Breaking News

ನನ್ನ ಕಲ್ಯಾಣ ಮಹೋತ್ಸವಕ್ಕಿಗ ೨೬ ವರ್ಷ

My Kalyan Mahotsava is 26 years old

ಜಾಹೀರಾತು

ಜೂನ ೧೮ ಬಂದರೆ ಸಾಕು ಸತ್ಯಂಪೇಟೆಯ ನನ್ನ‌ಮನೆಯ ಅಂಗಳದಲ್ಲಿ ಶರಣ ಹಕ್ಕಿಗಳ ಕಲರವ. ನಾಡಿನ ಮೂಲೆ ಮೂಲೆಯಿಂದ ಶರಣ ತತ್ವ ಜಿಜ್ಞಾಸುಗಳೆಲ್ಲ ಸೇರಿ ಬಸವಾದಿ ಶರಣರ ಚಿಂತನೆಗಳನ್ನು ಈ ನೆಲದಲ್ಲಿ ಬಿತ್ತುವ ಬಗೆ ಹೇಗೆಂದು ? ಮುಕ್ತವಾಗಿ ಚರ್ಚಿಸುತ್ತಿದ್ದರು. ಪ್ರತಿ ವರ್ಷ ಜೂನ್ ೧೮ ರಂದು ನನ್ನ ಅಜ್ಜ ಗುರಪ್ಪ ಯಜಮಾನರ ಸ್ಮರಣೋತ್ಸವ ನಿಮಿತ್ತ ಅಪ್ಪ ಲಿಂಗಣ್ಣ ಸತ್ಯಂಪೇಟೆ ಅನುಗಾಲದಿಂದ ನಡೆಸಿಕೊಂಡು ಬಂದ ಕಾರ್ಯಕ್ರಮ ಇದಾಗಿತ್ತು.

ನನ್ನ ಅಜ್ಜ ಗುರಪ್ಪ ಯಜಮಾನರು ನನ್ನ ಬಗೆಗೆ ಅತೀವ ಪ್ರೀತಿ,ಮಮತೆ ಹೊಂದಿದ್ದರು. ನನ್ನನ್ನು ಯಾವತ್ತೂ ಹೆಸರಿಡಿದು ಕರೆಯದೆ,”ಸಣ್ಣಪ್ಪ” ಎಂದು ಕರೆಯೋರು. ಅಜ್ಜ ಇರುವವರೆಗೂ ಸತ್ಯಂಪೇಟೆಯೆ ನನಗೆ ಜೀವದಾಯಿ. ಕಾಕ, ಅತ್ತೆ, ಆಯಿ, ಇತ್ಯಾದಿ ಕರುಳ ಬಳ್ಳಿಯ ಕಕ್ಕುಲಾತಿಯಲ್ಲಿ ಬೆಳೆದವನು. ಅಪ್ಪನಿಗಿಂತಲೂ ಅಜ್ಜ – ಕಾಕಂದಿರ ಪ್ರೀತಿಯ ಹಾರೈಕೆ ನನಗೆ.

ಆದ್ದರಿಂದ ಸತ್ಯಂಪೇಟೆಯ ಮನೆ ಪರಿಸರ ಸಂಬಂಧಗಳು ನನಗೆ ಈಗಲೂ ಆಪ್ತವೆ. ನಾನೇ ದುಡುಕಿ ನನ್ನ ಕಾಕಂದಿರ ಮೇಲೆ ಏರಿ ಹೋಗಿದ್ದೇನೆ. ಅವರ ಮೇಲೆ ಹಲ್ಲೆಯನ್ನೂ ಮಾಡಿದ್ದೇನೆ. ಆದರೆ ಅವರು ಎಂಥ ಪ್ರೇಮಮಹಿಗಳೆಂದರೆ ನಾನೇ ನಾಚುವಂತೆ ನನ್ನನ್ನು ಅತೀವವಾಗಿ ಪ್ರೀತಿಸುತ್ತಾರೆ. ಅವರ ಮುಂದೆ ನಾನು ಮಾಡಿದ ತಪ್ಪು ಕೆಲಸಕ್ಕೆ ಮಂಡಿಯೂರಿ ಕೂಡಬೇಕು ಎಂದನ್ನಿಸುತ್ತಲೆ, ಅವರು ನನ್ನನ್ನು ತಮ್ಮ ತೊಡೆಯ ಮೇಲೆರಿಸಿ ಕುಳ್ಳಿರಿಸಿಕೊಳ್ಳಿತ್ತಾರೆ. ಎನ್ನ ತಪ್ಪು ಅನಂತಕೋಟಿ ಅವರ ಸೈರಣೆಗೆ ಲೆಕ್ಕವಿಲ್ಲ.

