Breaking News

ಕರಸ್ಥಲದ ಇಷ್ಟಲಿಂಗ ಘಟಸರ್ಪ ಹೇಗಾಗುವುದು?

How will Ishtalinga Ghatasarpa of Karasthala become?

ಜಾಹೀರಾತು
Screenshot 2024 07 24 13 14 55 49 680d03679600f7af0b4c700c6b270fe7 238x300

ನುಡಿಯಲ್ಲಿ ಎಚ್ಚತ್ತು ನಡೆಯಲ್ಲಿ ತಪ್ಪಿದಡೆ
ಹಿಡಿದಿರ್ದ ಲಿಂಗವು ಘಟಸರ್ಪನಯ್ಯಾ.
ನುಡಿಯಲೂ ಬಾರದು, ನಡೆಯಲೂ ಬಾರದು,
ಲಿಂಗದೇವನೆ ದಿಬ್ಯವೊ ಅಯ್ಯಾ.
ಬಡವನ ಕೋಪವು ದವಡಿಗೆ ಮೃತ್ಯುವಾದಂತೆ
ಕಡೆಗೆ ದಾಂಟದು ಕಾಣಾ, ಲಿಂಗದೇವಾ.
-ಗುರು ಬಸವಣ್ಣನವರು.

ಗುರು ಬಸವಣ್ಣನವರು ಮಾತೃ ಹೃದಯಿಯಾಗಿ ಅನೇಕವಚನ ಉಪದೇಶಗಳನ್ನು ನಮಗೆ ನೀಡಿದ್ದಾರೆ. ಕೇವಲ ವಚನೋಪದೇಶ ಮಾತ್ರವಲ್ಲ ವರ್ತನೋಪದೇಶ ಕೂಡ ನೀಡಿದ್ದಾರೆ.

ಮೇಲಿನ ವಚನ ಇಷ್ಟಲಿಂಗವು ಘಟ ಸರ್ಪವಾಗಿ ಕಾಡಿದಾಗ ಮಾತ್ರ ಅರ್ಥಮಾಡಿಕೊಳ್ಳಬೇಕೆಂದೇನಿಲ್ಲ ಇತಿಹಾಸದಲ್ಲಿ ನಡೆದ ಅನೇಕ ಉದಾಹರಣೆಗಳಿಂದಲೂ ಅರ್ಥ ಮಾಡಿಕೊಳ್ಳಬಹುದು.

ಆದರೆ ದುರ್ದೈವದ ಸಂಗತಿಯೆಂದರೆ ಕೆಲವರಿಗೆ ತಮ್ಮ ಅಂಗೈಯಲ್ಲಿರುವ ಲಿ‌ಂಗ ಘಟಸರ್ಪವಾದಾಗ ಮಾತ್ರ ಇಂತಹ ವಚನಗಳು ಅರ್ಥವಾಗುತ್ತವೆ.
ಸಿಕ್ಕಿಬಿದ್ದ ಕಳ್ಳ, ತಪ್ಪಿಸಿಕೊಂಡುಹೋದ ಕಳ್ಳ ಎಂದು ಎರಡು ಬಗೆಯ ಕಳ್ಳರಿರುತ್ತಾರೆ. ಹಿಡಿಯಲ್ಪಟ್ಟ ಕಳ್ಳನಿಗೆಮಾತ್ರ ಶಿಕ್ಷೆ. ತಪ್ಪಿಸಿಕೊಂಡು ಹೋದವ ಮತ್ತೆ ಸಿಕ್ಕಿ ಬೀಳುವವರೆಗೆ ಶಿಕ್ಷೆಯಿಲ್ಲ.

