ್ಥೆ: ಗಂಗಾವತಿ, ಹೊಸಪೇಟೆ, ಹುಲಗಿಯ ಮಾರ್ಗವಾಗಿ ಬರುವ ಭಕ್ತಾಧಿಗಳ ಹಾಗೂ ಸಾರ್ವಜನಿಕರ ವಾಹನಗಳಿಗಾಗಿ ಆನೆಗುಂದಿ ಉತ್ಸವ ಸ್ಥಳ, ಹನುಮನಹಳ್ಳಿಯ ಹತ್ತಿರ, ದೇವಸ್ಥಾನ ಹಿಂಭಾಗದಲ್ಲಿ, ಪಂಪಾಸರೋವರ ಹತ್ತಿರ ಹಾಗೂ ಇತರೆ ಕಡೆಗಳಲ್ಲಿ ಒಳಗೊಂಡಂತೆ ಒಟ್ಟು 15 ಸ್ಥಳಗಳಲ್ಲಿ ಪಾರ್ಕಿಂಗ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಸರಕಾರಿ ವಾಹನ ನಿಲುಗಡೆಗೆ ಅಂಜನಾದ್ರಿ ದೇವಸ್ಥಾನದ ಮುಂಭಾಗದಲ್ಲಿ ಸ್ಥಳ ನಿಗಧಿಪಡಿಸಿದೆ.
ಭಕ್ತಾದಿಗಳ ಆರೋಗ್ಯ ಸೇವೆ: ಹನುಮಮಾಲಾ ಕಾರ್ಯಕ್ರಮಕ್ಕೆ ಬರುವ ಭಕ್ತಾಧಿಗಳ ಆರೋಗ್ಯದ ಹಿತದೃಷ್ಟಿಯಿಂದ ವೈದ್ಯರು ಮತ್ತು ಅಗತ್ಯ ಔಷಧಿಗಳೊಂದಿಗೆ 2 ಅಂಬುಲೆನ್ಸ್ ತುರ್ತು ಸೇವೆಗಾಗಿ ಕಾಯ್ದಿರಿಸಲಾಗಿದೆ. ಇದರ ಜೊತೆಗೆ ದೇವಸ್ಥಾನದ ಪಾರ್ಕಿಂಗನಲ್ಲಿ ಒಂದು ಚಿಕಿತ್ಸಾಲಯ, ವೇದಪಾಠ ಶಾಲೆಯ ಹತ್ತಿರ ಮತ್ತೊಂದು ಚಿಕಿತ್ಸಾಲಯ ಹಾಗೂ ಬೆಟ್ಟದ ಮೇಲೆ ದೇವಸ್ಥಾನದ ಹತ್ತಿರ ಔಷಧಿಗಳೊಂದಿಗೆ ವೈದ್ಯರ ತಂಡ. ಬೆಟ್ಟ ಹತ್ತುವ ಮತ್ತು ಇಳಿಯುವ ಮಧ್ಯದಲ್ಲಿ 2 ವೈದ್ಯಕೀಯ ತಂಡ (ರೆಸ್ಕೋ ಟೀಮ್ ಮತ್ತು ಔಷಧಿಗಳೊಂದಿಗೆ)ಗಳ ವ್ಯವಸ್ಥೆ ಮಾಡಲಾಗಿದೆ.
ಸಹಾಯವಾಣಿ ಕೇಂದ್ರ ಆರಂಭ: ಭಕ್ತಾಧಿಗಳ ಅನುಕೂಲಕ್ಕಾಗಿ ಸಹಾಯವಾಣಿ ಕೇಂದ್ರಗಳನ್ನು ಆರಂಬಿಸಲಾಗಿದ್ದು, ಗಂಗಾವತಿಯ ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣದಲ್ಲಿ ಬ್ಯಾನರ್‌ನೊಂದಿಗೆ ಇಬ್ಬರು ಅಧಿಕಾರಿಗಳು ಮತ್ತು ಇಬ್ಬರು ಪೊಲೀಸ್‌ರು ಒಳಗೊಂಡ ಸಹಾಯವಾಣಿ ಕೇಂದ್ರವನ್ನು ಆರಂಭಿಸಲಾಗಿದೆ. ಅದೇ ರೀತಿ ಆನೆಗುಂದಿಯ ಶ್ರೀ ಕೃಷ್ಣದೇವರಾಯ ವೃತದಲ್ಲಿ ಬ್ಯಾನರ್‌ನೊಂದಿಗೆ ಇಬ್ಬರು ಅಧಿಕಾರಿಗಳು ಮತ್ತು ಇಬ್ಬರು ಪೊಲೀಸ್‌ರು ಒಳಗೊಂಡ ಸಹಾಯವಾಣಿ ಕೇಂದ್ರ ಹಾಗೂ ಅಂಜನಾದ್ರಿ ದೇವಸ್ಥಾನದ ಮುಂಭಾಗದಲ್ಲಿ ಬ್ಯಾನರ್‌ನೊಂದಿಗೆ ಇಬ್ಬರು ಅಧಿಕಾರಿಗಳು ಮತ್ತು ಇಬ್ಬರು ಪೊಲೀಸ್‌ರನ್ನು ಒಳಗೊಂಡ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಈ ಸಹಾಯವಾಣಿ ಕೇಂದ್ರಗಳಲ್ಲಿ ಮಾಲಾಧಾರಿಗಳಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುವುದು ಎಂದು ಕೊಪ್ಪಳ ಉಪವಿಭಾಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.