ಕೊಪ್ಪಳ : ಬಕ್ರೀದ್ ಹಬ್ಬ ಕೇವಲ ಬಲಿದಾನದ
ಅದೊಂದು ಧರ್ಮ ಪರಿಪಾಲನೆಯ ಆಚರಣೆಯಾಗಿದೆ ಎಂದು ಸಮಾಜದ ಧರ್ಮಗುರು ಜನಾಬ ಹಫೀಸ್ ಸಾಬ ಹೇಳಿದರು.
ಬಕ್ರೀದ್ ಹಬ್ಬದ ಅಂಗವಾಗಿ ಪಟ್ಟಣದ ಈದ್ಗಾ ಮೈದಾನದಲ್ಲಿ ಹಮ್ಮಿಕೊಂಡ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಮಾತನಾಡಿ ಈ ಹಬ್ಬವು ಇಸ್ಲಾಮಿನ ಇತಿಹಾಸವನ್ನು ಸ್ಮರಿಸುವ ಮಹತ್ವದ ದಿನವಾಗಿದೆ. ಇಂತಹ ಆಚರಣೆಯಲ್ಲಿ ವಿಶ್ವದ ಎಲ್ಲಾ ಮುಸ್ಲಿಂ ಭಾಂದವರು ತೊಡಗುತ್ತಾರೆ ಎಂದರು.
ನಂತರದಲ್ಲಿ ರಷೀದ್ ಸಾಬ ಹಣಜಗಿರಿ ಮಾತನಾಡಿ ಪ್ರವಾದಿಗಳು ಸಾರಿರುವ ಏಕದೇವತ್ವದ ಸಂದೇಶಕ್ಕೆ ಬದ್ದತೆ ತೋರುವುದು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದು ಸಹೋದರತೆ ಬೆಳಸಿಕೊಳ್ಳುವುದು, ಯಾವುದೇ ತ್ಯಾಗಕ್ಕೂ ಸಿದ್ದರಾಗಿರುವುದು, ಇಂತಹ ಸಂದೇಶಗಳನ್ನು ಈ ಹಬ್ಬ ಸಾರುತ್ತದೆ. ನಮ್ಮ ಎಲ್ಲಾ ಹಬ್ಬಗಳನ್ನು ಇಲ್ಲಿನ ಹಿಂದೂಗಳ ಜೊತೆಗೂಡಿ ಐಕ್ಯತೆಯಿಂದ ಆಚರಿಸಿಕೊಂಡು ಬರಲಾಗುತ್ತದೆ ಎಂದರು.
ಸಾಮೂಹಿಕ ಪ್ರಾರ್ಥನೆ ನಂತರದಲ್ಲಿ ಸಮಾಜದ ಅಭಿವೃದ್ಧಿಗಾಗಿ ಮಾಜಿ ತಾಲೂಕು ಪಂಚಾಯತಿ ಅಧ್ಯಕ್ಷರಾದ ಕಳಕಪ್ಪ ಕಂಬಳಿಯವರು 1 ಲಕ್ಷ ರೂ. ಗಳನ್ನು ನೀಡುವದಾಗಿ ಘೋಷಿಸಿದರು.
ನಂತರ ಎಲ್ಲಾ ಮುಸ್ಲಿಂ ಭಾಂದವರು ಹಾಗೂ ಹಿಂದುಗಳು ಹಬ್ಬದ ಶುಭಾಶಯ ವಿನಿಮಯ ಮಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ರಷೀದ್ ಉಮಚಗಿ, ರಫೀಸಾಬ ಹಿರ್ಯಾಳ, ನೂರುದ್ದಿನ ಗುಡಿಹಿಂದಲ್, ದಸ್ತಗಿರಸಾಬ ಗದ್ವಾಲ್, ಮುಸ್ತಪ ಕೊಪ್ಪಳ, ತಸ್ಲಿಂ ಡಂಬಳ, ಗುಡುಸಾಬ ಮಕಾಂದರ್, ಖಾಸಿಂಸಾಬ ತಳಕಲ್. ಬಾಬಾ ಗದ್ವಾಲ್, ಖಾಸಿಂಸಾಬ ಚೋಕಾಲಿ, ಕಳಕಪ್ಪ ಕಂಬಳಿ, ಈಶಪ್ಪ ಶಿರೂರ, ರುದ್ರಪ್ಪ ಭಂಡಾರಿ, ಅನಿಲ್ ಕುಮಾರ್ ಇನ್ನಿತರರು ಇದ್ದರು.
ಹಬ್ಬದ ಅಂಗವಾಗಿ ಈದ್ಗಾ ಮೈದಾನಕ್ಕೆ ಪಿಐ. ಟಿ.ಗುರುರಾಜ ಸೂಕ್ತ ಪೋಲಿಸ್ ಬಿಗಿ ಬಂದೋಬಸ್ತ ಒದಗಿಸಿದ್ದರು.