Yatnala’s passion for power: Channabasawananda Sri Akrosha
ಬೀದರ್: ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರಿಗೆ ಅಧಿಕಾರ ಮದ ಮತ್ತು ಧನ ಮದದಿಂದ ಪಿತ್ತ ನೆತ್ತಿಗೇರಿದೆ ಎಂದು ಬೆಂಗಳೂರು ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ಕಿಡಿ ಕಾರಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಭಾನುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಯತ್ನಾಳ್ ಅವರು “ಬಸವಣ್ಣನವರು ಹೊಳ್ಯಾಗ್ ಹಾರಿದ್ರು” ಎಂದು ಹೇಳಿಕೆ ನೀಡಿ ಸಮಸ್ತ ಬಸವ ಭಕ್ತರಿಗೆ ಅವಮಾನ ಮಾಡಿದ್ದಾರೆ. ಯತ್ನಾಳ್ ಬಸವ ಭಕ್ತರಲ್ಲಿ ಕ್ಷಮೆ ಯಾಚಿಸಬೇಕು.ಮತಿಭ್ರಮಣೆ ರೀತಿಯ ಅವಹೇಳನಕಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಹೇಳಿಕೆ ನೀಡಿದ್ದೂ ಅಲ್ಲದೇ “ನಾನೇ ಬಸವಣ್ಣ, ನಾನೇಕೆ ಕ್ಷಮೆ ಕೇಳಬೇಕು?” ಎಂಬ ಅಹಂಕಾರದ ಮಾತುಗಳನ್ನಾಡುತ್ತಿರುವುದು ಸರ್ವ ಬಸವ ಭಕ್ತರಿಗೆ ನೋವಾಗಿದೆ. ಹೀಗಾಗಿ ಡಿ. 3 ರಂದು ಬೆ. 11 ಗಂಟೆಗೆ ನಗರದಲ್ಲಿ ಬಸವನಗೌಡ ಪಾಟೀಲ ಯತ್ನಾಳ್ ಅವರಿಗೆ ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ವಿಧಾನಸಭಾ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಲಾಗುತ್ತಿದೆ. ಆದ್ದರಿಂದ ಈ ಹೋರಾಟದಲ್ಲಿ ಜಿಲ್ಲೆಯ ಬಸವ ಭಕ್ತರು ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಮೂಲ ಅನುಭವ ಮಂಟಪ ಕುರಿತು ಉತ್ತರಿಸಿದ ಶ್ರೀಗಳು,
ಸರ್ಕಾರದ ವತಿಯಿಂದ ಆಧುನಿಕ ಅನುಭವ ಮಂಟಪ ನಿರ್ಮಾಣ ಮಾಡುತ್ತಿರುವುದು ಖುಷಿ ತಂದಿದೆ. ಅದು ನಿರ್ಮಾಣವಾಗಲಿ ಆದರೆ ದೇಶದ ಅನೇಕ ಕಡೆಗಳಲ್ಲಿ ರಾಮ ಮಂದಿರ ಇದ್ದರೂ ಆಯೋಧ್ಯೆಯಲ್ಲಿಯೇ ಶ್ರೀರಾಮನ ಮೂಲ ಸ್ಥಾನದಲ್ಲಿ ಮಂದಿರ ನಿರ್ಮಾಣ ಮಾಡಿದಂತೆ ಬಸವಾದಿ ಶರಣರು ವಿಶ್ವಕ್ಕೆ ಪ್ರಜಾಪ್ರಭುತ್ವ ನೀಡಿದ ಬಸವಕಲ್ಯಾಣದ ಮೂಲ ಅನುಭವ ಮಂಟಪದ ಸ್ಥಾನ ಗುರುತಿಸಿ ಅಲ್ಲಿಯೂ ಅನುಭವ ಮಂಟಪ ನಿರ್ಮಿಸಿದರೆ ಶರಣರ ಹೆಜ್ಜೆ ಗುರುತು ಉಳಿಸಿದಂತಾಗುತ್ತದೆ ಎಂದರು.
ಕೇಂದ್ರ ಸರ್ಕಾರ ಕೂಡಲೇ ಮೂಲ ಅನುಭವ ಮಂಟಪದ ಪತ್ತೆ ಹಚ್ಚಬೇಕು. ಮೂಲ ಅನುಭವ ಮಂಟಪ ಅದು ನಮ್ಮ ಧಾರ್ಮಿಕ ಹಕ್ಕು. ಅದಕ್ಕಾಗಿ ಯಾರೇ ಮುಂದಾದರೂ, ಯಾರೆ ಸ್ವಾಮಿಜಿಗಳು ಹೋರಾಟ ಮಾಡಲು ಮುಂದಾದರೂ ನಮ್ಮ ಸಂಪುರ್ಣ ಬೆಂಬಲ ಇರುತ್ತದೆ ಎಂದವರು ತಿಳಿಸಿದರು.
ಬಸವ ಮಂಟಪದ ಪೂಜ್ಯ ಮಾತೆ ಸತ್ಯಾದೇವಿ ಮಾತನಾಡಿ, ಬಸವಣ್ಣನವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ದಿನವೇ ಯತ್ನಾಳ್ ಅವರು ಎಲ್ಲರ ವಿಶ್ವಾಸ ಕಳೆದುಕೊಂಡರು ಎಂದು ತಿಳಿಸಿದರು.
ಲಿಂಗಾಯತ ಧರ್ಮ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ,
ಪ್ರಮುಖರಾದ ಶಿವಶರಣಪ್ಪ ಪಾಟೀಲ, ಕಾಶಪ್ಪ ಸೀತಾ, ಬಸವಂತರಾವ ಬಿರಾದಾರ, ಶಾಂತಪ್ಪ ಮುಗಳಿ, ನಿರ್ಮಲಾ ನಿಲಂಗೆ, ಮಲ್ಲಿಕಾರ್ಜುನ ಶಾಪುರ, ಸಿದ್ಧವೀರ ಸಂಗಮದ, ಸತೀಶ ಪಾಟೀಲ, ಬಸಮ್ಮ ಬಿರಾದಾರ, ಈರಮ್ಮ ಕೋರೆ ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.