ಐಸಿಎಸ್ಐ ಬೆಂಗಳೂರು ಚಾಪ್ಟರ್ ನಿಂದ “ಪರಿಸರ, ಸಾಮಾಜಿಕ ಆಡಳಿತ” ಕುರಿತ ಸಮಾವೇಶ
ಬೆಂಗಳೂರು; “ಪರಿಸರ, ಸಾಮಾಜಿಕ ಆಡಳಿತ”ಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾದರಿಯಾಗಿದ್ದು, ಸೂಕ್ತ ನೀಲ ನಕ್ಷೆ, ನಿರಂತರ ಪ್ರಯತ್ನಗಳ ಪರಿಣಾಮಗಳಿಂದಾಗಿ ಪರಿಸರ ಸ್ನೇಹಿ ಮತ್ತು ಸುಸ್ಥಿರ ಆಡಳಿತ ಜಾರಿಗೊಳಿಸಲು ಸಾಧ್ಯವಾಗಿದೆ ಎಂದು ಬಿಐಎಎಲ್ ನ ಪರಿಸರ, ಸಾಮಾಜಿಕ ಮತ್ತು ಆಡಳಿತ ವಿಭಾಗದ ಮುಖ್ಯಸ್ಥ ಎಲ್. ಶ್ರೀಧರ್ ಹೇಳಿದ್ದಾರೆ.
ದಿ ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರೀಸ್ ಆಫ್ ಇಂಡಿಯಾದ ಬೆಂಗಳೂರು ಚಾಪ್ಟರ್ ಹಾಗೂ ಐಎಂಎ ನಿಂದ ಆಯೋಜಿಸಲಾದ “ಪರಿಸರ, ಸಾಮಾಜಿಕ ಆಡಳಿತ” ಕುರಿತ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, 2030 ರ ಎಸ್.ಡಿ.ಜಿ ಗುರಿಗಳನ್ನು ತಲುಪುವ ನಿಟ್ಟಿನಲ್ಲಿ ಕೋವಿಡ್ ಸಂದರ್ಭದಲ್ಲಿ ದೃಢ ನಿರ್ಧಾರ ಕೈಗೊಳ್ಳಲಾಯಿತು. ಇದರ ಪರಿಣಾಮ ಶೇ 100 ರಷ್ಟು ನವೀಕೃತ ಇಂಧನ ವ್ಯವಸ್ಥೆ ಅಳವಡಿಸಿಕೊಂಡಿದ್ದು, ಮಳೆ ನೀರು ಸಂಗ್ರಹದ ಮೂಲಕ ಮೂರನೇ ಎರಡರಷ್ಟು ಶುದ್ಧ ಕುಡಿಯುವ ನೀರು ಬಳಕೆ ಮಾಡಲಾಗುತ್ತಿದೆ. ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ಮಳೆ ನೀರನ್ನೇ ಕುಡಿಯುವ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತೇವೆ. ಉದ್ಯಾನವನಗಳಿಗೆ ಎರಡು ಪಟ್ಟಿಗೂ ಹೆಚ್ಚಿನ ಪ್ರಮಾಣದ ನೀರನ್ನು ಬಳಕೆ ಮಾಡುವ ಸಾಮರ್ಥ್ಯ ವೃದ್ಧಿಸಿಕೊಂಡಿದ್ದೇವೆ. 2017 ರಿಂದಲೇ ಇಂಗಾಲ ಹೊರ ಸೂಸುವಿಕೆಯಲ್ಲಿ ವಿಮಾನ ನಿಲ್ದಾಣ ಶೂನ್ಯ ಸಹಿಷ್ಣುತೆಯನ್ನು ಅಳವಡಿಸಿಕೊಂಡಿದೆ ಎಂದರು.
ಸುಸ್ಥಿರ ಸಂಗ್ರಹಣೆಯಲ್ಲಿಯೂ ಬಿಐಎಎಲ್ ಮಹತ್ವದ ಸಾಧನೆ ಮಾಡಿದ್ದು, ಉತ್ಪನ್ನಗಳ ಮಾರಾಟ, ಪ್ಯಾಕೇಜಿಂಗ್ ವಲಯದಲ್ಲಿ ಪರಿಸರ ಸ್ನೇಹಿ ಕ್ರಮಗಳನ್ನು ಕೈಗೊಂಡಿದೆ. ಸಾಕಷ್ಟು ಸರ್ಕಾರಿ ಶಾಲೆಗಳನ್ನು ದತ್ತುಪಡೆದು ನೀರು, ವಿದ್ಯುತ್ ಸೇರಿದಂತೆ ಪ್ರತಿಯೊಂದು ವಲಯದಲ್ಲೂ ಪರಿಸರ ಸ್ನೇಹಿ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿದ್ದೇವೆ. ಉದ್ಯೋಗಿಗಳು, ಸಮುದಾಯ, ಪಾಲುದಾರರ ಬದ್ಧತೆ, ಆಡಳಿತ ವ್ಯವಸ್ಥೆಯ ಸ್ಥಿರತೆಯಿಂದ ಇವೆಲ್ಲವೂ ಸಾಧ್ಯವಾಗಿದೆ. ವರ್ತನೆಯಲ್ಲೂ ಗಣನೀಯ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಇತರೆ ವಲಯಗಳ ಯಶೋಗಾಥೆಗಳನ್ನು ಅಳವಡಿಸಿಕೊಂಡರೆ ಸುಸ್ದಿರ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಎಲ್. ಶ್ರೀಧರ್ ಬಲವಾಗಿ ಪ್ರತಿಪಾದಿಸಿದರು.
