Breaking News

ಚಿಂತಕ ಪಿ.ಎನ್. ಗೋಪಿಕೃಷ್ಣನ್ ಕಳವಳಸಾಹಿತಿಗಳ ದನಿ ಹತ್ತಿಕ್ಕುವ ಪ್ರಯತ್ನ

ಕೊಪ್ಪಳ, ಮೇ 26, 2024:ತುರ್ತು ಪರಿಸ್ಥಿತಿ ಒಂದು ಕಾಲದಲ್ಲಿ ಲೇಖಕರು ಮತ್ತು ಜನರನ್ನು ಕಂಗಾಲು ಮಾಡಿತ್ತು. ಆದರೆ ಈಗ ಅಘೋಷಿತ ತುರ್ತು ಪರಿಸ್ಥಿತಿ ಇದ್ದು ಸಾಹಿತಿಗಳ ದನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಕೇರಳದ ಕವಿ ಮತ್ತು ಚಿಂತಕ ಪಿ.ಎನ್. ಗೋಪಿಕೃಷ್ಣನ್ ಕಳವಳ ವ್ಯಕ್ತಪಡಿಸಿದರು.
ಇಲ್ಲಿನ ಶಿವಶಾಂತವೀರ ಮಂಗಲ ಭವನದಲ್ಲಿ ‘ಮೇ ಸಾಹಿತ್ಯ ಮೇಳ’ದ ಎರಡನೇ ದಿನ ಭಾನುವಾರ ಬೆಳಿಗ್ಗೆ ನಡೆದ ‘ಕವಿಗೋಷ್ಠಿ’ಯಲ್ಲಿ ಅವರು ಆಶಯ ಭಾಷಣ ಮಾಡಿದರು. ಸಮಾಜದಲ್ಲಿ ಮನುಷ್ಯನಿಗೆ ಒಂದು ಘನತೆ ಇದೆ. ಆ ಘನತೆಯ ಬಗ್ಗೆ ಅಂಬೇಡ್ಕರ್ ರೂಪಿಸಿದ ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಕಾಲದಲ್ಲಿ ಮಾನವನ ಘನತೆಯನ್ನು ಕುಗ್ಗಿಸುವ ಪ್ರಯತ್ನಗಳು ನಡೆದಿವೆ. ಅದರಲ್ಲೂ ಪ್ರಗತಿಪರ ಚಿಂತಕರನ್ನು ಹತ್ತಿಕ್ಕಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಎಂ.ಎಂ. ಕಲಬುರ್ಗಿ, ಧಾಬೊಳ್ಕರ್ ಮತ್ತು ಗೌರಿ ಲಂಕೇಶ್ ಕುರಿತು ಪ್ರಸ್ತಾಪಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಚ್.ಎಲ್. ಪುಷ್ಪಾ ಮಾತನಾಡಿ, ಈ ತಲೆಮಾರು ಅನುಭವಿಸುತ್ತಿರುವ ಸಂಕಷ್ಟ, ನೋವು ನಲಿವು ಹಿಡಿದಿಡುವ ಪ್ರಯತ್ನವನ್ನು ಕವಿತೆಗಳು ಮಾಡಿವೆ ಎಂದರು.
“ಸಾಹಿತ್ಯವು ಬರೀ ಮನರಂಜನೆಗಾಗಿ ಅಲ್ಲ; ಪ್ರಗತಿಪರ ಚಿಂತನೆಗಳನ್ನು ಜನರ ಮುಂದಿಡಲು ಅದು ಬಳಕೆಯಾಗಬೇಕು” ಎಂದ ಅವರು, ಈ ಹಿನ್ನೆಲೆಯಲ್ಲಿ ನೋಡಿದಾಗ ಹೊಸ ಚಿಂತನೆಗಳಿಂದ ತುಂಬಿದ್ದ ಕವನಗಳು ಹೋರಾಟದ ಚಿಂತನೆಗಳನ್ನು ಬಿಂಬಿಸಿವೆ ಎಂದು ವಿಶ್ಲೇಷಿಸಿದರು.

ಜಾಹೀರಾತು

ಕವಿಗೋಷ್ಠಿ:
ನಂತರ ನಡೆದ ಕವಿಗೋಷ್ಠಿಯಲ್ಲಿ ಹಲವು ಕವಿಗಳು ಪದ್ಯ ವಾಚಿಸಿದರು. ಶೋಷಣೆ, ಧರ್ಮ, ಜಾತಿ ದ್ವೇಷ, ರಾಜಕಾರಣ, ಲಿಂಗತ್ವ ಅಲ್ಪಸಂಖ್ಯಾತ ಸಂವೇದನೆ, ಅಭಿವ್ಯಕ್ತಿ ಸ್ವಾತಂತ್ರ್ಯ ಇನ್ನಿತರ ಸಂಗತಿಗಳು ಕವಿಗಳ ದನಿಯಲ್ಲಿ ವ್ಯಕ್ತವಾದವು.
ಮೈಸೂರಿನ ದೀಪಾ ಬುದ್ಧೆ, ಮಂಗಳೂರಿನ ವಿಲ್ಸನ್ ಕಟೀಲು, ಹೂವಿನಹಡಗಲಿಯ ರಾಮಪ್ಪ ಮಾದರ, ಹೊಸಪೇಟೆಯ ಅಂಜಲಿ ಬೆಳಗಲ್, ವಿಶಾಲ ಮ್ಯಾನ್ಸರ್, ಕಲಬುರ್ಗಿಯ ಪೂಜಾ ಸಿಂಗೆ, ಶಿರುಗುಪ್ಪದ ವಿ. ಹರಿನಾಥಬಾಬು, ಅಳವಂಡಿಯ ಮೆಹಬೂಬ್ ಮಠದ, ಕಲಬುರ್ಗಿಯ ಪ್ರಿಯಾಂಕ ಮಾವಿನಕರ, ಕೊಪ್ಪಳದ ಹಲಗೇರಿಯ ರಮೇಶ ಬನ್ನಿಕೊಪ್ಪ, ಇಲಕಲ್ಲಿನ ಮುರ್ತುಜಾ ಬೇಗಂ ಕೊಡಗಲಿ, ದಾವಣಗೆರೆಯ ಹೊನ್ನಾಳಿಯ ಸದಾಶಿವ ಸೊರಟೂರ, ಕೊಡಗಿನ ಕೆ.ಜಿ.ರಮ್ಯ, ಬೆಳಗಾವಿಯ ಕಿತ್ತೂರಿನ ಸಿದ್ಧರಾಮ ತಳವಾರ, ಬಾಗಲಕೋಟೆಯ ರನ್ನಬೆಳಗಲಿಯ ಸುರೇಶ ರಾಜಮಾನೆ, ಚಂದ್ರಪ್ರಭಾ ಬಾಗಲಕೋಟ, ಕೊಪ್ಪಳದ ಮಹೇಶ ಬಳ್ಳಾರಿ ಕವಿತೆಗಳನ್ನು ವಾಚಿಸಿದರು.
-೦-

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.