ಲಿಂಗ ಲಾಂಛನಧಾರಿಯಲ್ಲದ ವ್ಯಕ್ತಿ ತಪ್ಪು ಮಾಡಿದಾಗ ವ್ಯಭಿಚಾರಿಯಾದಾಗ, ಅವನಿಗೆ ಅಷ್ಟೊಂದು ತಲೆದಂಡವಾಗುವುದಿಲ್ಲ. ಆದರೆ ಲಿಂಗಲಾಂಛನಧಾರಿಯಾಗಿ, ಜನ ಮೆಚ್ಚುವಂತೆ ಮಾತನಾಡಿ ವಚನಗಳನ್ನು ಗಿಳಿಯಂತೆ ಉಲಿದು ಮೆಚ್ಚುಗೆ ಪಡೆದು, ನನ್ನನ್ನು ಅನೇಕರು ಒಳ್ಳೆಯನೆಂಬ ಹಣೆಪಟ್ಟಿ ಕೊಟ್ಟಿದ್ದಾರೆ ನಾನು ಈಗ ಮನಸ್ಸಿಗೆ ಬಂದಂತೆ ವ್ಯಭಿಚಾರ, ಪರಸತಿಯ ರತಿಗೆ ಮನವೆಳಸಿದರೆ, ಪರಧನವನ್ನು ಕಬಳಿಸಿದರೆ ಯಾರಿಗೂ ಗೊತ್ತಾಗಲ್ಲ, ಗೊತ್ತಾದರೂ ನುಡಿಯಲ್ಲಿ ಎಚ್ಚೆತ್ತಿರುವುದರಿಂದ ಯಾರೂ ನಂಬಲ್ಲ ಎಂದು ನಡೆಯಲ್ಲಿ ತಪ್ಪಿದಾಗ ಹಿಡಿದಿರ್ಪ ಲಿಂಗ ಘಟಸರ್ಪವಾಗುತ್ತದೆ.
ಲಿಂಗಲಾಂಛನಧಾರಿಯಾಗಿ ಅದರಲ್ಲೂ ಒಂದು ಸಮಾಜ ಒಂದು ಸಂಘಟನೆಯನ್ನು ಪ್ರತಿನಿಧಿಸುವ ವ್ಯಕ್ತಿ ತಪ್ಪು ಮಾಡಿದಾಗ ಖಂಡಿತ ಹಿಡಿಯಲ್ಪಡುವ ಕಳ್ಳನಾಗುತ್ತಾನೆ. ಇಂಥವರ ತಲೆದಂಡ ಖಂಡಿತವಾಗಿಯೂ ಆಗುತ್ತದೆ ಅನೇಕ ಬಾರಿ ಆಗಿವೆ!

ಸಮಾಜ, ಧರ್ಮ, ಸಂಘಟನೆ ಧರ್ಮಪೀಠಗಳಲ್ಲಿ ಸಿಕ್ಕಿಬೀಳದ, ಸಾಕ್ಷಾಧಾರಗಳ ಕೊರತೆ ಇರುವ ಕಳ್ಳರು ಸಾಕಷ್ಟಿದ್ದಾರೆ. ಅವರು ಸಿಕ್ಕಿಬೀಳುವ ಮುನ್ನ, ಹಿಡಿಯಲ್ಪಡುವ ಮುನ್ನ ಎಚ್ಚೆತ್ತುಕೊಂಡರೆ, ನಡೆನುಡಿಯಲ್ಲಿ ಸಮನ್ವಯತೆ ಸಾಧಿಸಿಕೊಂಡರೆ
ಸರ್ಪವಾಗಿ ಕಾಡಿದ ಅಪಕೀರ್ತಿ ಘಟಸರ್ಪವಾಗುವುದು ತಪ್ಪುತ್ತದೆ. ತಲೆದಂಡವಾಗುವುದು ತಪ್ಪುತ್ತದೆ, ಅಲ್ಲಾಡುತ್ತಿರುವ ಕಿರೀಟ ಮುಕುಟಗಳು ಸ್ಥಿರವಾಗಿ ನಿಲ್ಲುತ್ತವೆ.
೮೫೦ ವರ್ಷಗಳ ಅವಧಿಯಲ್ಲಿ ಲಿಂಗಾಯತ ಧರ್ಮದ ಇಂದಿನ ಸ್ಥಿತಿಗೆ, ಕಾಲಕಾಲಕ್ಕೆ ಕೆಲವು ಧರ್ಮ ಬೋಧಕರ, ಧರ್ಮ ಸಂಘಟನೆಯ ಕೆಲವು ಮುಖಂಡರ ನುಡಿ ಮತ್ತು ನಡೆಯಲ್ಲಿರುವ ಅಗಾಧವಾದ ವ್ಯತ್ಯಾಸವೇ ಕಾರಣ.

ಅದಕ್ಕಾಗಿ ಧರ್ಮವಂತನಲ್ಲದ ವ್ಯಕ್ತಿಗಿಂತ ಧರ್ಮವಂತನೆನಿಸಿಕೊಳ್ಳುವ ವ್ಯಕ್ತಿ ಸದಾ ಜಾಗ್ರತನಾಗಿರುವುದು ಅವಷ್ಯಕವಾಗಿದೆ ಏಕೆಂದರೆ ಘಟಸರ್ಪವಾಗಿ ಬದಲಾಗುವ ಇಷ್ಟಲಿಂಗ ಸದಾ ಎದೆಯಮೇಲಿರುತ್ತದೆ.
~ಸಚ್ಚಿದಾನಂದ ಪ್ರಭು ಚಟ್ನಳ್ಳಿ

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.