Vishwakarma Samaj is the real first engineers: Health Minister Dinesh Gundurao
ಬೆಂಗಳೂರು; ವಿಶ್ವಕರ್ಮ ಸಮಾಜ ನಿಜವಾದ ಮೊದಲ ಇಂಜಿನಿಯರ್ ಗಳು. ಅವರಲ್ಲಿರುವ ಕುಶಲತೆ ಅಪಾರ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನದಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ವಿಶ್ವಕರ್ಮ ನಾಡೋಜ ಡಾ. ಬಿ.ಎಂ. ಉಮೇಶ್ ಕುಮಾರ್ ನೇತೃತ್ವದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ವಿರಾಟ್ ವಿಶ್ವಕರ್ಮ ಮಹೋತ್ಸವವನ್ನು ಉದ್ಘಾಟಿಸಿ ಸಾಧಕರಿಗೆ ವಿಶ್ವಕರ್ಮ ಶ್ರೀ, ವಿಶ್ವಕರ್ಮ ಸೇವಾ ರತ್ನ ಸೇರಿ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು, ವಿಶ್ವಕರ್ಮ ಸಮುದಾಯ ಭವ್ಯವಾದ ಶ್ರಮ ಸಂಸ್ಕೃತಿಯನ್ನು ಬೆಳೆಸಿಕೊಂಡು, ಉಳಿಸಿಕೊಂಡು ಬಂದಿದೆ. ನಿಮ್ಮಲ್ಲಿ ಅಗಾಧ ಪ್ರತಿಭೆ ಇದ್ದು, ಮುಂದಿನ ಪೀಳಿಗೆಗೆಯನ್ನು ಇನ್ನಷ್ಟು ಸಶಕ್ತಗೊಳಿಸಬೇಕಾಗಿದೆ. ಸಮುದಾಯದ ಸೃಜನ ಶೀಲತೆಯನ್ನು ಪ್ರೋತ್ಸಾಹಿಸಿ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದರು.
ಯಾವುದೇ ಸಮುದಾಯಕ್ಕೆ ಶಿಕ್ಷಣ, ಆರೋಗ್ಯ ಮತ್ತು ಮಾಹಿತಿ ಅತ್ಯಂತ ಅಗತ್ಯವಾಗಿದೆ. ಸಮಾಜದಲ್ಲಿ ಎಲ್ಲರಿಗೂ ಸಮಾನವಾದ ಅವಕಾಶವಿದೆ. ಪ್ರತಿಯೊಬ್ಬರೂ ಬೆಳೆಯಲು ಅವಕಾಶವಿದೆ. ಎಲ್ಲರೂ ಸಶಕ್ತರಾದರೆ ದೇಶ ಸೂಪರ್ ಪವರ್ ಆಗಲಿದೆ. ವಿಶ್ವಕರ್ಮ ಸಮಾಜಕ್ಕೆ ಸರ್ಕಾರದ ಬೆಂಬಲ ಇದ್ದೇ ಇರುತ್ತದೆ ಎಂದರು.
ಚಿತ್ರನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಮಾತನಾಡಿ, ಪ್ರತಿಯೊಬ್ಬರೂ ಕುಲದ ನೆಲೆಯನ್ನು ಗೌರವಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಮಾಡಬೇಕು. ಸಮುದಾಯದ ನೊಂದವರಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರೂಪಿಸಿರುವ ವಿಶ್ವಕರ್ಮ ಯೋಜನೆ ಅತ್ಯುತ್ತಮವಾಗಿದ್ದು, 13 ಸಾವಿರ ಕೋಟಿ ರೂಪಾಯಿ ಮೀಸಲಿರಿಸಿದ್ದಾರೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ್ ಕಂಬಾರ ಅವರನ್ನು ಸಮುದಾಯದಿಂದ ಗೌರವಿಸಲಾಯಿತು. ಆಡಳಿತ ಕ್ಷೇತ್ರದಲ್ಲಿ ಭಾರತೀಯ ಸಮಾಚಾರ ಸೇವೆ ಅಧಿಕಾರಿ ಸುಹಾಸ್ ರಾಮಚಂದ್ರಚಾರ್, ಕೆ.