Waqf property not our father’s, not Yatnal’s father’s: Jameer Rakhetu
ಕಾನ ಹೊಸಹಳ್ಳಿ: ವಕ್ಸ್ ಆಸ್ತಿ ಯತ್ನಾಳ ಅಪ್ಪಂದೂ ಅಲ್ಲ-ನಮ್ಮಪ್ಪಂದೂ ಅಲ್ಲ. ಅದು ದಾನಿಗಳು ನೀಡಿದ್ದು ಎಂದು ವಕ್ಸ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝಡ್.ಜಮೀರ್ ಅಹ್ಮದ ಖಾನ್ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ತಿರುಗೇಟು ನೀಡಿದರು. ತಾಲೂಕಿನ ಕುಮತಿ ಗ್ರಾಮದಲ್ಲಿ ಮಾಧ್ಯಮಗಳ ಸಂದರ್ಶನದಲ್ಲಿ ಮಾತನಾಡಿದ ಅವರು ವಕ್ಫ್ ಆಸ್ತಿ ಸಮುದಾಯದ ಒಳಿತಿಗಾಗಿ ದಾನಿಗಳು ಕೊಟ್ಟಿರುವ ದಾನ ಆಗಿದೆ. ಕಬೀರ್ ಸ್ಥಾನ ಹೊರತು ಪಡಿಸಿದರೆ ಸರ್ಕಾರದಿಂದ ನಮಗೆ ಬೇರೆ ಯಾವುದೇ ಜಾಗ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ 1 ಲಕ್ಷ 12 ಸಾವಿರ ಎಕರೆ ವಕ್ಪ್ ಬೋರ್ಡ್ ಆಸ್ತಿ ಇದೆ. 84 ಸಾವಿರಕ್ಕೂ ಹೆಚ್ಚು ಎಕರೆ ಆಸ್ತಿ ವಿಚಾರದಲ್ಲಿ ತಾಂತ್ರಿಕ ಸಮಸ್ಯೆ ಇದೆ. ವಕ್ಫ್ ಅದಾಲತ್ ಮಾಡಿ ಇದನ್ನು ಸರಿಪಡಿಸ್ತಿದ್ದೇವೆ. ಈ ವಿಚಾರದಲ್ಲಿ ಸಿ.ಟಿ. ರವಿ ಏನೆಲ್ಲಾ ಮಾತನಾಡುತ್ತಾರೆ. ಅವರು ಮೊದಲು ಮುಜರಾಯಿ ಇಲಾಖೆ ಕಡೆ ಗಮನ ಹರಿಸಲಿ. ಇಲಾಖೆಯ 680 ಎಕರೆ ಜಾಗವೂ ಒತ್ತುವರಿಯಾಗಿದೆ. ಅದನ್ನು ಸರಿಪಡಿಸಲು ಹೇಳಿ ಎಂದು ಜಮೀರ್ ತಾಕೀತು ಮಾಡಿದರು.
*ದಸರಾ ನಂತರ ಸರಕಾರದ ಪಥ ಬದಲಾವಣೆ ಎಂದ ವಿಜಯೇಂದ್ರ ಹೇಳಿಕೆ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಜಮೀರ್, ಏನೇನೂ ಆಗಲ್ಲ. ಈ ಟಗರು ಅಲ್ಲಾಡೋದಿಲ್ಲ. ಆಚೆ, ಈಚೆ ಅಲ್ಲಾಡೋದಿಲ್ಲ. ಏನಿದ್ರೂ ನೇರಾನೇರ. ಆದರೆ ವಿಜಯೇಂದ್ರ ಮಾತ್ರ ಹಗಲುಗನಸು ಕಾಣುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಜನಪ್ರಿಯತೆ ಸಹಿಸಿಕೊಳ್ಳೋಕೆ ಅವರಿಗೆ ಆಗುತ್ತಿಲ್ಲ. ದೇವರಾಜ ಅರಸು ಆದ ಮೇಲೆ ಎರಡನೇ ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ ಎಂದು ಜಮೀರ್ ಹೇಳಿದರು.