
ಗಂಗಾವತಿ.ಮೇ.01: ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಿಂದೂಗಳನ್ನು ಓಲೈಸಿದರೆ, ಕಾಂಗ್ರೆಸ್ ಮುಸ್ಲಿಮರ ಓಟುಗಳಿಗಾಗಿ ತುಚ್ಛ ರಾಜಕಾರಣ ಮಾಡುತ್ತಿವೆ. ದಲಿತ ಹಾಗೂ ಹಿಂದುಳಿದ ಸಮುದಾಯಗಳನ್ನು ಕಡೆಗಣಿಸುತ್ತಿರುವ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಲು, ಸರ್ವ ಸಮುದಾಯಗಳ ಏಳ್ಗೆಗಾಗಿ ಮತದಾರರು ಬಿಎಸ್ಪಿಯನ್ನು ಬೆಂಬಲಿಸಬೇಕು ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಎಸ್ಪಿ ನಿಯೋಜಿತ ಅಭ್ಯರ್ಥಿ ಶಂಕರ್ ಸಿದ್ದಾಪುರ ತಿಳಿಸಿದರು.
ಕೊಪ್ಪಳ ಜಿಲ್ಲಾ ವ್ಯಾಪ್ತಿಯ ಗಿಣಿಗೇರ, ಬಗನಾಳ, ಲಿಂಗದಳ್ಳಿ ಇನ್ನಿತರ ಕಡೆ ಅಬ್ಬರದ ಪ್ರಚಾರ ಕೈಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ಹಡಗಿನ ಪ್ರಯಾಣಿಕರು. ದೇಶದ ಜನರ ಸಮಸ್ಯೆ, ಸಂಕಷ್ಟಗಳ ಬಗ್ಗೆ ಅರಿವಿಲ್ಲ. ಕೇವಲ ಮತ ರಾಜಕೀಯದಲ್ಲಿ ತೊಡಗಿವೆ. ಅಧಿಕಾರಕ್ಕಾಗಿ ತಾವೇ ಸಮಸ್ಯೆಗಳನ್ನು ಸೃಷ್ಟಿಸಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಾರೆ. ನಂತರ ನಮ್ಮಿಂದಲೇ ಪರಿಹಾರ ಸಾಧ್ಯ ಎಂದು ಜನರನ್ನು ಮೂರ್ಖರನ್ನಾಗಿಸುವ ಪ್ರಯತ್ನದಲ್ಲಿದ್ದಾರೆ. ಕಾಲ ಬದಲಾಗಿದೆ, ಜನ ಬುದ್ದಿವಂತರಾಗಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ಪಾಠ ಕಲಿಸಲು ತೀರ್ಮಾನಿಸಿದ್ದಾರೆ. ಅಕ್ಕ ಮಾಯಾವತಿ ಪ್ರಧಾನಿ ಆಗುವ ದಿನಗಳು ದೂರವಿಲ್ಲ. ಜನಹಿತ ಕಾಯುವ ದೂರದೃಷ್ಟಿಯ ಯೋಜನೆಗಳನ್ನು ಬಿಎಸ್ಪಿ ರೂಪಿಸಿದ್ದು, ದೇಶದ ಸರ್ವ ಸಮುದಾಯಗಳ ಹಿತಕಾಯಲು ಬದ್ಧವಾಗಿದೆ. ಜಾತಿಬೇಧವಿಲ್ಲದೆ ಸರ್ವಜನಾಂಗದ ಶಾಂತಿಯ ತೋಟದಂತೆ ಭಾರತ ವಿಶ್ವದಾದ್ಯಂತ ಪ್ರಜ್ವಲಿಸುವ ಆಶಯ ಹೊಂದಿದೆ. ಕೇವಲ ಧರ್ಮ, ಜಾತಿ ರಾಜಕೀಯ ಮಾಡುತ್ತಾ ಕೋಮು ದ್ವೇಷ ಬಿತ್ತುವ ಬಿಜಿಪಿ, ಕಾಂಗ್ರೆಸ್ ನ ನಿರಂಕುಶ ಆಡಳಿತಕ್ಕೆ ಕಡಿವಾಣ ಹಾಕಲು ಮತದಾರರು ಬಿಎಸ್ಪಿಯನ್ನು ಬೆಂಬಲಿಸಿ, ಆನೆ ಗುರುತಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಬಿ.ಎಸ್.ಪಿ ರಾಜ್ಯ ಕಾರ್ಯದರ್ಶಿ MK ಜಗ್ಗೇಶ ಮೌರ್ಯ, ಕೊಪ್ಪಳ ಜಿಲ್ಲಾ ಉಸ್ತುವಾರಿ ಹುಲಿಗೇಶ್ ದೇವರಮನಿ, ದುರ್ಗೇಶ ಸಿಂಗಾಪುರ, ನಿಂಗಪ್ಪ ನಾಯಕ್, ಶಿವಣ್ಣ ಇಳಿಗನೂರ್, ಬಸವರಾಜ್ ಇಳಿಗನೂರ್, ಮೂರ್ತಿ ಸಂಗಾಪುರ, ಹುಸೇನಪ್ಪ ಸಿದ್ದಾಪುರ, ಭೀಮರಾಯ ಕಾಟಾಪುರ, ಭೀಮಪ್ಪ ಮೈಲಾಪುರ, ಮಂಜು ಸಿದ್ದಾಪುರ ಇನ್ನಿತರ ಪ್ರಮುಖರು ಪಾಲ್ಗೊಂಡು ಮತ ಯಾಚಿಸಿದರು.