ಎ.ಎಸ್ ಅಧಿಕಾರಿ ಆರ್. ಉಮಾದೇವಿ, ರಾಜಕೀಯದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾ ಪೌರ ರಾಮಪ್ಪ ಬಡಿಗೇರ್, ಚಲನಚಿತ್ರದಲ್ಲಿ ಚಲನಚಿತ್ರ ಕಲಾವಿದೆ ವೀಣಾ ಸುಂದರ್, ಸಮುದಾಯ ಸೇವಾ ಕ್ಷೇತ್ರದಲ್ಲಿ ಬಿ.ಎನ್.ವಿ. ರಾಜಶೇಖರ್ ಅವರಿಗೆ ವಿಶ್ವಕರ್ಮ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಂಗೀತ ಕ್ಷೇತ್ರದಲ್ಲಿ ರಾಜೇಶ್ ಕೃಷ್ಣನ್, ಶಾಸ್ತ್ರೀಯ ನೃತ್ಯಪಟು ಡಾ. ಶ್ರೀಧರ್, ಆಡಳಿತ ಕ್ಷೇತ್ರದಲ್ಲಿ ಡಿಜಿಪಿ ನಂಜುಂಡಸ್ವಾಮಿ, ಕಲಾವಿದ ಡಿ. ಮಹೇಂದ್ರ, ಬರಹಗಾರ ನಾಡೋಜ ಎಸ್. ಷಡಾಕ್ಷರಿ, ಯೋಗ ಗುರು ಆರಾಧ್ಯ, ಶಿಕ್ಷಣ ಕ್ಷೇತ್ರದಲ್ಲಿ ಬಸವನಗುಡಿಯ ನ್ಯಾಷನಲ್ ಕಾಲೇಜ್, ವಾಸವಿ ಆಸ್ಪತ್ರೆ, ಪಂಚಶಿಲ್ಪಿಗಳಾದ ರಾಜಗೋಪಾಲ ಆಚಾರ್ಯ, ನಂಜುಂಡಸ್ವಾಮಿ, ವೆಂಕಟರಮಣಾಚಾರಿ, ಎಂ. ಶಂಕರ್ ಮೂರ್ತಿ, ಎನ್ ಶಂಕರಾಚಾರ್ಯ ಹಾಗೂ ಗೌರವ ಪ್ರಶಸ್ತಿಗಳನ್ನು ಪಿ.ಲಿಂಗಾಚಾರ್, ಬಾಲಸುಬ್ರಹ್ಮಣ್ಯ ಚಾರಿ, ಗಿರಿಧರ್ ಲಾಲ್ ಜಹಂಗೀಡ್, ಮಾನಪ್ಪ ಪತ್ತಾರ, ಕೆ.ಪಿ ಸ್ವಾಮಿ, ಉಮಾಶಂಕರಾಚಾರ್ಯ ಅವರಿಗೆ ವಿಶ್ವಕರ್ಮ ಸೇವಾ ರತ್ನ ಪ್ರಶಸ್ತಿನೀಡಿ ಗೌರವಿಸಲಾಯಿತು.
ಸ್ಮಾರಕ ಪ್ರಶಸ್ತಿ ವಲಯದಲ್ಲಿ ಖಂಜಿರ ವಿದ್ವಾನ್ ಎಚ್.ಪಿ. ರಾಮಾಚಾರ್, ಖ್ಯಾತ ಸಂಗೀತ ಹಾಗೂ ಮೃದಂಗ ವಿದ್ವಾಂಸರು ಆನೂರು ಅನಂತ ಕೃಷ್ಣ ಶರ್ಮ, ತುಮಕೂರಿನ ಶಿಲ್ಪಿ ದಿ. ಕೆ.ಎಚ್. ರಾಜಶೇಖರಚಾರ್ ಪ್ರಶಸ್ತಿಗೆ ಸ್ವರ್ಣ ಶಿಲ್ಪಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಾಜಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಮಾಜಿ ಶಾಸಕಿ ಸೌಮ್ಯ ರೆಡ್ಡಿ, ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಸೋಮಶೇಖರ್, ಪ್ರತಿಷ್ಠಾನದ ಅಧ್ಯಕ್ಷ ಪ್ರಭಾಕರ್, ಮುಖಂಡರಾದ ವೇದಮೂರ್ತಿ, ಶಿಲ್ಪಿ ಹೊನ್ನಪ್ಪಾಚಾರ್, ಜಿ.ಶಂಕರ್, ಚಂದ್ರಶೇಖರ ಚಾರಿ , ಬಿ. ರುದ್ರಾಚಾರ್, ಎಸ್. ನಂಜುಂಡ ಪ್ರಸಾದ್, ಡಾ. ಆರ್. ಮಧುಸೂದನ್, ಬಾಲಾಜಿ ಹಾಗೂ ಆರ್. ಪ್ರಸನ್ನ ಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.