Breaking News

10,651ಕ್ಕೂ ಹೆಚ್ಚು ಬಗರ್ ಹುಕುಂ ಜಮೀನು ಖಾತೆ ಬಾಕಿ -ಕಂದಾಯ ಸಚಿವ ಕೃಷ್ಣಭೈರೇಗೌಡ

More than 10,651 bagar hukum land accounts pending – Revenue Minister Krishnabhairegowda

ಜಾಹೀರಾತು

ಬೆಳಗಾವಿ ಚಳಿಗಾಲದ ಅಧಿವೇಶನದ ಮೊದಲ ದಿನ

ಬೆಳಗಾವಿ ಸುವರ್ಣಸೌಧ ಡಿ.09 : ರಾಜ್ಯದಲ್ಲಿ ಬಗರ್ ಹುಕುಂ ಸಾಗುವಳಿ ಸಮಿತಿಗಳಲ್ಲಿ ನಿರ್ಣಯಿಸಿ ಅರ್ಹ ಫಲಾನುಭವಿಗಳಿಗೆ ಜಮೀನು ಮಂಜೂರು ಮಾಡಿರುವ 10,651 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಜಮೀನು ಖಾತೆ ಮಾಡುವುದು ಬಾಕಿಯಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.
ಬೆಳಗಾವಿ ಸುವರ್ಣ ಸೌಧದಲ್ಲಿ ಸೋಮವಾರ ಆರಂಭವಾದ ಚಳಿಗಾಲದ ಅಧಿವೇಶನದಲ್ಲಿ ಶಾಸಕರ ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಅವರು ಉತ್ತರಿಸಿ ಮಾತನಾಡಿದರು.
ಜಮೀನು ಖಾತೆ ಮಾಡದಿರಲು ಸುಮಾರು 20 ಅಂಶಗಳನ್ನು ಗುರುತಿಸಲಾಗಿದೆ. ಯಾವುದೇ ಅಡಚಣೆ ಇರದ ಪ್ರಕರಣಗಳಲ್ಲಿ ಶೀಘ್ರವೇ ಅರ್ಹ ಫಲಾನುಭವಿಗಳಿಗೆ ಖಾತೆ ಮಾಡಿಕೊಡಲಾಗುವುದು. ಹಲವು ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿ ಯಾವುದೇ ಖಾತೆ ಮಾಡುವುದು ಬಾಕಿ ಇಲ್ಲ ಎಂದು ವರದಿ ನೀಡಿದ್ದಾರೆ. ಆದರೂ ಈ ವರದಿ ಅಂತಿಮವಲ್ಲ. ಜಮೀನು ಖಾತೆ ಪ್ರಕರಣಗಳ ಸಂಖ್ಯೆ ರಾಜ್ಯಾದ್ಯಂತ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಇರಬಹುದು ಎಂದು ಸಚಿವ ಕೃಷ್ಣಭೈರೇಗೌಡ ಹೇಳಿದರು.

ಈ ಸಂದರ್ಭದಲ್ಲಿ ಶಿರಾ ಶಾಸಕ ಟಿ.ಬಿ. ಜಯಚಂದ್ರ, ಶಿರಾ ತಾಲ್ಲೂಕಿನಲ್ಲಿ 2004ರಲ್ಲಿ ಮಂಜೂರು ಮಾಡಿದ ಜಮೀನುಗಳಿಗೂ ಕಂದಾಯ ಅಧಿಕಾರಿಗಳು ಖಾತೆ ಮಾಡಿಕೊಟ್ಟಿಲ್ಲ. ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸರ್ಕಾರ ಕೂಡಲೇ ವಿಶೇಷ ಅಧಿಕಾರಿಯನ್ನು ನೇಮಿಸಿ, ತನಿಖೆ ನಡೆಸಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು, ಅಲ್ಲದೆ ರೈತರಿಗೆ ಮಂಜೂರಾದ ಜಮೀನಿನ ಹಕ್ಕು ಲಭಿಸುವಂತೆ ಮಾಡಬೇಕು ಎಂದು ಕಂದಾಯ ಸಚಿವರಲ್ಲಿ ಕೋರಿದರು. ಇದಕ್ಕೆ ಸಕಾರಾತ್ಮವಾಗಿ ಸ್ಪಂದಿಸಿ, ವಿಶೇಷ ಅಧಿಕಾರಿಯನ್ನು ನೇಮಿಸಿ, ಸಮಸ್ಯೆ ಪರಿಹರಿಸುವುದಾಗಿ ಸಚಿವ ಕೃಷ್ಣ ಭೈರೇಗೌಡ ಅವರು ಭರವಸೆ ನೀಡಿದರು.