ನೋಡ್ವಿನ್ ಗೇಮಿಂಗ್ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಸಿ.ಎ. ಕರಣ್ ದೀಪ್ ಸಿಂಗ್ ಮಾತನಾಡಿ, ಗಾಳಿ, ನೀರು, ಭೂಮಿಗೆ ಧಾರ್ಮಿಕ ವಲಯದಲ್ಲಿ ಗುರು, ತಂದೆ ಮತ್ತು ತಾಯಿಯ ಸ್ಥಾನ ನೀಡಲಾಗಿದೆ. ಪರಿಸರ, ಸಾಮಾಜಿಕ ಆಡಳಿತ ಬದುಕಿನಲ್ಲಿ ನೈತಿಕ ಶಿಕ್ಷಣವಾಗಿ ರೂಪುಗೊಂಡಿದೆ. ಜಗತ್ತಿನಲ್ಲಿ ಕಮ್ಯುನಿಸ್ಟ್ ಆಡಳಿತ ವ್ಯವಸ್ಥೆ ಇದೀಗ ಬಂಡವಾಳ ಶಾಹಿಗಳ ಕೈಗೆ ಸಿಲುಕಿದ್ದು, ಆದ್ಯತೆಗಳು ಕೂಡ ಬದಲಾಗಿವೆ. ಕಾರ್ಪೋರೇಟ್ ವಲಯದಲ್ಲಿ ಇ.ಎಸ್.ಜಿ ಆಡಳಿತಕ್ಕೆ ಸಂಬಂಧಿಸಿದಂತೆ ಶ್ರೇಯಾಂಕ ನೀಡುವ ವರದಿಗಳು ಹಾದಿ ತಪ್ಪಿಸುವಂತಿದ್ದು, ಈ ವಲಯವನ್ನು ಸರಿಪಡಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಐಸಿಎಸ್ಐನ ಬೆಂಗಳೂರು ಚಾಪ್ಟರ್ ಅಧ್ಯಕ್ಷರಾದ ವೆಂಕಟ ಸುಬ್ಬಾರಾವ್ ಕಲ್ವಾ ಮಾತನಾಡಿ, ಪರಿಸರ, ಸಾಮಾಜಿಕ ಆಡಳಿತ ವ್ಯವಸ್ಥೆಯಲ್ಲಿ ಕಂಪೆನಿ ಸೆಕ್ರೇಟರೀಸ್ ಗಳ ಪಾತ್ರ ಮಹತ್ವದ್ದಾಗಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ಸುಸ್ಥಿರ ಜಗತ್ತನ್ನು ನಿರ್ಮಿಸಲು ಸೂಕ್ತ ಆಡಳಿತ ವ್ಯವಸ್ಥೆ ಅಗತ್ಯವಾಗಿದೆ ಎಂದು ಹೇಳಿದರು.
ಐಸಿಎಸ್ಐನ ಬೆಂಗಳೂರು ಚಾಪ್ಟರ್ ಕಾರ್ಯದರ್ಶಿ ವಿಶ್ವಾಸ್ ಹೆಗಡೆ, ಎಸ್ಐಆರ್ ಸಿ ಅಧ್ಯಕ್ಷರಾದ ಪ್ರದೀಪ್ ಬಿ ಕುಲಕರ್ಣಿ, ಕೇಂದ್ರೀಯ ಮಂಡಳಿ ಸದಸ್ಯರಾದ ಸಿ. ದ್ವಾರಕಾನಾಥ್, ಐಎಂಎ ಮಾಜಿ ಅಧ್ಯಕ್ಷರಾದ ವಿ. ಗುರುಪ್ರಸಾದ್, ಐಎಂಎ ಇಂಡಿಯಾದ ಹಿರಿಯ ವ್ಯವಸ್ಥಾಪಕರಾದ ಫೆನಿಲ್ ವಾಡಕೆನ್ ಮತ್ತಿತರರು ಉಪಸ್ಥಿತರಿದ್ದರು.