ಇಂಥ ಅಪ್ಪಟ ಅಪರಂಜಿಗಳ ನಡುವೆ ನನ್ನ ಕಲ್ಯಾಣ ಮಹೋತ್ಸವ ನಡೆದು ೨೬ ವರ್ಷ ಕಳೆದು ಹೋದವು. ಆಡಾಡ್ತ ಆಯುಷ್ಯ ಎನ್ನುವಂತೆ, ವರ್ಷಗಳ ಬಳ ಬಳ ನೀರಿನಂತೆ ಹರಿದು ಹೋದವು. ಅಜ್ಜನ ಪುಣ್ಮಸ್ಮರಣೆಯ ದಿನವೇ ಕಲ್ಯಾಣ ಮಹೋತ್ಸವ ನೆರವೇರಿಸಿಕೊಂಡದ್ದು ಅನೇಕರು ಹುಬ್ಬೇರಿಸುವಂತೆ ಮಾಡಿತ್ತು. ನಮ್ಮ ಕಲ್ಯಾಣ ಮಹೋತ್ಸವದಲ್ಲಿ ಯಾವ ಪುರೋಹಿತನಿಲ್ಲ, ಮಂತ್ರ ತಂತ್ರಗಳಿಲ್ಲ. ಸುಲಿಗೆ ಸುತ್ತಲಿಲ್ಲ, ಮನೆಯ ಮುಂದೆ ಚಪ್ಪರ ಹಾಕಿಸಲಿಲ್ಲ. ದಿನ ವಾರ ತಿಥಿ,ಮಿತಿ ನೋಡಲಿಲ್ಲ. ಎಮ್ಮವರು ಬೆಸಗೊಂಡರು ಶುಭ ಮಹೋತ್ಸವ ನೆರವೆರಿತು.

ನನ್ನ ಕೈಹಿಡಿದು ನಮ್ಮ ಮನೆಗೆ ಬಂದ ಭಾಲ್ಕಿಯ ಸಿದ್ದಲಿಂಗಪ್ಪ ಕಾಕನಾಳೆ ಅವರ ಮಗಳು ಶರಾವತಿ ನನ್ನ ಅಚ್ಚು ಮೆಚ್ಚಿನ ಮನದನ್ನೆ. ಹೆಚ್ಚು ಓದಿಲ್ಲದ, ಕೈಯಲ್ಲಿ ಕಾಸಿಲ್ಲದ ,ಪುಸ್ತಕ ಓದುವ, ಪತ್ರಿಕೆಗೆ ಬರೆಯುವ ಹುಡುಗನ ಕೈ ಹಿಡಿದು ಜೀವನದ ಯಶಸ್ವಿ ಪಯಣ ಮಾಡಿದ್ದಾರೆ. ಯಾವ ನೋವುಗಳಿದ್ದರೂ ನುಂಗಿ ನಗುವುದಷ್ಟೆ ನನ್ನ ಪಾಲಿಗೆ ಬಿಟ್ಟ ಮಡದಿಯ ನಡವಳಿಗೆ, ಸಹನೆಗೆ, ನಿರಪೇಕ್ಷ ನೋಟಕ್ಕೆ ನಾನು ಕೃತಜ್ಞನಾಗಿದ್ದೇನೆ. ಸ್ವರ್ಗಕ್ಕೆ ಕಿಚ್ಚು ಹಚ್ಚುವಷ್ಟು ಉಲ್ಲಸಿತನಾಗಿದ್ದೇನೆ.

ಇದಕ್ಕೆಲ್ಲ ಕಾರಣ ನನ್ನ ಕಾಕ ವಿಶ್ವಾರಾಧ್ಯ ಸತ್ಯಂಪೇಟೆ ಯವರ ಪ್ರೀತಿಯ ಅಪ್ಪುಗೆ. ಅಪ್ಪ ನನಗೆ ಆಲದಮರದಂತೆ ಆಶ್ರಯ ನೀಡಿದರೆ, ಈ ಕಾಕ ತನ್ನ ಕಿರು ನೋಟದಿಂದ ಗಾಢವಾಗಿ ಪ್ರೀತಿಸಬಲ್ಲ. ಮಲ್ಲಿಕಾರ್ಜುನ ಕಾಕನಂತೂ ನಾ ನಡೆದು ಎತ್ತರೆತ್ತರಕ್ಕೆ ಹೋಗುತ್ತಿದ್ದರೆ ಖುಷಿಯಿಂದ ನನ್ನ ಗಮನಿಸಬಲ್ಲ ಅಕ್ಕರತೆಯ ಚಿಲುಮೆ.

