Villagers plea in guarantee dialogue: practical bus service
ಕೊಪ್ಪಳ, ಅಕ್ಟೋಬರ್ 2 ಕರ್ನಾಟಕ ವಾರ್ತೆ): ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರಾದ ಎಸ್ ಆರ್ ಮೆಹರೋಜ್ ಖಾನ್ ಅವರು ಕೊಪ್ಪಳ ಜಿಲ್ಲೆಯಲ್ಲಿ ಅಕ್ಟೋಬರ್ 1ರಂದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೊಂದಿಗೆ ನಡೆಸಿದ ಸಂವಾದವು ಫಲಪ್ರದವಾಗಿದೆ.
ನಮ್ಮೂರಿಗೆ ಬಸ್ಸುಗಳಿಲ್ಲದೇ ಇನ್ನೀತರ ಕಡೆ ಓಡಾಡಲು ಶಾಲಾ ವಿದ್ಯಾರ್ಥಿಗಳಿಗೆ, ರೈತರಿಗೆ, ಮಹಿಳೆಯರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಗಂಗಾವತಿ ತಾಲೂಕಿನ ಹಳೆಅಯೋಧ್ಯಾ ಗ್ರಾಮಸ್ಥರು ಸಂವಾದದಲ್ಲಿ ರಾಜ್ಯ ಉಪಾಧ್ಯಕ್ಷರಾದ ಎಸ್ ಆರ್ ಮೆಹರೋಜ್ ಖಾನ್ ಅವರ ಗಮನ ಸೆಳೆದಿದ್ದರು. ಆ ವೇಳೆ ಉಪಾಧ್ಯಕ್ಷರು, ಈ ಬಗ್ಗೆ ಕೂಡಲೇ ಸೂಕ್ತ ಕ್ರಮವಹಿಸಬೇಕು ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರಿಂದಾಗಿ ಅಕ್ಟೋಬರ್ 2ರಂದು ಹಳೆಅಯೋಧ್ಯಾ ಗ್ರಾಮಕ್ಕೆ ಬಸ್ಸನ್ನು ಓಡಿಸಿ ಸಾರಿಗೆ ಇಲಾಖೆಯು ಪ್ರಾಯೋಗಿಕ ಪರೀಕ್ಷೆ ನಡೆಸಿತು.
ರಸ್ತೆ ಅಗಲೀಕರಣ ನಂತರ ಪ್ರತಿ ದಿನ ಓಡಾಟ: ಹಳೆಅಯೋಧ್ಯೆ ಗ್ರಾಮಕ್ಕೆ ಬಸ್ ಸೇವೆ ನೀಡಲು ಸಾರಿಗೆ ಇಲಾಖೆಯ ಸಿದ್ಧವಿದೆ. ರಸ್ತೆ ಅಗಲೀಕರಣವಾದಲ್ಲಿ, ಸೇತುವೆ ನಿರ್ಮಾಣವಾದಲ್ಲಿ ಸುಗಮ ಸಂಚಾರ ಸಾಧ್ಯವಾಗುತ್ತದೆ ಎಂದು ಪ್ರಾಯೋಗಿಕ ಪರೀಕ್ಷೆ ವೇಳೆ ಗೊತ್ತಾಗಿರುವ ಬಗ್ಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಸುಗಮ ಸಂಚಾರಕ್ಕೆ ಇರುವ ಅಡೆತಡೆಗಳು ಸರಿಯಾದ ಬಳಿಕ ಗ್ರಾಮಕ್ಕೆ ಪ್ರತಿ ದಿನ ಬಸ್ ಓಡಿಸಲಾಗುತ್ತದೆ ಎಂದು ಉಪಾಧ್ಯಕ್ಷರಾದ ಮೆಹರೋಜ್ ಖಾನ್ ಅವರು ಗ್ರಾಮಸ್ಥರಿಗೆ ತಿಳಿಸಿದರು.
ಈ ವೇಳೆ ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ ಹಾಗೂ ಇನ್ನೀತರ ಇಲಾಖೆಗಳ ಅಧಿಕಾರಿಗಳು ಮತ್ತು ಗ್ರಾಮಸ್ಥರು ಇದ್ದರು.