Conducted by the Minister for the Tourism Day programme

ದೇಶದ ಆರ್ಥಿಕತೆಗೆ ಪ್ರವಾಸೋದ್ಯಮದ ಕೊಡುಗೆ ಅಪಾರ: ಎನ್.ಎಸ್.ಭೋಸರಾಜು
ರಾಯಚೂರು,ಸೆ.೨8:- ಪ್ರವಾಸೋದ್ಯಮವು ದೇಶದ ಪ್ರಗತಿಗೆ ಮತ್ತು ಆರ್ಥಿಕತೆಗೆ ಬಹಳ ದೊಡ್ಡ ಕೊಡುಗೆಯನ್ನು ನೀಡುವುದರೊಂದಿಗೆ, ಪ್ರವಾಸಿಗರ ಮತ್ತು ಸ್ಥಳೀಯರ ನಡುವೆ ಸ್ಥಳೀಯ ಕಲೆ ಮತ್ತು ಸಂಸ್ಕೃತಿ ಪೋಷಿಸುತ್ತದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಹೇಳಿದರು.

ಅವರು ಸೆ.೨೭ರ ಶುಕ್ರವಾರದಂದು ನಗರದ ಬಸ್ ನಿಲ್ದಾಣದ ಹತ್ತಿರವಿರುವ ಐತಿಹಾಸಿಕ ಕೋಟೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ, ಶಿಕ್ಷಣ ಇಲಾಖೆ, ಪುರಾತತ್ವ ಸಂಗ್ರಹಾಲಯಗಳ& ಪರಂಪರೆ ಇಲಾಖೆ ಹಾಗೂ ನಗರಸಭೆ ರಾಯಚೂರು ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ-೨೦೨೪ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಇನ್ನಷ್ಟು ಆಕರ್ಷಣೀಯ ಮತ್ತು ಮೂಲ ಸೌಲಭ್ಯ ಕಲ್ಪಿಸುವುದರ ಜೊತೆಗೆ ಉತ್ತಮ ಪರಿಸರ ಹಾಗೂ ಸ್ವಚ್ಛತೆ ಬಗ್ಗೆ ವಿಶೇಷ ಆದ್ಯತೆ ನೀಡುವುದು ಅತ್ಯಗತ್ಯವಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಪರೋಕ್ಷವಾಗಿ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಇದರಿಂದ ಮಧ್ಯಮ ವರ್ಗದ ಆದಾಯವು ಹೆಚ್ಚಲಿದೆ ಎಂದರು.
ರಾಯಚೂರಿನ ಮಲಿಯಬಾದ್ ಸೇರಿದಂತೆ ಕಲ್ಯಾಣ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳ ತಾಣಗಳ ಅಭಿವೃದ್ಧಿಗೆ ಇಲ್ಲಿಯ ಅಧಿಕಾರಿಗಳು ಶ್ರಮಿಸಬೇಕು. ಜಿಲ್ಲೆಯ ಪ್ರವಾಸಿ ತಾಣಗಳ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಮಾಹಿತಿ ನೀಡಬೇಕು. ರಾಜ್ಯ ಸರ್ಕಾರವು ಪ್ರವಾಸಿ ತಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಈ ಭಾಗದ ಪ್ರವಾಸಿ ತಾಣಗಳ ಕುರಿತು ಪ್ರಾಧಿಕಾರ ರಚನೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಅದಕ್ಕೆ ಬೇಕಾಗುವ ಎಲ್ಲಾ ನೆರವು ನೀಡುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ರಾಯಚೂರು ನಗರಸಭೆಯ ಅಧ್ಯಕ್ಷರಾದ ನರಸಮ್ಮ ನರಸಿಂಹಲು, ರಾಯಚೂರು ನಗರಸಭೆಯ ಉಪಾಧ್ಯಕ್ಷರಾದ ಜಹಾನಿಯ ಸಾಜೀದ ಸಮೀರ್, ನಗರಸಭೆಯ ಸದಸ್ಯರಾದ ಜಯಣ್ಣ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ತುಕರಾಮ್ ಪಾಂಡ್ವೆ, ಅಪರ ಜಿಲ್ಲಾಧಿಕಾರಿ ಶಿವಾನಂದ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಂದ್ರ ಜಲ್ದಾರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವೆಂಕಟೇಶ, ಪ್ರವಾಸೋದ್ಯಮ ಇಲಾಖೆಯ ಸಿಬ್ಬಂದಿಗಳಾದ ಕವಿತಾ, ಹನಮಂತು, ಸಂದೀಪ್ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಇದ್ದರು.