
ಗಂಗಾವತಿ :ನಗರಸಭೆಯ ಅಧಿಕಾರಿಗಳ ನಿರ್ಲಕ್ಷದ ಪರಿಣಾಮ ಇಂದಿರಾನಗರ ನಿವಾಸಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿದೆ. ಇಡೀ ಒಎಸ್ ಬಿ ರಸ್ತೆಯ ಕಸವನ್ನು ಗೂಡಿಸಿ ಕಸ ಹಾಗೂ ಘನತ್ಯಾಜ್ಯವನ್ನು ಇಂದಿರಾನಗರದ ಹಳೆಯ ಮಲ್ಲಿಕಾರ್ಜುನ ಟಾಕೀಸ್ ಬಯಲಿನಲ್ಲಿ ಹಾಕಿ ನಗರಸಭೆಯವರು ಪ್ರತಿನಿತ್ಯ ಬೆಂಕಿ ಹಚ್ಚುವುದರಿಂದ ಇದರ ಹೊಗೆ ಮತ್ತು ವಿಷಯುಕ್ತ ಗಾಳಿ ಸೇವನೆಯನ್ನು ಇಡೀ ಇಂದಿರಾನಗರದ ನಿವಾಸಿಗಳು ಮತ್ತು ಇಲ್ಲಿಯ ವ್ಯಾಪಾರಸ್ಥರು ಸೇವನೆ ಮಾಡುವುದು ಸಾಮಾನ್ಯವಾಗಿದೆ. ಕಸವನ್ನು ಇಲ್ಲಿ ಹಾಕದಂತೆ ಮತ್ತು ಈ ಜಾಗಕ್ಕೆ ಸುತ್ತಲೂ ಕಾಂಪೌಂಡ್ ನಿರ್ಮಿಸಿ ಬೀಗ ಹಾಕುವಂತೆ ಸ್ಥಳೀಯರು ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಮಲ್ಲಿಕಾರ್ಜುನ ಟಾಕೀಸ್ ಜಾಗವನ್ನು ಕೆಲವು ವ್ಯಾಪಾರಿಗಳು ಖರೀದಿ ಮಾಡಿದ್ದು ಬಯಲು ಜಾಗವನ್ನು ಹಾಗೇ ಬಿಟ್ಟಿರುವುದರಿಂದ ಇಲ್ಲಿ ಸಾರ್ವಜನಿಕರು ಹಾಗೂ ನಗರಸಭೆಯವರು ಕಸ ಹಾಗೂ ತ್ಯಾಜ್ಯ ಹಾಕುತ್ತಿದ್ದಾರೆ. ಕೂಡಲೇ ನಿಲ್ಲಿಸದಿದ್ದರೆ ನಗರಸಭೆಗೆ ಮುತ್ತಿಗೆ ಹಾಕಿ ಇಲ್ಲಿ ಹಾಕಿದ ಕಸ ಹಾಗೂ ತ್ಯಾಜ್ಯವನ್ನು ನಗರಸಭೆ ಮುಂದೆ ಸುರಿದು ಬೆಂಕಿ ಹಚ್ಚಲಾಗುತ್ತದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