371(j) is our constitutional right – awareness and struggle for adequate implementation is imperative

ಗಂಗಾವತಿ: ಬಲವಾದ ಐತಿಹಾಸಿಕ ಕಾರಣ ಹಾಗೂ ಸುದೀರ್ಘ ಹೋರಾಟದ ನಂತರ ಸಂವಿಧಾನಬದ್ಧವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ದೊರಕಿದ ೩೭೧(ಜೆ) ವಿಶೇಷ ಸೌಲಭ್ಯವು ಪಟ್ಟಭದ್ರ ಹಿತಾಸಕ್ತಿಗಳ ಹುನ್ನಾರ, ಜನಜಾಗೃತಿ ಹಾಗೂ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಸಮರ್ಪಕ ಅನುಷ್ಠಾನ ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಜೊತೆಗೆ ತೀವ್ರ ಹೋರಾಟ ಮಾಡಲಾಗುವುದು ಎಂದು ೩೭೧(ಜೆ) ಅನುಷ್ಠಾನ ಸಮಿತಿಯ ಸಂಚಾಲಕರಾದ ಧನರಾಜ್ ಈ. ಹೇಳಿದರು.
ಅವರು ಇಂದು ಗಂಗಾವತಿ ನಗರದ ಐ.ಎಂ.ಎ ಹಾಲ್‌ನಲ್ಲಿ ೩೭೧(ಜೆ) ಸಮರ್ಪಕ ಅನುಷ್ಠಾನಕ್ಕಾಗಿ ಮುಂದಿನ ಹೋರಾಟಕ್ಕಾಗಿ ಎಲ್ಲಾ ಸಮುದಾಯ, ಸಂಘಟನೆಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ, “ಕಳೆದ ಹತ್ತು ವರ್ಷಗಳಲ್ಲಿ ನಮಗೆ ವರದಾನವಾಗಬೇಕಿದ್ದ ೩೭೧(ಜೆ) ಯ ಸಮಗ್ರ ಅನುಷ್ಠಾನದ ಕೊರತೆಯಿಂದ ಹಿನ್ನೆಡೆ ಅನುಭವಿಸುತ್ತಿರುವಾಗ ಬೆಂಗಳೂರಿನ ಹಸಿರು ಪ್ರತಿಷ್ಠಾನ ಸಂಸ್ಥೆ ಸೇರಿದಂತೆ ಹಲವರು ಈ ಮೀಸಲಾತಿಯನ್ನು ರದ್ದುಗೊಳಿಸಬೇಕು ಎನ್ನುವ ಕೂಗನ್ನು ಎತ್ತುತ್ತಿರುವುದು ಖಂಡನೀಯ. ಇಂತಹ ಸಂವಿಧಾನ ವಿರೋಧಿ ಮನಸತ್ವಗಳನ್ನು ಮಟ್ಟ ಹಾಕುವ ಸಮಯ ಬಂದಿದ್ದು, ಈ ನಿಟ್ಟಿನಲ್ಲಿ ನಮ್ಮ ಸಮಿತಿಯಿಂದ ಈಗಾಗಲೇ ಬೀದರ್, ಗುಲ್ಬರ್ಗಾ, ರಾಯಚೂರು, ಕಾರಟಗಿ ಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ. ಅದರ ಮುಂದುವರಿದ ಭಾಗವಾಗಿ ಗಂಗಾವತಿಯಲ್ಲಿ ಜಾಗೃತಿ ಮತ್ತು ಹೋರಾಟಕ್ಕೆ ಎಲ್ಲರ ಸಹಕಾರವಿರಲಿ” ಎಂದು ಕೋರಿದರು.
ಮಾಜಿ ಸಂಸದರಾದ ಶಿವರಾಮೇಗೌಡರು, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿಯವರು ಮಾತನಾಡಿ, ಮುಂದಿನ ಹೋರಾಟಕ್ಕಾಗಿ ಸಂಪೂರ್ಣ ಬೆಂಬಲ ಘೋಷಿಸಿದರು. ಕಾಂಗ್ರೆಸ್ ವಕ್ತಾರೆ ಶೈಲಜಾ ಹಿರೇಮಠ, ಹಿರಿಯರಾದ ಚನ್ನಬಸಯ್ಯಸ್ವಾಮಿ ಸೇರಿದಂತೆ ಖಾಸಗಿ ಶಾಲಾ ಮುಖ್ಯಸ್ಥರು ಉಪಸ್ಥಿತರಿದ್ದರು. ಕನ್ನಡಪರ, ವಿದ್ಯಾರ್ಥಿ ಸಂಘಟನೆಗಳ ಪ್ರಮುಖರು, ರಾಜಕೀಯ ಮುಖಂಡರುಗಳು ಸಲಹೆ-ಸೂಚನೆಗಳನ್ನು ನೀಡಿ ಹೋರಾಟದ ಭಾಗವಾಗಲು ಒಪ್ಪಿದರು.