ಗೋಮಾಳ ನಿಯಮ ಬದಲಾವಣೆ ಸಾಧ್ಯವಿಲ್ಲ

ಸರ್ವೋಚ್ಛ ನ್ಯಾಯಾಲಯ 3 ಪ್ರಕರಣಗಳಲ್ಲಿ ಸ್ಪಷ್ಟವಾಗಿ ಗೋಮಾಳ ಜಮೀನನ್ನು ಇತರೆ ಉದ್ದೇಶಗಳಿಗೆ ಮಂಜೂರು ಮಾಡದಂತೆ ಆದೇಶ ಹೊರಡಿಸಿದೆ. 1991 ಭೂ ಸುಧಾರಣೆ ಕಾಯ್ದೆ ಅನುಸಾರ 100 ಜಾನುವಾರುಗಳಿಗೆ 30 ಎಕರೆ ಗೋಮಾಳ ಜಮೀನು ಕಾಯ್ದಿರಿಸುವ ನಿಯಮ ರೂಪಿಸಲಾಗಿದೆ. ಸದ್ಯ ಇವುಗಳ ಬದಲಾವಣೆ ಸಾಧ್ಯವಿಲ್ಲ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಸ್ಪಷ್ಟ ಪಡಿಸಿದರು.
ಶಾಸಕ ಧೀರಜ್ ಮುನಿರಾಜು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.
ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಲು ನಮೂನೆ 50, 53, 57 ರಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ನಿಯಮಾನುಸಾರ ವಿಲೇವಾರಿ ಮಾಡಲಾಗುತ್ತಿದೆ. ನಮೂನೆ 57ರ ಅಡಿ ಸಲ್ಲಿಕೆಯಾದ ಒಟ್ಟು 2.23 ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ರಾಜ್ಯಾದ್ಯಂತ ತಿರಸ್ಕೃತಗೊಳಿಸಲಾಗಿದೆ. ಒಂದು ವೇಳೆ ರೈತರು ಇದರಿಂದ ಬಾಧಿತರಾಗಿದ್ದರೆ, ಉಪವಿಭಾಗಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದು. ಪ್ರಕರಣಗಳನ್ನು ಮರು ಪರಿಶೀಲಿಸುವಂತೆ ಉಪವಿಭಾಗಧಿಕಾರಿಗಳು ಸೂಚಿಸಿದರೆ, ಬಗರ್ ಹುಕುಂ ಸಮಿತಿಗಳಲ್ಲಿ ತಿರಸ್ಕೃತಗೊಂಡ ನಮೂನೆ 57ರ ಅರ್ಜಿಗಳನ್ನು ಪುನರ್ ಪರಿಶೀಲನೆಗೆ ಪರಿಗಣಿಸಲಾಗುವುದು ಎಂದು ತಿಳಿಸಿದರು.

ಜ.1 ರಿಂದ ಭೂ ಮಂಜೂರಾತಿ ದಾಖಲೆಗಳ ಸ್ಕ್ಯಾನಿಂಗ್ ನಿಂಗ್

ಜ.1 ರಿಂದ ಎಲ್ಲ ತಾಲ್ಲೂಕು ಕಚೇರಿಗಳಲ್ಲಿ ಸರ್ಕಾರದಿಂದ ಮಂಜೂರು ಮಾಡಿರುವ ಭೂ ದಾಖಲೆಗಳು ಹಾಗೂ ಬಗರ್ ಹುಕಂ ಸಮಿತಿ ಸಭೆಯ ನಡಾವಳಿಗಳನ್ನು ಸ್ಕ್ಯಾನಿಂಗ್ ಮಾಡಿ ಡಿಜಿಟಲೀಕರಣ ಗೊಳಿಸಲು ಕ್ರಮ ವಹಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಸದನದಲ್ಲಿ ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.

ರಾಜ್ಯದ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಇಲ್ಲ : ದಿನೇಶ್ ಗುಂಡೂರಾವ್

ಬೆಳಗಾವಿ ಸುವರ್ಣಸೌಧ ಡಿ.09 : ರಾಜ್ಯದ ಯಾವುದೇ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳ ಕೊರತೆ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಅವರು ವಿಧಾನ ಪರಿಷತ್‌ನಲ್ಲಿ ಸದಸ್ಯ ಹೆಚ್.ಎಸ್. ಗೋಪಿನಾಥ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.

