Narega Cooperative EO Lakshmidevi for village development said
ವಡ್ಡರಹಟ್ಟಿಯಲ್ಲಿ 2025-26ನೇ ಸಾಲಿನ ನರೇಗಾ ಕ್ರಿಯಾಯೋಜನೆ ಗ್ರಾಮಸಭೆ
ಗಂಗಾವತಿ : ಉದ್ಯೋಗ ಖಾತರಿ ಯೋಜನೆ ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ಧಿಗೆ ನೆರವಾಗಿದ್ದು, ಯೋಜನೆಯಿಂದ ಹಳ್ಳಿಗಳಲ್ಲಿ ಆಸ್ತಿಗಳ ಸೃಜನೆ ಆಗುತ್ತಿವೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಅವರು ಹೇಳಿದರು.
ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯತ್ ಆವರಣದಲ್ಲಿ 2025-26 ನೇ ಸಾಲಿನ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಕ್ರಿಯಾಯೋಜನೆ ತಯಾರಿಕೆ ಕುರಿತು ಶನಿವಾರ ಆಯೋಜಿಸಿದ್ದ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದರು.
ಫಲಾನುಭವಿಗಳು ನರೇಗಾದಡಿ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಗ್ರಾಮ ಪಂಚಾಯತಿಯ ಚುನಾಯಿತ ಜನಪ್ರತಿನಿಧಿಗಳು ಜನರ ಆಶೋತ್ತರಗಳಿಗೆ ಸ್ಪಂದಿಸಿ ಗ್ರಾಮದ ಗ್ರಾಮೀಣಾಭಿವೃದ್ಧಿ ಕನಸು ನನಸು ಮಾಡಬೇಕು ಎಂದರು.
ಈ ಬಾರಿ ಆನ್ ಲೈನ್ ನಲ್ಲಿ ಕ್ರಿಯಾಯೋಜನೆ ಅಪ್ಲೋಡ್ ಮಾಡಬೇಕಿದೆ. ಜೊತೆಗೆ ಕ್ಯೂಆರ್ ಕೋಡ್ ಬಳಸಿ ಸಲ್ಲಿಸಿದ ಬೇಡಿಕೆಗಳ ಕಾಮಗಾರಿಗಳನ್ನು ಪರಿಶೀಲನೆ ಮಾಡಿ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಚಲವಾದಿ ಅವರು ಮಾತನಾಡಿ, ಯೋಜನೆಯ ಫಲಾನುಭವಿಗಳು ನಿರ್ದಿಷ್ಟ ಕಾಲಾವಧಿಯಲ್ಲಿ ನಿಯಮಾನುಸಾರ ಕಾಮಗಾರಿ ಮಾಡಿಕೊಳ್ಳಬೇಕು. ನರೇಗಾದಡಿ ಜಾನುವಾರುಶೆಡ್, ಮೇಕೆ ಶೆಡ್, ಕೋಳಿ ಶೆಡ್ ಇತರೆ ವೈಯಕ್ತಿಕ ಕಾಮಗಾರಿಗಳ ಸೌಲಭ್ಯವನ್ನು ಫಲಾನುಭವಿಗಳು ಪಡೆದುಕೊಂಡು ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಬೇಕು. ಜೊತೆಗೆ ನರೇಗಾದಡಿ ಒಂದು ಕುಟುಂಬಕ್ಕೆ ವರ್ಷಕ್ಕೆ 100 ದಿನಗಳ ದುಡಿಯಲು ಅವಕಾಶ ಇದ್ದು, ಎಲ್ಲರೂ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಈಗಾಗಲೇ ಗ್ರಾ.ಪಂ ವತಿಯಿಂದ ನರೇಗಾ ಯೋಜನೆಯಡಿ ಸಾಕಷ್ಟು ಕಾಮಗಾರಿಗಳನ್ನು ಅನುಷ್ಟಾನ ಮಾಡಿದ್ದೇವೆ. ಮುಂದಿನ ವರ್ಷವೂ ಗ್ರಾಮದಲ್ಲಿ ಆಸ್ತಿ ಸೃಜನೆಯಾಗುವಂತ ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡಿ, ಕ್ರಿಯಾ ಯೋಜನೆಯಲ್ಲಿ ಸೇರಿಸಿ ಅನುಷ್ಟಾನ ಮಾಡುವ ಮೂಲಕ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಲಾಗುವುದು ಎಂದರು.
ಗ್ರಾಮಸಭೆ ಅಧ್ಯಕ್ಷತೆಯನ್ನು ಗ್ರಾಪಂ ಉಪಾಧ್ಯಕ್ಷರಾದ ಗೌಸ್ ಸಾಬ್ ತಾಳಕೇರಿ ಅವರು ವಹಿಸಿದ್ದರು.
ಗ್ರಾಮಸಭೆ ನೋಡಲ್ ಅಧಿಕಾರಿಗಳಾದ ಸಾಮಾಜಿಕ ಅರಣ್ಯ ಇಲಾಖೆಯ ಡಿಆರ್ ಎಫ್ ಓ ಚಂದ್ರಶೇಖರ್ ಇದ್ದರು.
ಗ್ರಾಪಂ ಸದಸ್ಯರಾದ ಪೀರ್ ಮಹ್ಮದ್, ಭರತ್ ಕುಮಾರ್, ಶಾಂತಮ್ಮ, ಹೊನ್ನುರಬೀ, ಮೇರಾಜ್ , ಹುಸೇನಪ್ಪ ಬಂಡಿ, ನಿರ್ಮಲಾ, ಸಂಗಪ್ಪ ಸೇರಿ ಇತರೆ ಸದಸ್ಯರು, ಕಾರ್ಯದರ್ಶಿಗಳಾದ ಈಶಪ್ಪ, ಗ್ರಾಪಂ ಸಿಬ್ಬಂದಿಗಳು, ನರೇಗಾ ಸಿಬ್ಬಂದಿಗಳು ಸೇರಿ ಗ್ರಾಮಸ್ಥರು ಇದ್ದರು.