ಜೀವನ ವಿಶೇಷ ಕಳೆಯಿಂದ ನಳನಳಿಸುವುದಕ್ಕೆ ಬಹು ಮುಖ್ಯ ಕಾರಣ ಅಪ್ಪ ಬಸವಣ್ಣನವರ ವಚನಗಳು. ವಚನಗಳು ನಾ ಓದದೆ ಇದ್ದಿದ್ದರೆ ನಾನು ಖಂಡಿತ ಬದುಕಿರುತ್ತಿರಲಿಲ್ಲ.‌ ನಾನು ಅಪ್ಪಟ ಬಸವ ಪ್ರೇಮಿ,ಆದರೆ ನೂರಕ್ಕೆ ನೂರು ಕೋಯಿನೂರು ವಜ್ರ ಅಲ್ಲ. ನನ್ನಲ್ಲೂ ಹಲವು ದೋಷಗಳಿವೆ. ತಪ್ಪುಗಳಿವೆ. ಆಗಾಗ ಚೆನ್ನಾಗಿ ಮಾತನಾಡಿದಾಗ ಅಹಂಕಾರಿಯಾಗಿತ್ತೇನೆ. ಆ ಕ್ಷಣವೆ ಎನಗಿಂತ ಕಿರಿಯರಿಲ್ಲ ವಚನ ನೆನಪಾಗಿ ಮತ್ತೆ ಎರೆ ಹುಳುವಾಗಿ ಬಸವ ತತ್ವದ ಬಿತ್ತನೆಗೆ ತೊಡಗುತ್ತೇನೆ.

ಸದಾ ಬಸವ ತತ್ವದ ಮಾತು, ಚರ್ಚೆ, ಪುಸ್ತಕದ ಓದು, ಕಾರ್ಯಕ್ರಮಗಳು ಇದ್ದಾಗಲೂ ನನ್ನ ಕೈ ಹಿಡಿದ ಹೆಂಡತಿ ಶರಾವತಿ ಅಡ್ಡಿ ಬರುವುದಿಲ್ಲ. ಬದಲಾಗಿ ನನಗಿಂತಲೂ ತೀವ್ರವಾಗಿ ಬಸವಾದಿ ಶರಣರ ತತ್ವ ಚಿಂತನೆಗಳನ್ನು ಅಳವಡಿಸಿಕೊಂಡಿದ್ದಾಳೆ. ನಾನು ಹೆಚ್ಚಾಗಿ ಆಕೆಯನ್ನು ಕರಕೊಂಡು ಊರೂರು ಅಡ್ಡಾಡಿದವನಲ್ಲ, ಹೋಟೆಲ ಹೋಟೆಲ ಅಲೆದವನಲ್ಲ. ಬೆಲೆಯುಳ್ಳ ಬಟ್ಟೆ, ಒಡವೆ ವಸ್ತ್ರ ಕೊಡಿಸಿದವನಲ್ಲ. ಆದರೂ ನನ್ನನ್ನು ಪ್ರೀತಿಸುವ ಮಡದಿ ಶರಾವತಿಗೆ ನಾನು ಋಣಿಯಾಗಿರುವೆ.

ಬದುಕಿನ ಪಯಣದಲ್ಲಿ ಅಮೋಘ, ಅಲ್ಲಮರೆಂಬ ಎರಡು ಮುದ್ದಾದ ಮಕ್ಕಳುಂಟು. ಸಾಕಷ್ಟು ಜನ ಬಂಧು ಬಳಗವುಂಟು. ಇದೆಲ್ಲಕ್ಕಿಂತ ಹೆಚ್ಚಾಗಿ ಬಸವ ತತ್ವದ ಒಡೆಯರುಂಟು, ನನ್ನಂಥ ಆಗರ್ಭ ಶ್ರೀಮಂತ ಜಗತ್ತಿನ ಯಾವ ಮೂಲೆಯಲ್ಲೂ ಇಲ್ಲ.

೦ ವಿಶ್ವಾರಾಧ್ಯ ಸತ್ಯಂಪೇಟೆ

About Mallikarjun

Check Also

ಗಂಗಾವತಿ, ಕಾರಟಗಿ ತಾಲೂಕಿನ ಪ್ರಗತಿ ಪರಿಶೀಲನೆ ಸಭೆ

Gangavati, Karatagi taluk progress review meeting ಅರ್ಹ ಫಲಾನುಭವಿಗಳಿಗೆ ಯೋಜನೆಗಳ ತಲುಪಿಸಿಜಿಪಂ ಯೋಜನಾ ನಿರ್ದೇಶಕರಾದ ಪ್ರಕಾಶ ವಿ. ಸೂಚನೆ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.