ಕರ್ನಾಟಕ ರಾಜ್ಯದ ಸರ್ಕಾರಿ ಆರೋಗ್ಯ ಸಂಸ್ಥೆಗಳಿಗೆ ಅವಶ್ಯವಿರುವ ಹಾಗೂ State Therapeutic Committee ಯಲ್ಲಿ ನಿರ್ಧರಿಸಿ ಅನುಮೋದಿಸಿದ ಔಷಧಿಗಳ ವಾರ್ಷಿಕ ಬೇಡಿಕೆ ಪಟ್ಟಿಯನ್ನು E-AUSHADA ತಂತ್ರಾಂಶದ ಮುಖಾಂತರ ಕರ್ನಾಟಕ ರಾಜ್ಯ ವೈದಕೀಯ ಸರಬರಾಜು ನಿಗಮ ನಿಯಮಿತ (KSMSCL) ಸಲ್ಲಿಸಲಾಗುತ್ತಿದೆ. KSMSCL ಸಂಸ್ಥೆಯಿಂದ ಕೆ.ಟಿ.ಪಿ.ಪಿ ನಿಯಮಾನುಸಾರ ಟೆಂಡರ್ ಮುಖಾಂತರ ಔಷಧಿಗಳನ್ನು ಸಂಗ್ರಹಿಸಿ ಜಿಲ್ಲಾವಾರು KSMSCL, ಉಗ್ರಾಣಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದರು.

ಜಿಲ್ಲಾ KSMSCL ಔಷಧ ಉಗ್ರಾಣಗಳಿಂದ ಆರೋಗ ಸಂಸ್ಥೆವಾರು ಬೇಡಿಕೆಯನ್ನಯ ಕೊರತೆಯಾಗದಂತೆ ಔಷಧಿಗಳನ್ನು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.

KSMSCL ಸಂಸ್ಥೆಯ ಜಿಲ್ಲಾ ಔಷಧ ಉಗ್ರಾಣಗಳಲ್ಲಿ ಲಭವಿರುವ ಔಷಧಿಗಳ ಪಟ್ಟಿಯನ್ನು ಎಲ್ಲಾ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿರುತ್ತದೆ. ಸಾರ್ವಜನಿಕ ಆರೋಗ ಸಂಸ್ಥೆಗಳು ತಮಗೆ ಅವಶ್ಯವಿರುವ ಔಷಧಿಗಳನ್ನು ಜಿಲ್ಲಾವಾರು KSMSCL ಔಷಧ ಉಗ್ರಾಣಗಳಿಗೆ ಬೇಡಿಕೆ ಸಲ್ಲಿಸಿ ಪಡೆಯಲಾಗುತ್ತಿದೆ ಎಂದರು.

2023-24 ನೇ ಸಾಲಿನ ವಿವಿಧ ಹಂತದ ಆರೋಗ್ಯ ಸಂಸ್ಥೆಗಳು ಬೇಡಿಕೆಯ 732 ಔಷಧಿಗಳನ್ನು ಸರಬರಾಜು ಮಾಡಲು ಟೆಂಡರ್‌ಗಳನ್ನು KSMSCL ವತಿಯಿಂದ ಆಹ್ವಾನಿಸಲಾಗಿರುತ್ತದೆ ಹಾಗೂ ಟೆಂಡರ್ ಪ್ರಕ್ರಿಯೆ ಅಂತಮಗೊಳಿಸಿ ಈಗಾಗಲೇ 475 ಔಷಧಗಳ ಸರಬರಾಜಿಗಾಗಿ ಖರೀದಿ ಆದೇಶ ನೀಡಲಾಗಿದ್ದು, 01 ಔಷಧಗಳ ಸರಬರಾಜಿಗಾಗಿ Notification of Award ಗಳನ್ನು ನೀಡಲಾಗಿರುತ್ತದೆ.

ಶೂನ್ಯ ಬಿಡ್ ಹಾಗೂ ಬಿಡ್ ಯಶಸ್ವಿಯಾಗದ 256 ಔಷಧಗಳಿಗೆ ಮೆರು ಟೆಂಡರ್ ಆಹ್ವಾನಿಸಿ ಸರಬರಾಜು ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಖರೀದಿ ಆದೇಶ ನೀಡಲಾಗಿರುವ 475 ಮತ್ತು NOA ನೀಡಲಾಗಿರುವ 1 ಔಷಧಗಳ ಮಾಹಿತಿ ಹಾಗೂ ಖರೀದಿ ಪ್ರಕ್ರಿಯೆಯಲ್ಲಿರುವ 256 ಔಷಧಗಳ ಮಾಹಿತಿಯು KSMSCL Health & Family Welfare ನ ಜಾಲತಾಣದಲ್ಲಿ ಲಭ್ಯವಿರುತ್ತದೆ.

ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳದ ಔಷಧಗಳನ್ನು ಸೂಕ್ತ ಪ್ರಾಧಿಕಾರದ ಅನುಮೋದನೆಯೊಂದಿಗೆ ಸ್ಥಳೀಯವಾಗಿ ರಾಷ್ಟ್ರೀಯ ಉಚಿತ ಔಷಧಿ ಸೇವೆಗಳ ಕಾರ್ಯಕ್ರಮದ ಅಡಿಯಲ್ಲಿ ಲಭ್ಯವಿರುವ ಅನುದಾನ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ABARK) ಅನುದಾನ, ಆರೋಗ್ಯ ರಕ್ಷ ಸಮಿತಿ (ARS) ಹಾಗೂ ಇತರೆ ಅನುದಾನದಲ್ಲಿ ನಿಯಮಾನುಸಾರ ಆರೋಗ್ಯ ಸಂಸ್ಥೆಗಳಿಗೆ ಸ್ಥಳೀಯವಾಗಿ ಖರೀದಿಸಲು ಆರೋಗ್ಯ ಇಲಾಖೆಯಲ್ಲಿ ಅವಕಾಶವಿರುತ್ತದೆ ಎಂದರು.
ಗಾಂಧಿಭಾರತ ಕಾರ್ಯಕ್ರಮ ಲಾಂಛನ ಅನಾವರಣ

ಬೆಳಗಾವಿ ಚಳಿಗಾಲದ ಅಧಿವೇಶನದ ಮೊದಲ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಮಹಾತ್ಮ ಗಾಂಧಿ ಅವರ ಅಧ್ಯಕ್ಷತೆಯಲ್ಲಿ 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಪ್ರಸಕ್ತ ವರ್ಷದುದ್ದಕ್ಕೂ ಆಯೋಜಿಸಿರುವ ” ಗಾಂಧಿಭಾರತ” ಕಾರ್ಯಕ್ರಮದ ಲಾಂಛನವನ್ನು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ
ಅನಾವರಣಗೊಳಿಸಿದರು.

ಬೆಳಗಾವಿಯಲ್ಲಿ ಇದೇ ಡಿಸೆಂಬರ್ 26 ಹಾಗೂ 27 ರಂದು ಗಾಂಧಿಭಾರತ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.ಮುಂಬರುವ 2025 ರ ಅಕ್ಟೋಬರ್ 2 ರವರೆಗೆ ರಾಜ್ಯದಾದ್ಯಂತ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. 1924 ರಲ್ಲಿ ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನಕ್ಕೆ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಅಧಿವೇಶನ ಎಂಬ ಹಿರಿಮೆ ಇದೆ. ಈ ಸಂದರ್ಭದಲ್ಲಿ ಗಾಂಧೀಜಿಯವರ ಬದುಕು,ಹೋರಾಟ,ಸ್ವಾತಂತ್ರ್ಯ ಚಳುವಳಿ ಕುರಿತು ಮಕ್ಕಳು, ಯುವಜನರು ಸೇರಿದಂತೆ ಎಲ್ಲಾ ವಯೋಮಾನದ ಜನರಲ್ಲಿ ದೇಶಾಭಿಮಾನ,ಸತ್ಯ,ಅಹಿಂಸೆ,ಆರ್ಥಿಕ ಚಿಂತನೆಗಳು,ಸ್ವರಾಜ್,ಅಸ್ಪೃಶ್ಯತೆ ನಿವಾರಣೆ ಮತ್ತಿತರ ವಿಚಾರಗಳ ಮೇಲೆ ಬೆಳಕು ಚೆಲ್ಲುವ ಕಾರ್ಯಕ್ರಮಗಳನ್ನು ಸರ್ಕಾರ ಆಯೋಜಿಸುತ್ತಿದೆ.

ಈ ಸಂದರ್ಭದಲ್ಲಿ, ವಿಧಾನ ಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ, ಕಾನೂನು,ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್,ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ, ಶಾಸಕರಾದ ಬಸವರಾಜ ರಾಯರೆಡ್ಡಿ,ಚನ್ನರಾಜ ಹಟ್ಟಿಹೊಳಿ,ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

About Mallikarjun

Check Also

ನಿರ್ಮಲ ತುಂಗಭದ್ರಾ ಅಭಿಯಾನದ ಪೋಸ್ಟರ್ ಬಿಡುಗಡೆ

Nirmala Tungabhadra campaign poster release ಗಂಗಾವತಿ: ಇಂದು ಲಯನ್ಸ್ ಕ್ಲಬ್‌ನಲ್ಲಿ ನಡೆದ ನಿರ್ಮಲ ತುಂಗಭದ್ರಾ ಅಭಿಯಾನದ ಸಂಘ-ಸಂಸ್ಥೆಗಳೊಂದಿಗೆ ನಡೆದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.