Registration of New Voters Opportunity-Development Officer Suresh Chalawadi Information
ಮತದಾರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ -2025
ಗಂಗಾವತಿ : ಮತದಾರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ -2025 ಅಭಿಯಾನ ಶುರುವಾಗಿದ್ದು, ಎಲ್ಲರೂ ಉಪಯೋಗ ಪಡೆದುಕೊಳ್ಳುವಂತೆ ವಡ್ಡರಹಟ್ಟಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಚಲವಾದಿ ಅವರು ಸಲಹೆ ನೀಡಿದರು.
ತಾಲೂಕಿನ ವಡ್ಡರಹಟ್ಟಿ ಗ್ರಾಮದ ಕೆಎಲ್ ಇ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳಿಗೆ ತಾಲೂಕು ಸ್ವೀಪ್ ಸಮಿತಿ ಹಾಗೂ ಗ್ರಾಮ ಪಂಚಾಯತ್ ಸ್ವೀಪ್ ಸಮಿತಿಯಿಂದ ಮಂಗಳವಾರ ಆಯೋಜಿಸಿದ್ದ ಮತದಾರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ -2025 ರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮತದಾನ ಪ್ರತಿಯೊಬ್ಬರ ಹಕ್ಕಾಗಿದ್ದು, ಯುವ ಸಮುದಾಯ ಎಲ್ಲರೂ ಮತ ಚಲಾವಣೆ ಹಕ್ಕು ಪಡೆದುಕೊಳ್ಳಬೇಕು. 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಬೇಕು ಎಂದರು.
2025ರ ಜನವರಿ 5 ವರೆಗೆ ಮತದಾನ ಪಟ್ಟಿ ಪರಿಷ್ಕರಣೆಗೆ ಅವಕಾಶ ಇದ್ದು, ಅರ್ಜಿ ಫಾರಂ ನಮೂನೆ-6ರಲ್ಲಿ ಹೊಸ ಮತಾದರರ ನೋಂದಣಿ, ನಮೂನೆ 6ಬಿ- ರಲ್ಲಿ ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಲು, ನಮೂನೆ-7 ರಲ್ಲಿ ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಲಿಂಕ್ ಮಾಡಲು, ನಮೂನೆ-6ರಲ್ಲಿ ವಿಳಾಸ ಬದಲಾವಣೆ, ಬದಲಿ ಮತದಾರರ ಗುರುತಿನ ಚೀಟಿ ನೀಡುವಿಕೆಗಾಗಿ, ಅಂಗವಿಕಲ ವ್ಯಕ್ತಿಯನ್ನು ಮತದಾರರ ಪಟ್ಟಿಯಲ್ಲಿ ಗುರುತಿಸಲು ಸ್ಥಳೀಯ ಬಿಎಲ್ ಓ ಅವರನ್ನು ಸಂಪರ್ಕಿಸುವಂತೆ ಮಾಹಿತಿ ನೀಡಿದರು.
ಯುವ ಜನಾಂಗದವರು ಪ್ರಬುದ್ಧ ನಾಗರಿಕರಾಗಿ ಚುನಾವಣೆ ಸಮಯದಲ್ಲಿ ಯಾವುದೇ ಆಸೆ, ಆಮೀಷಕ್ಕೆ ಬಲಿಯಾಗದೇ ಸೂಕ್ತ ಅಭ್ಯರ್ಥಿಗೆ ಮತ ಚಲಾಯಿಸಬೇಕು ಎಂದರು. ನಂತರ ವಿದ್ಯಾರ್ಥಿಗಳಿಗೆ ಚುನಾವಣೆ ಹಾಗೂ ಮತದಾನ ಕುರಿತು ಕ್ವೀಜ್ ಗಳನ್ನು ಕೇಳಿ ಅವರಲ್ಲಿ ಜಾಗೃತಿ ಮೂಡಿಸಿದರು.
ಕಾಲೇಜು ಪ್ರಾಚಾರ್ಯರಾದ ಎಸ್ .ಸಿ. ಪಾಟೀಲ್ ಅವರು, ಮತದಾನದ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಮತದಾರ ಪಟ್ಟಿಯ ಪರಿಷ್ಕರಣೆ ಕುರಿತು ಉಪನ್ಯಾಸಕರಾದ ಶ್ಯಾಮ್ ಸಿಂಗ್ ಅವರು ಉಪನ್ಯಾಸ ನೀಡಿ, ವೋಟರ್ ಹೆಲ್ಪ್ ಲೈನ್ ಬಗ್ಗೆ ಮಾಹಿತಿ ನೀಡಿದರು.
ತಾಲೂಕು ಪಂಚಾಯತ್ ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ ಅವರು ಮಾತನಾಡಿ, ವಿದ್ಯಾರ್ಥಿಗಳು ಮತದಾರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಲಾಭ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಗ್ರಾಮ ಆಡಳಿತ ಅಧಿಕಾರಿಗಳಾದ ಸೈನಾಜ್, ಗ್ರಾಪಂ ಸಿಬ್ಬಂದಿಗಳಾದ ರುದ್ರಸ್ವಾಮಿ, ಬಿಎಫ್ ಟಿ ಅಮರೇಶ, ಕೆಎಲ್ ಇ ಕಾಲೇಜು ಉಪನ್ಯಾಸಕರು, ಸಿಬ್ಬಂದಿ ವರ್ಗ ಇದ್ದರು.