Application for Baba Saheb Ambedkar State Youth Award
ಕೊಪ್ಪಳ: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರಲ್ಲಿ ರಾಜ್ಯ ಯುವ ಪುರಸ್ಕಾರವನ್ನು ರಾಜ್ಯದ ೩೧ ಜಿಲ್ಲೆಯ ತಲಾ ಒಬ್ಬರು ಹಾಗೂ ನಾಲ್ಕು ವಿಭಾಗದಲ್ಲಿ ನಾಲ್ಕು ಸಾಂಘಿಕ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷರು ಹಾಗೂ ಕಲಬುರಗಿ ವಿಭಾಗೀಯ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಅವರ ನೇತೃತ್ವದಲ್ಲಿ ಸಂಘಟನೆ ಯುವಜನರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಡಮಾಡುತ್ತಿದ್ದ ರಾಜ್ಯ ಯುವ ಪ್ರಶಸ್ತಿ ನಿಲ್ಲಿಸಿರುವದರಿಂದ ಯುವ ಹೋರಾಟಗಾರರು, ಸಂಘಟಕರು, ಕಲಾವಿದರನ್ನು ಗುರುತಿಸಲು ಸ್ವಯಂ ಪ್ರೇರಣೆಯಿಂದ ಸಂಘಟನೆ ಕೆಲಸ ಮಾಡುತ್ತಿದೆ. ಬರುವ ಆಗಸ್ಟ್ನಲ್ಲಿ ಬೃಹತ್ ಸಮಾರಂಭದಲ್ಲಿ ಪ್ರಶಸ್ತಿ ನೀಡುವದರ ಜೊತೆಗೆ ಪ್ರಶಸ್ತಿ ಪುರಸ್ಕೃತರ ಪರಿಚಯ ಹೊತ್ತಿಗೆ ಪ್ರಕಟಿಸಲಾಗುವದು. ರಾಜ್ಯದ ಅನೇಕ ದಲಿತಪರ ಮತ್ತು ಮಹಿಳಾಪರ ಹೋರಾಟಗಾರರು ಚಿಂತಕರು ಸಮಾರಂಭದಲ್ಲಿ ಪಾಲ್ಗೊಳ್ಳುವರು. ಸಚಿವರುಗಳು ಸಹ ಸಮಾರಂಭದ ಭಾಗವಾಗುವರು.
ಅದರ ಭಾಗವಾಗಿ ಈಗಾಗಲೇ ಬಿಜಾಪುರ, ದಕ್ಷಿಣ ಕನ್ನಡ ಮತ್ತು ಬೆಂಗಳೂರು ಘಟಕಗಳು ವಿವಿದ ಹೆಸರಲ್ಲಿ ಪ್ರಶಸ್ತಿ ನೀಡುತ್ತಿದ್ದು ಕೊಪ್ಪಳ ಘಟಕ ಮಹಾ ಮಾನವತಾವಾದಿ, ಮಹಿಳೆ ಮತ್ತು ಶೋಷಿತರ ಸೂರ್ಯ, ದಲಿತೋದ್ಧಾರಕ ಡಾ. ಬಿ. ಆರ್. ಅಂಬೇಡ್ಕರ್ ಅವರ ಹೆಸರಲ್ಲಿ ಪ್ರಶಸ್ತಿ ನೀಡುತ್ತಿದೆ, “ಬಾಬಾ ಸಾಹೇಬ್ ಅಂಬೇಡ್ಕರ್ ರಾಜ್ಯ ಯುವ ಪ್ರಶಸ್ತಿ” ಯಲ್ಲಿ ಶೇ. ೩೩ ರಷ್ಟು ಮಹಿಳೆಯರನ್ನು ಗುರುತಿಸಲಾಗುವದು. ಪ್ರತಿ ಜಿಲ್ಲೆಯಿಂದ ಪ್ರಶಸ್ತಿಗೆ ಒಂದು ಹೆಸರನ್ನು ಅಲ್ಲಿನ ಜಿಲ್ಲಾ ಯುವ ಸಂಘಗಳ ಒಕ್ಕೂಟದ ಮೂಲಕ ಕಳಿಸಿಕೊಡಬೇಕು ನೇರವಾಗಿ ಬರುವ ಯಾವುದೇ ಹೆಸರನ್ನು ಪರಿಗಣಿಸಲಾಗುವದಿಲ್ಲ ಎಂದು ಒಕ್ಕೂಟದ ಪ್ರಕಟಣೆ ತಿಳಿಸಿದೆ.