Theft in various places! Sandalwood Check, Police Department Arrested Wood Thieves,,,

ಕೊಪ್ಪಳ: ಕುಕನೂರು, ಯಲಬುರ್ಗಾ ಠಾಣೆ ವ್ಯಾಪ್ತಿಯಲ್ಲಿ ನಡೆದ ಆರು ವಿವಿಧ ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದು, ಶ್ರೀಗಂಧ ಮರಗಳ್ಳರು ಸೇರಿ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ನಗದು ಸೇರಿ ರೂ. 13.30 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ನ. 23ರಂದು ಕುಕನೂರು ಎಪಿಎಂಸಿಯಲ್ಲಿ ಶರೀಫಸಾಬ ಎಂಬುವರು ರಾಜು ಟ್ರೇಡಿಂಗ್ ಕಂಪನಿ ಅಂಗಡಿ ಹಿಂದೆ ನಿಲ್ಲಿಸಿದ್ದ 1.90 ಲಕ್ಷ ರೂ. ಮೌಲ್ಯದ ಟ್ರ್ಯಾಕ್ಟರ್, ಟ್ರಾಲಿ ಕಳ್ಳತನ ಆಗಿತ್ತು. ಪ್ರಕರಣದಲ್ಲಿ ಆಡೂರು ಗ್ರಾಮದ ಬಸವರಾಜ ಹೊಸಮನಿ ಎಂಬಾತನನ್ನು ಬಂಧಿಸಿದ್ದು, 5 ಲಕ್ಷ ರೂ. ಮೌಲ್ಯದ ಟ್ರ್ಯಾಕ್ಟರ್, ಟ್ರಾಲಿ ವಶಕ್ಕೆ ಪಡೆಯಲಾಗಿದೆ. ಶಿರೂರು ಗ್ರಾಮದ ಶರಣಪ್ಪ ಎಂಬುವರ ಹೊಲದಲ್ಲಿ ರೂ.1.32 ಲಕ್ಷ ಮೌಲ್ಯದ 11 ಶ್ರೀಗಂಧದ ಮರ ಕಳ್ಳತನ ಆಗಿದ್ದವು. ಪ್ರಕರಣ ದಲ್ಲಿ ಕೊಪ್ಪಳದ ಲಕ್ಷ್ಮಣ ಹರಿಣಿ ಶಿಕಾರಿ, ಕುಮಾರ ಭೋವಿ, ಕೆ.ಎಸ್.ರೂಪ ನಾಯಕ ಎಂಬು ವರನ್ನು ಬಂಧಿಸಲಾಗಿದೆ.
ಆರೋಪಿಗಳು ಮೂರು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇವರಿಂದ ರೂ.4.50 ಲಕ್ಷ ನಗದು, ರೂ.40 ಸಾವಿರ ಮೌಲ್ಯದ 40 ಕೆಜಿ ತೂಕದ ಗಂಧದ ಮರ, ರೂ.500 ಮೌಲ್ಯದ ಗಂಧದ ಚಕ್ಕೆ, ರೂ.1 ಲಕ್ಷ ಮೌಲ್ಯದ ಆಟೋ ಜಪ್ತಿ ಮಾಡಿದ್ದಾಗಿ ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
ಯಲಬುರ್ಗಾ ತಾಲೂಕಿನ ಕೋನಸಾಗರದ ಮಲ್ಲಪ್ಪ ಎಂಬ ರೈತ ಹೊಲದಲ್ಲಿ ಕಟ್ಟಿ ಹಾಕಿದ್ದ 70 ಸಾವಿರ ರೂ. ಮೌಲ್ಯದ ಒಂದು ಜೋಡಿ ಎತ್ತು ಕಳ್ಳರು ಕದ್ದೊಯ್ದಿದ್ದರು. ಅದೇ ಗ್ರಾಮದ ಪರಸಪ್ಪ ಭಜಂತ್ರಿ, ಶಿವಾನಂದ ಭಜಂತ್ರಿ ಎಂಬುವವರನ್ನು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಕಳ್ಳರಿಂದ 70 ಸಾವಿರ ರೂ. ಮೌಲ್ಯದ ಎತ್ತುಗಳು, ರೂ.1.50 ಲಕ್ಷ ವಾಹನ ಮತ್ತು ಬೇರೆಡೆ ಆಕಳು ಕದ್ದು ಮಾರಾಟ ಮಾಡಿದ್ದ ರೂ.20
ಸಾವಿರ ಹಣ ಜಪ್ತಿ ಮಾಡಿರುವುದಾಗಿ ಹೇಳಿದರು. ಒಟ್ಟು 6 ಪ್ರಕರಣದಲ್ಲಿ ಆರು ಆರೋಪಿಗಳನ್ನು ಬಂಧಿಸಿಲಾಗಿದೆ.
ರೂ.4.70 ಲಕ್ಷ ನಗದು ಸೇರಿ ರೂ.13.30 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ನಮ್ಮ ಸಿಬ್ಬಂದಿ ಸಾಕಷ್ಟು ಶ್ರಮವಹಿಸಿ ಪ್ರಕರಣ ಭೇದಿಸಿದ್ದಾರೆ. ಅವರಿಗೆಲ್ಲ ಬಹುಮಾನ ನೀಡಲಾಗುವುದೆಂದು ಮಾಹಿತಿ ನೀಡಿದರು.
ಈ ವೇಳೆ ಎ ಎಸ್ ಪಿ ಹೇಮಂತ್ ಕುಮಾರ್, ಯವಬುರ್ಗಾ ಸಿಪಿಐ ಮೌನೇಶ ಮಾಲಿ ಪಾಟೀಲ್, ಕುಕನೂರು ಪಿಎಸ್‌ಐ ಟಿ. ಗುರುರಾಜ, ಯಲಬುರ್ಗಾ ಪಿಎಸ್ಐ ವಿಜಯ ಪ್ರತಾಪ್, ಗುಲಾಂ ಅಹಮದ್, ಪ್ರಶಾಂತ ಇತರರಿದ್ದರು.